ಪದ್ಯ ೪೩: ಭೀಮನನ್ನು ತಡೆಯಲು ಯಾರು ಎದುರು ಬಂದರು?

ಭಾರಿಯಂಕವು ದಳಪತಿಗೆ ಪಡಿ
ಸಾರಿಕೆಯ ಭಟರಿಲ್ಲಲಾ ಪರಿ
ವಾರಕಿದು ಪಂಥವೆ ಎನುತ ಕುರುರಾಯ ಮೂದಲಿಸೆ
ಕೂರಲಗಿನಂಬುಗಿದು ಬಳಿಯ ಮ
ಹಾರಥರ ಕೈವೀಸಿ ರವಿಸುತ
ಸಾರೆನುತ ಕೆಣಕಿದನು ದುಶ್ಯಾಸನನು ಪವನಜನ (ಕರ್ಣ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮ ಕರ್ಣರ ಯುದ್ಧವನ್ನು ನೋಡಿದ ದುರ್ಯೋಧನನು ನಮ್ಮ ಸೇನಾಧಿಪತಿಗೆ ಭಾರಿ ಕಾಳಗ ಬಿದ್ದಿವೆ. ಅವನ ಸಹಾಯಕ್ಕೆ ಯಾರೂ ಇಲ್ಲ, ಅವನ ಸಹಾಯಕ್ಕೆ ಹೋಗಬಾರದೆಂಬ ಪ್ರತಿಜ್ಞೆಯನ್ನೇನಾದರೂ ಮಾಡಿರುವಿರಾ? ಎಂದು ಕೌರವನು ತನ್ನವರನ್ನು ಮೂದಲಿಸಿದಲು, ಕರ್ಣ, ಪಕ್ಕಕ್ಕೆ ಸರಿ ಎಂದು ಮಹಾರಥರನ್ನು ಕೈಬೀಸಿಕರೆದು ದುಶ್ಯಾಸನನು ಭೀಮನನ್ನು ತಡೆದನು.

ಅರ್ಥ:
ಭಾರಿ: ದೊಡ್ಡದಾದ, ಭಯಂಕರ; ಅಂಕ: ಕಾಳಗ; ದಳಪತಿ: ಸೈನ್ಯ; ಪಡಿಸಾರಿಕೆ: ಪ್ರತಿಭಟಿಸುವಂತ; ಭಟ: ಸೈನಿಕರು; ಪರಿವಾರ: ಸುತ್ತಲಿನವರು, ಪರಿಜನ; ಪಂಥ: ಸ್ಪರ್ಧೆ; ರಾಯ: ರಾಜ; ಮೂದಲಿಸು: ಹಂಗಿಸು; ಕೂರಲಗು: ಹರಿತವಾದ ಬಾಣ; ಅಂಬು: ಬಾಣ; ಬಳಿ: ಹತ್ತಿರ; ಮಹಾರಥ: ಪರಾಕ್ರಮಿ; ಕೈ: ಕರ; ವೀಸಿ: ಬೀಸು, ತೂಗುವಿಕೆ; ರವಿಸುತ: ಸೂರ್ಯನ ಮಗ (ಕರ್ಣ); ಸಾರು: ಪಕ್ಕಕ್ಕೆ ಸರಿ; ಕೆಣಕು: ಪ್ರಚೋದಿಸು; ಪವನಜ: ಭೀಮ;

ಪದವಿಂಗಡಣೆ:
ಭಾರಿ+ಅಂಕವು +ದಳಪತಿಗೆ +ಪಡಿ
ಸಾರಿಕೆಯ +ಭಟರಿಲ್ಲಲ್+ಆ+ ಪರಿ
ವಾರಕಿದು +ಪಂಥವೆ +ಎನುತ +ಕುರುರಾಯ +ಮೂದಲಿಸೆ
ಕೂರಲಗಿನ್+ಅಂಬುಗಿದು +ಬಳಿಯ +ಮ
ಹಾರಥರ +ಕೈವೀಸಿ +ರವಿಸುತ
ಸಾರೆನುತ+ ಕೆಣಕಿದನು +ದುಶ್ಯಾಸನನು +ಪವನಜನ

ಪದ್ಯ ೯೧: ಜರಾಸಂಧ ಭೀಮರು ಕಾಳಗಕ್ಕೆ ಹೇಗೆ ಸಿದ್ಧರಾದರು?

ಅಂಕಕಿಬ್ಬರು ಭಟರು ತಿಲಕಾ
ಲಂಕರಣ ಶೋಭೆಯಲಿ ರಣನಿ
ಶ್ಶಂಕರನುವಾದರು ಸುಕರ್ಪುರ ವೀಳೆಯಂಗೊಂಡು
ಬಿಂಕದುಬ್ಬಿನ ರೋಮ ಪುಳಕದ
ಮುಂಕುಡಿಯ ಸುಮ್ಮಾನದಂಕೆಯ
ಝಂಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ (ಸಭಾ ಪರ್ವ, ೨ ಸಂಧಿ, ೯೧ ಪದ್ಯ)

ತಾತ್ಪರ್ಯ:
ಯುದ್ಧದ ರಂಗಕ್ಕೆ ಇಬ್ಬರು ಯೋಧರು ಹಣೆಗೆ ತಿಲಕವನ್ನಿಟ್ಟು ಅಲಂಕಾರ ಮಾಡಿಕೊಂಡರು. ಆ ಯುದ್ಧದ ವೇಷದಲ್ಲಿ ಶೋಭಿಸುತ್ತಿದ್ದ ಇಬ್ಬರು ಕರ್ಪುರವೀಳೆಯನ್ನು ಮೆಲ್ಲುತ್ತಾ ಸಿದ್ಧರಾದರು. ಯುದ್ಧದಲ್ಲಿ ತಮಗೆ ಜಯ ಎಂದು ನಂಬಿದ್ದರು, ಇಬ್ಬರಿಗೂ ಸೋಲಿನ ಅನುಮಾನವೇ ಇಲ್ಲ. ತಮ್ಮ ಶಕ್ತಿಯನ್ನು ಕುರಿತು ಆತ್ಮವಿಶ್ವಾಸದಿಂದ ಇಬ್ಬರೂ ರೋಮಾಂಚನಗೊಂಡಿದ್ದರು. ಗೆಲುವಿನ ಸಂತೋಷವನ್ನು ಮಿತಿಯಲ್ಲಿಟ್ಟುಕೊಂಡು ಗರ್ಜಿಸಿದರು.

ಅರ್ಥ:
ಅಂಕ: ಯುದ್ಧ; ಭಟ: ಯೋಧ; ತಿಲಕ: ಹಣೆ ಮೇಲಿಡುವ ಬೊಟ್ಟು; ಅಲಂಕರಣ: ಶೃಂಗರಿಸು; ಶೋಭೆ: ಹೊಳಪು, ಚೆಲುವು; ರಣ: ಯುದ್ಧ; ನಿಶ್ಶಂಕ: ನಿಸ್ಸಂದೇಹ; ಅನು: ತಯಾರು; ಕರ್ಪುರ: ಸುಗಂಧ ದ್ರವ್ಯ; ವೀಳೆ: ಎಲೆ; ಬಿಂಕ:ಸೊಕ್ಕು, ಠೀವಿ; ಉಬ್ಬು: ಹಿಗ್ಗು, ಗರ್ವಿಸು; ರೋಮ: ಕೂದಲು; ಪುಳಕ: ರೋಮಾಂಚನ; ಮುಂಕಣಿ: ಮುಂದುವರೆ; ಸುಮ್ಮಾನ: ಅಹಂಕಾರ, ಗರ್ವ; ಝಂಕೆ: ಕೂಗು, ಧ್ವನಿ; ಭರ:ಹೆಚ್ಚಳ, ವೇಗ; ಭುಲ್ಲವಿಸು: ಹುಮ್ಮಸ್ಸಿನಿಂದ ಕೂಡಿರು;

ಪದವಿಂಗಡಣೆ:
ಅಂಕಕ್+ಇಬ್ಬರು +ಭಟರು +ತಿಲಕ
ಅಲಂಕರಣ+ ಶೋಭೆಯಲಿ +ರಣ+ನಿ
ಶ್ಶಂಕರ್+ಅನುವಾದರು +ಸುಕರ್ಪುರ +ವೀಳೆಯಂಗೊಂಡು
ಬಿಂಕದ್+ಉಬ್ಬಿನ +ರೋಮ +ಪುಳಕ
ಮುಂಕುಡಿಯ +ಸುಮ್ಮಾನದ್+ಅಂಕೆಯ
ಝಂಕೆಗಳ+ ಭರ+ ಭುಲ್ಲವಿಸಿದುದು +ಭೀಮ +ಮಾಗಧರ

ಅಚ್ಚರಿ:
(೧) ಯೋಧರ ಸಿದ್ಧತೆ: ಬಿಂಕದುಬ್ಬಿನ ರೋಮ ಪುಳಕದ ಮುಂಕುಡಿಯ ಸುಮ್ಮಾನದಂಕೆಯ ಝಂಕೆಗಳ ಭರ ಭುಲ್ಲವಿಸಿದುದು
(೨) “ಭ” ಕಾರದ ಪದಗಳು – ಭರ ಭುಲ್ಲವಿಸಿದುದು ಭೀಮ
(೩) ಅಂಕ, ಬಿಂಕ; ಅಂಕೆ, ಝಂಕೆ – ಪ್ರಾಸ ಪದ – ೧, ೪ ಸಾಲು; ೫, ೬ ಸಾಲು

ಪದ್ಯ ೭: ಸ್ವಯಂವರದಲ್ಲಿದ್ದ ರಾಜರು ಏತಕ್ಕೆ ಕಾತುರಗೊಂಡರು?

ಅಂಕೆಯಿದು ಪಾರ್ಥಿವರ ವಿಭವಾ
ಲಂಕೃತಿಯನದನೇನಹೇಳುವೆ
ನಂಕವಿದು ಕಳನೇರಿತಾಹವವೆನಗೆ ತನಗೆನುತ
ಶಂಕರಾರಿಯ ಮಸೆದಲಗು ಮಾ
ರಂಕದುಬ್ಬಿನ ಜಂಕೆಯಂಕೆಯ
ಬಿಂಕವನು ವಿಸ್ತರಿಸುವೆನು ನರನಾಥ ಕೇಳೆಂದ (ಆದಿ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ರಾಜರ ದರ್ಪ, ವೈಭವ, ಅಲಂಕೃತರಾದ ಅವರ ಸೊಬಗು ಏನೆಂದು ಹೇಳಲಿ, ಇದೊಂದು ಸ್ಪರ್ಧೆ, ಈ ಯುದ್ಧದಲ್ಲಿ ಜಯವು ನನಗೆ ಇರಲಿ ಎಂದು ಎಲ್ಲರು ಸಿದ್ಧರಾಗಿದ್ದರು, ಮನ್ಮಥನ ಯುದ್ಧವು ಹತ್ತಿರವಾಗುತ್ತಿದ್ದಂತೆ, ಕಾತರಗೊಂಡ ರಾಜರು ಮನದ ಬಾಣಗಳಿಂದ ಆರ್ತರಾಗಿ ಕುಳಿತಿದ್ದರು, ಇವರ ವಿವರವನ್ನು ಹೇಳುತ್ತೇನೆ, ಕೇಳು ಜನಮೇಜಯ…

ಅರ್ಥ:
ಅಂಕೆ: ದರ್ಪ, ಠೀವಿ, ಗುರುತು; ಪಾರ್ಥಿವ: ರಾಜ; ವಿಭವ: ಸಿರಿ, ಸಂಪತ್ತು, ಹಿರಿಮೆ; ಅಲಂಕೃತ: ಸಿಂಗರಿಸಲ್ಪಟ್ಟ; ಅಂಕ: ಬಿರುದು, ಹೆಸರು, ಸ್ಪರ್ಧೆ; ಕಳ:ಕಳೆ,ಕಾಂತಿ; ಆಹವ: ಯುದ್ಧ, ಕಾಳಗ; ಎನಗೆ: ನನಗೆ; ಶಂಕರ: ಈಶ್ವರ; ಅರಿ: ವೈರಿ; ಶಂಕರಾರಿ: ಮದನ, ಮನ್ಮಥ, ರತೀಶ; ಮಸೆ: ದ್ವೇಷಿಸು, ಹರಿತವಾದ; ಮಾರ: ಕಾಮ, ಮನ್ಮಥ; ಬಿಂಕ: ಜಂಬ, ಠೀವಿ; ಜಂಕೆ: ಗರ್ಜನೆ, ಕೂಗು; ವಿಸ್ತರ: ವಿವರವಾಗಿ; ನರ: ಮನುಷ್ಯ; ನರನಾಥ: ರಾಜ (ಜನಮೇಜಯ);

ಪದವಿಂಗಡಣೆ:
ಅಂಕೆ+ಯಿದು +ಪಾರ್ಥಿವರ +ವಿಭವ
ಅಲಂಕೃತಿಯನದನ್+ಏನ+ಹೇಳುವೆನ್
ಅಂಕ+ವಿದು+ ಕಳನೇರಿತ್+ಆಹವವ್+ಎನಗೆ+ ತನಗೆನುತ
ಶಂಕರಾರಿಯ+ ಮಸೆದಲಗು +ಮಾ
ರಂಕದ್+ಉಬ್ಬಿನ +ಜಂಕೆ+ಯಂಕೆಯ
ಬಿಂಕವನು+ ವಿಸ್ತರಿಸುವೆನು +ನರನಾಥ+ ಕೇಳೆಂದ

ಅಚ್ಚರಿ:
(೧) ಅಂಕೆ, ಅಂಕ – ೪ ಬಾರಿ ಪ್ರಯೋಗ – ಅಂಕೆಯಿದು, ಅಂಕವಿದು, ಯಂಕೆಯ; ಅಂಕದುಬ್ಬಿನ
(೨) ರಾಜನಿಗೆ – ನರನಾಥ; ಮನ್ಮಥನಿಗೆ – ಶಂಕರಾರಿ, ಮಾರ – ಪದಗಳ ಬಳಕೆ
(೩) ಅಂಕೆ, ಬಿಂಕ – ಸಮಾನಾರ್ಥಕ ಪದಗಳು
(೪) ಅಂಕೆ, ಅಲಂಕೃತ, ಶಂಕರ, ಮಾರಂಕ, ಬಿಂಕ, ಅಂಕ – ಅನುಸ್ವಾರದ ಜೊತೆಗೆ “ಕ” ಕಾರದ ಪದಗಳು