ಪದ್ಯ ೨೩: ಉತ್ತರೆಯ ಗರ್ಭವನ್ನು ಯಾವುದು ರಕ್ಷಿಸಲು ಅಣಿಯಾಯಿತು?

ಜಗವ ಹೂಡುವ ಮೇಣ್ ಚತುರ್ದಶ
ಜಗದ ಜೀವರನೂಡಿಯುಣಿಸುವ
ಜಗವನಂತರ್ಭಾವದಲಿ ಬಲಿಸುವ ಗುಣತ್ರಯದ
ಸೊಗಡು ತನ್ನ ಸಹಸ್ರಧಾರೆಯ
ಝಗೆಯೊಳೆನಿಪ ಮಹಾಸುದರ್ಶನ
ಬಿಗಿದು ಸುತ್ತಲು ವೇಢೆಯಾಯ್ತುತ್ತರೆಯ ಗರ್ಭದಲಿ (ಗದಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಜಗತ್ತನ್ನು ಸೃಷ್ಟಿಸಿ, ಹದಿನಾಲ್ಕು ಲೋಕಗಳ ಜೀವರನ್ನು ಸಲಹುವ, ಸಂಹರಿಸುವ ಮಾಯೆಯ ತ್ರಿಗುಣಗಲ ವಾಸನೆಯನ್ನು ತನ್ನ ಸಾವಿರ ಧಾರೆಗಳ ಬೆಳಕಿನಲ್ಲಿ ಧರಿಸುವ ಸುದರ್ಶನ ಚಕ್ರವು ಉತ್ತರೆಯ ಗರ್ಭವನ್ನಾವರಿಸಿ ರಕ್ಷಿಸಲನುವಾಯಿತು.

ಅರ್ಥ:
ಜಗ: ಜಗತ್ತು; ಹೂಡು: ಅಣಿಗೊಳಿಸು, ಸಿದ್ಧಪಡಿಸು; ಮೇಣ್: ಅಥವ; ಚತುರ್ದಶ: ಹದಿನಾಲ್ಕು; ಜೀವ: ಪ್ರಾಣ; ಊಡು: ಆಧಾರ, ಆಶ್ರಯ; ಉಣಿಸು: ತಿನ್ನಿಸು; ಭಾವ: ಭಾವನೆ, ಚಿತ್ತವೃತ್ತಿ; ಬಲಿಸು: ಗಟ್ಟಿಪಡಿಸು; ಗುಣ: ನಡತೆ, ಸ್ವಭಾವ; ತ್ರಯ: ಮೂರು; ಸೊಗಡು: ಕಂಪು, ವಾಸನೆ; ಸಹಸ್ರ: ಸಾವಿರ; ಧಾರೆ: ವರ್ಷ; ಝಗೆ: ಹೊಳಪು, ಪ್ರಕಾಶ; ಸುದರ್ಶನ: ವಿಷ್ಣುವಿನ ಕೈಯಲ್ಲಿರುವ ಆಯುಧಗಳಲ್ಲಿ ಒಂದು, ಚಕ್ರಾಯುಧ; ಬಿಗಿ: ಭದ್ರವಾಗಿರುವುದು; ಸುತ್ತಲು: ಎಲ್ಲಾ ಕಡೆ; ವೇಢೆ: ಆಕ್ರಮಣ; ಗರ್ಭ: ಹೊಟ್ಟೆ;

ಪದವಿಂಗಡಣೆ:
ಜಗವ +ಹೂಡುವ +ಮೇಣ್ +ಚತುರ್ದಶ
ಜಗದ +ಜೀವರನ್+ಊಡಿ+ಉಣಿಸುವ
ಜಗವನ್+ಅಂತರ್ಭಾವದಲಿ +ಬಲಿಸುವ +ಗುಣ+ತ್ರಯದ
ಸೊಗಡು +ತನ್ನ +ಸಹಸ್ರ+ಧಾರೆಯ
ಝಗೆಯೊಳೆನಿಪ+ ಮಹಾಸುದರ್ಶನ
ಬಿಗಿದು +ಸುತ್ತಲು +ವೇಢೆಯಾಯ್ತ್+ಉತ್ತರೆಯ +ಗರ್ಭದಲಿ

ಅಚ್ಚರಿ:
(೧) ಜಗ – ೧-೩ ಸಾಲಿನ ಮೊದಲ ಪದ
(೨) ಸುದರ್ಶನದ ವಿವರ – ಸಹಸ್ರಧಾರೆಯ ಝಗೆಯೊಳೆನಿಪ ಮಹಾಸುದರ್ಶನ

ನಿಮ್ಮ ಟಿಪ್ಪಣಿ ಬರೆಯಿರಿ