ಪದ್ಯ ೩೪: ಭೀಮನು ಕೌರವನನ್ನು ಹೇಗೆ ಹಂಗಿಸಿದನು?

ಹೊಯ್ದು ತೋರಾ ಬಂಜೆ ನುಡಿಯಲಿ
ಬಯ್ದಡಧಿಕನೆ ಬಾಹುವಿಂ ಹೊರ
ಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ
ಕಯ್ದು ನಿನಗಿದೆ ಲಕ್ಷ್ಯ ಪಣ ನಮ
ಗೆಯ್ದುವಡೆ ಗುಪ್ತಪ್ರತಾಪವ
ನೆಯ್ದೆ ಪ್ರಕಟಿಸೆನುತ್ತ ತಿವಿದನು ಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಕೇವಲ ನಿಷ್ಪ್ರಯೋಜಕ ಮಾತುಗಳಿಂದ ಬೈದರೆ ನೀನೇನು ದೊಡ್ಡವನೇ? ಬಾಯಿಂದ ಗದಾಪ್ರಹಾರ ಮಾಡುವೆಯೋ ಅಥವ ಕೈಗಳಿಂದ ತೋರುವೆಯೋ? ನೀನು ಜಾತಿಯಿಂದ ಕ್ಷತ್ರಿಯನಲ್ಲವೇ? ನಿನ್ನ ಕೈಯಲ್ಲಿ ಆಯುಧವಿದೆ, ಗುರಿಯಾಗಿ ನಾನಿದ್ದೇನೆ, ನಿನ್ನಲ್ಲಡಗಿರುವ ಪರಾಕ್ರಮವನ್ನು ಪ್ರಕಟಿಸು ಎನ್ನುತ್ತಾ ಭಿಮನು ಕೌರವನನ್ನು ತಿವಿದನು.

ಅರ್ಥ:
ಹೊಯ್ದು: ಹೊಡೆ; ತೋರು: ಗೋಚರಿಸು; ಬಂಜೆ: ನಿಷ್ಫಲ; ನುಡಿ: ಮಾತು; ಬಯ್ದು: ಜರೆ, ಹಂಗಿಸು; ಅಧಿಕ: ಹೆಚ್ಚು; ಬಾಹು: ತೋಳು; ಮೇಣ್: ಅಥವ; ಮುಖ: ಆನನ; ಜಾತಿ: ಕುಲ; ಕಯ್ದು: ಆಯುಧ; ಪಣ: ಸ್ಪರ್ಧೆ, ಧನ; ಗುಪ್ತ: ಗುಟ್ಟು; ಪ್ರತಾಪ: ಶಕ್ತಿ, ಪರಾಕ್ರಮ; ಪ್ರಕಟಿಸು: ತೋರು; ತಿವಿ: ಚುಚ್ಚು;

ಪದವಿಂಗಡಣೆ:
ಹೊಯ್ದು +ತೋರಾ +ಬಂಜೆ +ನುಡಿಯಲಿ
ಬಯ್ದಡ್+ಅಧಿಕನೆ +ಬಾಹುವಿಂ +ಹೊರ
ಹೊಯ್ದವನೊ+ ಮೇಣ್ +ಮುಖದಲೋ +ನೀನಾರು +ಜಾತಿಯಲಿ
ಕಯ್ದು+ ನಿನಗಿದೆ +ಲಕ್ಷ್ಯ+ ಪಣ +ನಮಗ್
ಎಯ್ದುವಡೆ +ಗುಪ್ತ+ಪ್ರತಾಪವನ್
ಎಯ್ದೆ +ಪ್ರಕಟಿಸ್+ಎನುತ್ತ+ ತಿವಿದನು +ಭೀಮ +ಕುರುಪತಿಯ

ಅಚ್ಚರಿ:
(೧) ಕೌರವನನ್ನು ಹಂಗಿಸುವ ಪರಿ – ಬಂಜೆ ನುಡಿಯಲಿಬಯ್ದಡಧಿಕನೆ
(೨) ಕೌರವನನ್ನು ಕೆರಳಿಸುವ ಪರಿ – ಬಾಹುವಿಂ ಹೊರಹೊಯ್ದವನೊ ಮೇಣ್ ಮುಖದಲೋ ನೀನಾರು ಜಾತಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ