ಪದ್ಯ ೩೫: ಪಾಂಡವರಿಗೇಕೆ ಅಸಾಧ್ಯವಾದುದು ಯಾವುದೂ ಇಲ್ಲ?

ಏನನೆಂಬೆನು ಜೀಯ ಕುರುಪತಿ
ಯಾನುವನು ಕಲಿಭೀಮನುಬ್ಬೆಯ
ನಾನುವನು ದುರಿಯೋಧನನ ಥಟ್ಟಣೆಯನಾ ಭೀಮ
ದಾನವರು ಮಾನವರೊಳಿನ್ನು ಸ
ಘಾನರಾರಿವರಂತೆ ಪಾಂಡವ
ರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ (ಗದಾ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಒಡೆಯಾ, ಭೀಮನೂ ದುರ್ಯೋಧನರೂ ಒಬ್ಬರನ್ನೊಬ್ಬರು ಎದುರಿಸುವುದನ್ನು, ಅವರಿಬ್ಬರ ಹೊಡೆತಗಳನ್ನು ಹೇಗೆ ವರ್ಣಿಸಲಿ? ಇವರಂಥ ವೀರರು ದಾನವ ಮಾನವರಲ್ಲಿ ಯಾರಿದ್ದಾರೆ? ಶ್ರೀಕೃಷ್ಣನ ಕರುಣೆಯಿಂದ ಪಾಂಡವರಿಗೆ ಯಾವುದು ತಾನೇ ಅಸಾಧ್ಯವಾದುದು.

ಅರ್ಥ:
ಜೀಯ: ಒಡೆಯ; ಆನು: ಎದುರಿಸು; ಕಲಿ: ಶೂರ; ಉಬ್ಬೆ: ಅಧಿಕ, ಹೆಚ್ಚಳ; ಥಟ್ಟಣೆ: ಗುಂಪು; ದಾನವ: ರಾಕ್ಷಸ; ಮಾನವ: ಮನುಷ್ಯ; ಸಘಾನ: ಸಮಾನ; ಅಸಾಧ್ಯ: ಶಕ್ಯವಲ್ಲದುದು; ಕರುಣ: ದಯೆ;

ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಪತಿ
ಆನುವನು +ಕಲಿಭೀಮನ್+ಉಬ್ಬೆಯನ್
ಆನುವನು +ದುರಿಯೋಧನನ +ಥಟ್ಟಣೆಯನ್+ಆ+ ಭೀಮ
ದಾನವರು +ಮಾನವರೊಳ್+ಇನ್ನು+ ಸ
ಘಾನರ್+ಆರ್+ಇವರಂತೆ +ಪಾಂಡವರ್ಗ್
ಏನ್+ಅಸಾಧ್ಯವು+ ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಆನುವನು – ೨, ೩ ಸಾಲಿನ ಮೊದಲ ಪದ
(೨) ಭಗವಂತನ ಕೃಪೆಯ ಮಹತ್ವ – ಪಾಂಡವರ್ಗೇನಸಾಧ್ಯವು ವೀರನಾರಾಯಣನ ಕರುಣದಲಿ

ಪದ್ಯ ೩೪: ಭೀಮ ದುರ್ಯೋಧನರು ಹೇಗೆ ಹೋರಾಡಿದರು?

ಮತ್ತೆ ಹೊಕ್ಕರು ದಿಗ್ಗಜಕೆ ಮದ
ಮತ್ತ ದಿಗ್ಗಜ ಮಲೆತವೊಲು ಮಿಗೆ
ಹತ್ತಿದರು ಶತಮನ್ಯು ಜಂಭನ ಜೋಡಿಯಂದದಲಿ
ತತ್ತರಿಬ್ಬರು ಮೂಕದನುಜನ
ಕೃತ್ತಿವಾಸನವೋಲು ರಣಧೀ
ರೋತ್ತಮರು ಕಯ್ಯಿಕ್ಕಿದರು ಕೌರವ ವೃಕೋದರರು (ಗದಾ ಪರ್ವ, ೬ ಸಂಧಿ, ೩೪ ಪದ್ಯ)

ತಾತ್ಪರ್ಯ:
ಯಾವ ರೀತಿ ದಿಗ್ಗಜವು ದಿಗ್ಗಜವನ್ನಿದಿರಿಸುವಂತೆ, ಇಂದ್ರ ಜಂಭಾಸುರನನ್ನು ಹೋರಾಡಿದಂತೆ, ಮೂಕಾಸುರನೂ ಶಿವನೂ ಹೋರಾಡಿದಂತೆ, ರಣಧೀರರಾದ ಭೀಮ ದುರ್ಯೋಧನರು ಎದುರಾದರು.

ಅರ್ಥ:
ಮತ್ತೆ: ಪುನಃ; ಹೊಕ್ಕು: ಸೇರು; ದಿಗ್ಗಜ: ಶೂರ, ಪರಾಕ್ರಮಿ; ಮದ: ಅಹಂಕಾರ, ಅಮಲು; ಮಲೆತ: ಗರ್ವಿಸಿದ, ಸೊಕ್ಕಿದ; ಮಿಗೆ: ಹೆಚ್ಚು; ಹತ್ತು: ಮೇಲೇರು; ಶತಮನ್ಯು: ಇಂದ್ರ; ಜೋಡಿ: ಜೊತೆ; ತತ್ತರಿ: ತುಂಡಾಗಿ ಮಾಡು; ಅನುಜ: ತಮ್ಮ; ಕೃತ್ತಿವಾಸ: ಜಿಂಕೆಯ ಚರ್ಮ ಹೊದ್ದವ-ಶಿವ; ರಣಧೀರ: ಪರಾಕ್ರಮಿ; ಕಯ್ಯಿಕ್ಕು: ಹೋರಾಡು;

ಪದವಿಂಗಡಣೆ:
ಮತ್ತೆ +ಹೊಕ್ಕರು+ ದಿಗ್ಗಜಕೆ+ ಮದ
ಮತ್ತ+ ದಿಗ್ಗಜ+ ಮಲೆತವೊಲು +ಮಿಗೆ
ಹತ್ತಿದರು +ಶತಮನ್ಯು+ ಜಂಭನ +ಜೋಡಿಯಂದದಲಿ
ತತ್ತರಿಬ್ಬರು+ ಮೂಕದ್+ಅನುಜನ
ಕೃತ್ತಿವಾಸನವೋಲು +ರಣಧೀ
ರೋತ್ತಮರು +ಕಯ್ಯಿಕ್ಕಿದರು +ಕೌರವ +ವೃಕೋದರರು

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ದಿಗ್ಗಜಕೆ ಮದಮತ್ತ ದಿಗ್ಗಜ ಮಲೆತವೊಲು, ಶತಮನ್ಯು ಜಂಭನ ಜೋಡಿಯಂದದಲಿ, ತತ್ತರಿಬ್ಬರು ಮೂಕದನುಜನಕೃತ್ತಿವಾಸನವೋಲು

ಪದ್ಯ ೩೩: ಭೀಮ ದುರ್ಯೋಧನರು ಮತ್ತೆ ಯುದ್ಧಕ್ಕೆ ಹೇಗೆ ಸಿದ್ಧರಾದರು?

ಸೈರಿಸಿದವೆರಡಂಕ ತೆಗೆದವು
ದೂರದಲಿ ದುರುದುರಿಪ ರಕುತದ
ಧಾರೆಗಳ ತೊಳೆದೊರಸಿದರು ಸಿರಿಖಂಡ ಕರ್ದಮವ
ವೀರಕೇಳೀಶ್ರಮವಡಗೆ ಕ
ರ್ಪೂರ ವೀಳೆಯಗೊಂಡು ಮತ್ತೆ ಮ
ಹಾರುಭಟೆಯಲಿ ಸುಭಟರೆದ್ದರು ತೂಗಿ ನಿಜಗದೆಯ (ಗದಾ ಪರ್ವ, ೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎರದು ಸುತ್ತು ಕಾಳಗ ಮುಗಿಯಲು, ವೀರರಿಬ್ಬರೂ ದೂರಕ್ಕೆ ಸರಿದರು. ಅವರ ಮೈಯಿಂದ ಸುರಿದ ರಕ್ತಧಾರೆಗಳನ್ನೊರೆಸಿ ಶ್ರೀಗಂಧವನ್ನು ಬಳಿದರು. ಕರ್ಪೂರ ವೀಳೆಯವನ್ನು ಹಾಕಿಕೊಂದು, ಇಬ್ಬರೂ ಸುಭಟರು ಗದೆಗಲನ್ನು ತೂಗಿ ಆರ್ಭಟಿಸುತ್ತಾ ಯುದ್ಧಕ್ಕೆ ಸಿದ್ಧರಾದರು.

ಅರ್ಥ:
ಸೈರಿಸು: ತಾಳು; ಅಂಕ: ಯುದ್ಧ; ತೆಗೆ: ಹೊರತರು; ದೂರ: ಅಮ್ತರ; ದುರುದುರಿಪ: ಒಂದೇ ಸಮನಾಗಿ ಹೊರೆ ಚಿಮ್ಮುವ; ರಕುತ: ನೆತ್ತರು; ಧಾರೆ: ವರ್ಷ; ತೊಳೆ: ನಿವಾರಿಸು; ಒರಸು: ಸಾರಿಸು; ಸಿರಿಖಂಡ: ಶ್ರೀಗಂಧ; ಕರ್ದಮ: ಕೆಸರು, ಪಂಕ; ವೀರ: ಶೂರ; ಕೇಳ್: ಆಲಿಸು; ಶ್ರಮ: ಕಷ್ಟ, ತೊಂದರೆ; ಅಡಗು: ಕಡಿಮೆಯಾಗು; ಕರ್ಪೂರ: ಸುಗಂಧ ದ್ರವ್ಯ; ವೀಳೆ: ತಾಂಬೂಲ; ಆರುಭಟೆ: ಗರ್ಜನೆ; ಸುಭಟ: ಪರಾಕ್ರಮ; ತೂಗು: ಅಲ್ಲಾಡು; ಗದೆ: ಮುದ್ಗರ;

ಪದವಿಂಗಡಣೆ:
ಸೈರಿಸಿದವ್+ಎರಡಂಕ +ತೆಗೆದವು
ದೂರದಲಿ +ದುರುದುರಿಪ +ರಕುತದ
ಧಾರೆಗಳ +ತೊಳೆದ್+ಒರಸಿದರು +ಸಿರಿಖಂಡ +ಕರ್ದಮವ
ವೀರ+ಕೇಳ್+ಈ+ಶ್ರಮವ್+ಅಡಗೆ +ಕ
ರ್ಪೂರ +ವೀಳೆಯಗೊಂಡು +ಮತ್ತೆ+ ಮಹಾ
ಆರುಭಟೆಯಲಿ +ಸುಭಟರ್+ಎದ್ದರು+ ತೂಗಿ +ನಿಜಗದೆಯ

ಅಚ್ಚರಿ:
(೧) ಶ್ರೀಗಂಧವನ್ನು ಸಿರಿಖಂಡ ಎಂದು ಕರೆದಿರುವುದು
(೨) ವೀರಕೇಳೀಶ್ರಮವಡಗೆ – ಒಂದೇ ಪದವಾಗಿ ರಚನೆ

ಪದ್ಯ ೩೨: ಭೀಮ ದುರ್ಯೋಧನರ ರಕ್ತವು ಹೇಗೆ ಭೂಮಿಯನ್ನು ತೋಯಿಸಿತು?

ಆಗಳೇ ಸಂತೈಸಿ ರಿಪು ಕೈ
ದಾಗಿಸಿದನರಸನನು ಘಾಯದ
ಬೇಗಡೆಯಲುಚ್ಚಳಿಸಿದುದು ಬಿಸಿರಕುತ ಹುಡಿ ನನೆಯೆ
ಆ ಗರುವನದ ಬಗೆವನೇ ಸರಿ
ಭಾಗರಕುತವನನಿಲಸುತನಲಿ
ತೂಗಿ ತೆಗೆದವೊಲಾಯ್ತು ಹೊಯ್ದನು ಪವನನಂದನನ (ಗದಾ ಪರ್ವ, ೬ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ಸಂತೈಸಿಕೊಂಡು ಕೌರವನನ್ನು ಹೊಡೆಯಲು ಬಿಸಿರಕ್ತ ಸುರಿದು ನೆಲದಧೂಳು ನೆನೆಯಿತು. ಕೌರವನು ಅದನ್ನು ಲೆಕ್ಕಿಸದೆ ಭೀಮನನ್ನು ಹೊಡೆಯಲು ಅವನ ಮೈಯಿಂದ ರಕ್ತ ಸುರಿಯಿತು.

ಅರ್ಥ:
ಸಂತೈಸು: ಸಮಾಧಾನ ಪಡಿಸು; ರಿಪು: ವೈರಿ; ಕೈ: ಹಸ್ತ; ತಾಗು: ಮುಟ್ಟು; ಅರಸ: ರಾಜ; ಘಾಯ: ಪೆಟ್ತು; ಬೇಗಡೆ: ಮಿಂಚುವ ಬಣ್ಣ; ಉಚ್ಚಳಿಸು: ಮೇಲಕ್ಕೆ ಹಾರು; ಬಿಸಿ: ಕಾವು, ಶಾಖ; ರಕುತ: ನೆತ್ತರು; ಹುಡಿ: ಹಿಟ್ಟು, ಪುಡಿ; ನನೆ: ತೋಯು, ಒದ್ದೆಯಾಗು; ಗರುವ: ಶ್ರೇಷ್ಠ; ಬಗೆ: ಎಣಿಸು, ಲಕ್ಷಿಸು, ಸೀಳು; ಭಾಗ: ಅಂಶ, ಪಾಲು; ರಕುತ: ನೆತ್ತರು; ಅನಿಲಸುತ: ವಾಯು ಪುತ್ರ (ಭೀಮ); ತೂಗು: ತೋಲನ ಮಾಡು, ಅಲ್ಲಾಡಿಸು; ಹೊಯ್ದು: ಹೊಡೆ; ನಂದನ: ಮಗ;

ಪದವಿಂಗಡಣೆ:
ಆಗಳೇ +ಸಂತೈಸಿ +ರಿಪು +ಕೈ
ತಾಗಿಸಿದನ್+ಅರಸನನು+ ಘಾಯದ
ಬೇಗಡೆಯಲ್+ಉಚ್ಚಳಿಸಿದುದು +ಬಿಸಿರಕುತ +ಹುಡಿ +ನನೆಯೆ
ಆ +ಗರುವನದ +ಬಗೆವನೇ +ಸರಿ
ಭಾಗ+ರಕುತವನ್+ಅನಿಲಸುತನಲಿ
ತೂಗಿ +ತೆಗೆದವೊಲಾಯ್ತು+ ಹೊಯ್ದನು +ಪವನ+ನಂದನನ

ಅಚ್ಚರಿ:
(೧) ಅರಸ, ಗರುವನ, ರಿಪು – ದುರ್ಯೋಧನನನ್ನು ಕರೆದ ಪರಿ

ಪದ್ಯ ೩೧: ಪಾಂಡವ ಸೇನೆಯು ಏಕೆ ಝೋಂಪಿಸಿತು?

ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ (ಗದಾ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಪ್ರದಕ್ಷಿಣೆ ಮಾಡುತ್ತಾ ಭೀಮನು ಕೌರವನನ್ನು ಹೊಡೆದನು. ಕೌರವನು ಪ್ರದಕ್ಷಿಣೆ ಗತಿಯಿಂದ ಭೀಮನ ಹೊಡೆತವನ್ನು ನಿವಾರಿಸಿ, ಒಳನುಗ್ಗಿ, ಹೊಟ್ಟೆಯ ಕೆಲಭಾಗಕ್ಕೆ ಹೊಯ್ಯಲು ಭೀಮನು ಓಲಿ ಬೀಳುವುದನ್ನು ಕಂಡು ಪಾಂಡವ ಸೇನೆ ಹಾ ಎಂದು ಕೂಗಿತು.

ಅರ್ಥ:
ಅಪಸವ್ಯ: ಬಲಗಡೆ, ಕಾಳಗದಲ್ಲಿ ಒಂದು ಸಂಚಾರಕ್ರಮ; ವಿಲಸ: ಕ್ರೀಡೆ, ಬೆಡಗು; ರಿಪು: ವೈರಿ; ಮಂಡಲ: ವರ್ತುಲಾಕಾರ; ಹೊಯ್ದು: ಹೋರಾಡು; ಸವ್ಯ: ಪ್ರದಕ್ಷಿಣೆಯ ಕ್ರಮ; ವಲಯ: ವಿಭಾಗ, ಪ್ರದೇಶ; ಹೊಯ್ಲ: ಹೊಡೆ; ಬೀಸು: ತೂಗುವಿಕೆ; ಬಗಿ: ಹೋಳು, ಭಾಗ; ಕಿಬ್ಬರಿ: ಪಕ್ಕೆಯ ಕೆಳ ಭಾಗ; ಕಂಡು: ತೋರು; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಭಟ: ಸೈನಿಕ; ತತಿ: ಗುಂಪು; ಎನಲು: ಹೇಳಲು; ಝೋಂಪಿಸು: ಮೈಮರೆ, ಎಚ್ಚರ ತಪ್ಪು;

ಪದವಿಂಗಡಣೆ:
ವಿಲಸದ್+ಅಪಸವ್ಯದಲಿ +ರಿಪು +ಮಂ
ಡಳಿಸಿ +ಹೊಯ್ದನು +ಸವ್ಯ+ಮಂಡಲ
ವಲಯದಿಂದಾ +ಭೀಮಸೇನನ +ಹೊಯ್ಲ+ ಹೊರಬೀಸಿ
ಒಳಬಗಿದು +ಕಿಬ್ಬರಿಯ +ಕಂಡ್
ಅಪ್ಪಳಿಸಿದನು +ನಿನ್ನಾತನ್+ಆಚೆಯ
ದಳದ +ಭಟ+ತತಿ +ಹಾಯೆನಲು +ಝೋಂಪಿಸಿದನಾ +ಭೀಮ

ಅಚ್ಚರಿ:
(೧) ಸವ್ಯ, ಅಪಸವ್ಯ – ವಿರುದ್ಧ ಪದಗಳು
(೨) ಹೊಯ್ದ, ಹೊಯ್ಲ – ಸಮಾನಾರ್ಥಕ ಪದ

ಪದ್ಯ ೩೦: ಭೀಮ ದುರ್ಯೋಧನರ ಯುದ್ಧ ಕೌಶಲ್ಯ ಹೇಗಿತ್ತು?

ಜಾಣು ಜಗುಳಿತು ಹೊಯ್ಲ ಮೊನೆ ಮುಂ
ಗಾಣಿಕೆಗೆ ಲಟಕಟಿಸಿದುದು ಬರಿ
ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
ತ್ರಾಣ ತಲವೆಳಗಾಯ್ತು ಶ್ರವ ಬಿ
ನ್ನಾಣ ಮೇಲಾಯಿತ್ತು ಕುಶಲದ
ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ (ಗದಾ ಪರ್ವ, ೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅವರ ಜಾಣತನ ಕೆಲಸಕ್ಕೆ ಬಾರದೆ ಹೋಯಿತು. ಹೊಡೆತದ ತೀಕ್ಷ್ಣತೆಯು ನೋಡುತ್ತಿದ್ದಂತೆ ವ್ಯರ್ಥವಾಯಿತು. ಕಾಲಿನ ಗತಿಯ ವಿನ್ಯಾಸ ಕಣದಲ್ಲಿ ಧೂಳನ್ನೆಬ್ಬಿಸಿತೇ ಹೊರತು ವಿರೋಧಿಯನ್ನು ಬಾಗಿಸಲಿಲ್ಲ. ಶಕ್ತಿಯು ಕುಂದಿತು. ಆಯಾಸ ಹೆಚ್ಚಾಯಿತು. ಗದೆಗಳು ತಾಕಿ ಕಿಡಿಯೆದ್ದವು. ಅವರ ಕೌಶಲ್ಯ ಅತ್ಯುತ್ತತವಾಗಿತ್ತು.

ಅರ್ಥ:
ಜಾಣು: ಜಾಣತನ, ಬುದ್ಧಿವಂತ; ಜಗುಳು: ಜಾರು; ಹೊಯ್ಲು: ಹೊಡೆ; ಮೊನೆ: ಮುಖ; ಮುಂಗಾಣಿಕೆ: ಮುಂದಿನ ನೋಟ; ಲಟಕಟ: ಉದ್ರೇಕಗೊಳ್ಳು; ಬರಿ: ಕೇವಲ; ರೇಣು: ಧೂಳು, ಹುಡಿ; ಜಾಡ್ಯ: ಚಳಿ, ಸೋಮಾರಿತನ; ಪಡಪು: ಹೊಂದು, ಪಡೆ; ಪಯ: ಪಾದ; ಗತಿ: ಚಲನೆ, ವೇಗ; ತ್ರಾಣ: ಕಾಪು, ರಕ್ಷಣೆ, ಶಕ್ತಿ, ಬಲ; ತಳವೆಳ: ಬೆರಗು, ಆಶ್ಚರ್ಯ; ಶ್ರವ: ಧ್ವನಿ; ಬಿನ್ನಾಣ: ಕೌಶಲ್ಯ; ಮೇಲೆ: ಹೆಚ್ಚು; ಕುಶಲ: ಚಾತುರ್ಯ; ಕೇಣ: ಹೊಟ್ಟೆಕಿಚ್ಚು, ಮತ್ಸರ; ಕಾದು: ಹೋರಾದು; ಗದೆ: ಮುದ್ಗರ; ಕಿಡಿ: ಬೆಂಕಿ; ತಿವಿ: ಚುಚ್ಚು;

ಪದವಿಂಗಡಣೆ:
ಜಾಣು +ಜಗುಳಿತು +ಹೊಯ್ಲ +ಮೊನೆ +ಮುಂ
ಗಾಣಿಕೆಗೆ+ ಲಟಕಟಿಸಿದುದು +ಬರಿ
ರೇಣುಜನನದ +ಜಾಡ್ಯವೇ+ ಪಡಪಾಯ್ತು+ ಪಯಗತಿಗೆ
ತ್ರಾಣ+ ತಲವೆಳಗಾಯ್ತು+ ಶ್ರವ+ ಬಿ
ನ್ನಾಣ +ಮೇಲಾಯಿತ್ತು+ ಕುಶಲದ
ಕೇಣದಲಿ +ಕಾದಿದರು +ಗದೆಗಳ +ಕಿಡಿಯ +ಕಿಡಿ +ತಿವಿಯೆ

ಅಚ್ಚರಿ:
(೧) ಧೂಳೇ ಹೆಚ್ಚಿತ್ತು ಎಂದು ಹೇಳಲು – ಬರಿ ರೇಣುಜನನದ ಜಾಡ್ಯವೇ ಪಡಪಾಯ್ತು ಪಯಗತಿಗೆ
(೨) ಕ ವರ್ಗದ ಪದಗಳ ಸಾಲು – ಕುಶಲದ ಕೇಣದಲಿ ಕಾದಿದರು ಗದೆಗಳ ಕಿಡಿಯ ಕಿಡಿ ತಿವಿಯೆ