ಪದ್ಯ ೨೩: ಭೀಮ ಸುಯೋಧನರು ಹೇಗೆ ಯುದ್ಧ ಮಾಡಿದರು?

ಒಳಹೊಗುವ ಹೆರತೆಗೆವ ಘಾಯವ
ಕಳಚುವವಧಾನದಲಿ ದೃಷ್ಟಿಯ
ಬಳಿಗೆ ಕೈಮಾಡುವ ವಿಘಾತಿಗೆ ಜಗುಳ್ವ ಝಾಡಿಸುವ
ಸುಳಿವ ಸಂತೈಸುವ ಸುಸಂಚದೊ
ಳಳವರಿವ ವಂಚಿಸುವ ಗಮನಿಕೆ
ಯಳಬಳನಾರೈವ ಭಟರೊದಗಿದರು ಸಮರದಲಿ (ಗದಾ ಪರ್ವ, ೬ ಸಂಧಿ, ೨೩ ಪದ್ಯ)

ತಾತ್ಪರ್ಯ:
ಒಳಕ್ಕೆ ನುಗ್ಗುವ, ಹಿಂದಕ್ಕೆ ಸರಿಯುವ, ಪೆಟ್ಟುಗಳನ್ನು ಎಚ್ಚರದಿಂದ ತಪ್ಪಿಸಿಕೊಳ್ಳುವ, ಗಮನವಿಟ್ಟು ಹೊಯ್ಯುವ, ಏಟನ್ನು ಪಕ್ಕಕ್ಕೆ ಸರಿದು ತಪ್ಪಿಸಿ ಹೊಯ್ಯುವ, ಸುಳಿಯುತ್ತಾ ತಮ್ಮನ್ನು ರಕ್ಷಿಸಿಕೊಳ್ಳುವ, ಕಾದು, ವಿರೋಧಿಯ ಶಕ್ತಿಯನ್ನು ತಿಳಿದು ಅವನನ್ನು ಮೋಸಗೊಳಿಸುವ, ಇದಿರಾಳಿಯ ಸತ್ವವನ್ನು ಲೆಕ್ಕಹಾಕುವ ವೀರರು ಒಬ್ಬರನ್ನೊಬ್ಬರು ವಿರೋಧಿಸಿದರು.

ಅರ್ಥ:
ಒಳ: ಆಂತರ್ಯ; ಹೊಗು: ಸೇರು; ಘಾಯ: ಪೆಟ್ಟು; ಕಳಚು: ಬೇರ್ಪಡಿಸು; ಅವಧಾನ: ಸ್ಮರಣೆ, ಬುದ್ಧಿ; ದೃಷ್ಟಿ: ನೋಟ; ಬಳಿ: ಹತ್ತಿರ; ಕೈಮಾಡು: ಹೋರಾದು; ವಿಘಾತ: ನಾಶ, ಧ್ವಂಸ; ಜಗುಳು: ಜಾರು; ಝಾಡಿ: ಹೊಳೆ; ಸುಳಿ: ಚಕ್ರಾಕಾರವಾಗಿ ತಿರುಗು; ಸಂತೈಸು: ಸಾಂತ್ವನಗೊಳಿಸು; ಸಂಚ: ಸಂಗ್ರಹ; ಅರಿ: ತಿಳಿ; ವಂಚಿಸು: ಮೋಸಮಾಡು; ಅಳಬಳ: ಶಕ್ತಿ; ಭಟ: ಸೈನಿಕ; ಒದಗು: ಲಭ್ಯ; ಸಮರ: ಯುದ್ಧ;

ಪದವಿಂಗಡಣೆ:
ಒಳಹೊಗುವ +ಹೆರತೆಗೆವ +ಘಾಯವ
ಕಳಚುವ್+ಅವಧಾನದಲಿ +ದೃಷ್ಟಿಯ
ಬಳಿಗೆ +ಕೈಮಾಡುವ +ವಿಘಾತಿಗೆ +ಜಗುಳ್ವ+ ಝಾಡಿಸುವ
ಸುಳಿವ +ಸಂತೈಸುವ +ಸುಸಂಚದೊಳ್
ಅಳವ್+ಅರಿವ +ವಂಚಿಸುವ +ಗಮನಿಕೆ
ಅಳಬಳನ್+ಆರೈವ +ಭಟರೊದಗಿದರು +ಸಮರದಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುಳಿವ ಸಂತೈಸುವ ಸುಸಂಚದೊಳಳವರಿವ

ಪದ್ಯ ೨೨: ಭೀಮ ಕೌರವನ ಕಾಳಗ ಹೇಗೆ ನಡೆಯಿತು?

ಸುಳಿದರೆಡಬಲ ಚಾರಿಯಲಿ ಚಾ
ಪಳದ ಪಯಪಾಡಿನಲಿ ಚಿತ್ರದ
ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ
ಹೊಳೆದರಾವರ್ತದಲಿ ಪರಿಮಂ
ಡಳಿಸಿದರು ಠಾಣದಲಿ ಜಂಘೆಯ
ಲುಳಿಯ ಲವಠಾಣದಲಿ ಮೆರೆದರು ಭೀಮ ಕೌರವರು (ಗದಾ ಪರ್ವ, ೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಎಡಬಲಕ್ಕೆ ಚಪಲವಾದ ಪಾದವಿನ್ಯಾಸದಿಂದ ಸುಳಿದರು. ಭೀಮದುರ್ಯೋಧನರು ವಿಚಿತ್ರರೀತಿಯಲ್ಲಿ ವೇಗದಿಂದ ಶಕ್ತಿಯನ್ನು ಪ್ರದರ್ಶಿಸುತ್ತಾ ಸುತ್ತಲೂ ಸುಳಿದರು. ನಿಂತು ಸುತ್ತಿ ವೇಗದಿಂದ ಪರಸ್ಪರ ಆಘಾತಗಳನ್ನು ತಪ್ಪಿಸಿಕೊಳ್ಳುತ್ತಾ ಮೆರೆದರು.

ಅರ್ಥ:
ಸುಳಿ: ಚಕ್ರಾಕಾರವಾಗಿ ತಿರುಗು; ಎಡಬಲ: ಅಕ್ಕಪಕ್ಕ; ಚಾರಿ: ಚಲಿಸುವುದು; ಚಾಪಳ: ಚಂಚಲ ಸ್ವಭಾವದವನು; ಪಯಪಾಡು: ಹೆಜ್ಜೆ ಹಾಕುವ ಒಂದು ಕ್ರಮ; ಚಿತ್ರ: ಬರೆದ ಆಕೃತಿ; ಚಳಗತಿ: ವೇಗ, ಚಂಚಲ; ಚೇತನ: ಮನಸ್ಸು, ಬುದ್ಧಿ; ಚಡ್ಡಣೆ: ಎಚ್ಚರದಿಂದಿರುವ; ಚಡಾಳ: ಹೆಚ್ಚಳ, ಆಧಿಕ್ಯ; ಹೊಳೆ: ಪ್ರಕಾಶ; ಆವರ್ತ: ತಿರುಗುವಿಕೆ; ಮಂಡಳಿಸು: ಠಾಣ: ಸ್ಥಳ; ಜಂಘೆ: ತೊಡೆಯ ಕೆಳಭಾಗ; ಉಳಿ: ಬಿಡು, ತೊರೆ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಸುಳಿದರ್+ಎಡಬಲ +ಚಾರಿಯಲಿ +ಚಾ
ಪಳದ +ಪಯಪಾಡಿನಲಿ +ಚಿತ್ರದ
ಚಳಗತಿಯ +ಚೇತನದ +ಚಡ್ಡಣೆಗಳ+ ಚಡಾಳದಲಿ
ಹೊಳೆದರ್+ಆವರ್ತದಲಿ +ಪರಿ+ಮಂ
ಡಳಿಸಿದರು +ಠಾಣದಲಿ +ಜಂಘೆಯಲ್
ಉಳಿಯ +ಲವಠಾಣದಲಿ+ ಮೆರೆದರು +ಭೀಮ +ಕೌರವರು

ಅಚ್ಚರಿ:
(೧) ಚ ಕಾರದ ಸಾಲು ಪದ – ಚಿತ್ರದ ಚಳಗತಿಯ ಚೇತನದ ಚಡ್ಡಣೆಗಳ ಚಡಾಳದಲಿ

ಪದ್ಯ ೨೧: ಭೀಮ ಕೌರವನ ಯುದ್ಧ ಹೇಗೆ ನಡೆಯಿತು?

ಹೊಯ್ದು ಬಿಡಿಸಿದಡನಿಲಜನ ಮೇ
ಲ್ವಾಯ್ದನವನಿಪನೊಡ್ಡಿ ಗದೆಯಲಿ
ಕಾಯ್ದು ತಿವಿದನು ಭೀಮಸೇನನ ನೃಪತಿ ವಂಚಿಸಿದ
ಮೆಯ್ದೆಗೆದಡಿಟ್ಟಣಿಸಿ ಪವನಜ
ಹೊಯ್ದಡೊಲೆದನು ಭೂಪನಿಬ್ಬರ
ಕಯ್ದುಕಾರತನಕ್ಕೆ ಬೆರಗಾದುದು ಸುರಸ್ತೋಮ (ಗದಾ ಪರ್ವ, ೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಮನ ಹೊಯ್ಲನ್ನು ತಪ್ಪಿಸಿ ಅವನ ಮೇಲೆ ಕೌರವನು ಹೊಯ್ದನು. ಭೀಮನು ಗದೆಯನ್ನು ಅಡ್ಡಹಿದಿದು, ಕೌರವನನ್ನು ಹೊಯ್ದನು. ಭೀಮನ ಹೊಡೆತವನ್ನು ಕೌರವನು ತಪ್ಪಿಸಿಕೊಂಡನು. ಕೌರವನು ಸರಿದೊಡನೆ ಭೀಮನು ನುಗ್ಗಿ ಹೊಯ್ದನು. ಕೌರವನು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡನು. ಇಬ್ಬರ ಆಯುಧಪ್ರಯೋಗವನ್ನು ಕಂಡು ದೇವತೆಗಳೂ ಬೆರಗಾದರು.

ಅರ್ಥ:
ಹೊಯ್ದು: ಹೊಡೆ; ಬಿಡಿಸು: ಸಡಲಿಸು; ಅನಿಲಜ: ಭೀಮ; ಅವನಿಪ: ರಾಜ; ಒಡ್ಡು: ಅಡ್ಡ ಗಟ್ಟೆ; ಗದೆ: ಮುದ್ಗರ; ಕಾಯು: ತಾಳು; ತಿವಿ: ಚುಚ್ಚು; ನೃಪತಿ: ರಾಜ; ವಂಚಿಸು: ತಪ್ಪಿಸಿಕೊಳ್ಳು; ಇಟ್ಟಣಿಸು: ದಟ್ಟವಾಗು; ಪವನಜ: ಭೀಮ; ಒಲೆ; ಭೂಪ: ರಾಜ; ಕಯ್ದುಕಾರ: ಹೋರಾಟ; ಬೆರಗಾಗು: ಆಶ್ಚರ್ಯ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ಹೊಯ್ದು+ ಬಿಡಿಸಿದಡ್+ಅನಿಲಜನ +ಮೇ
ಲ್ವಾಯ್ದನ್+ಅವನಿಪನ್+ಒಡ್ಡಿ+ ಗದೆಯಲಿ
ಕಾಯ್ದು +ತಿವಿದನು +ಭೀಮಸೇನನ+ ನೃಪತಿ+ ವಂಚಿಸಿದ
ಮೆಯ್ದೆಗೆದಡ್+ಇಟ್ಟಣಿಸಿ +ಪವನಜ
ಹೊಯ್ದಡ್+ಒಲೆದನು +ಭೂಪನ್+ಇಬ್ಬರ
ಕಯ್ದುಕಾರತನಕ್ಕೆ+ ಬೆರಗಾದುದು +ಸುರಸ್ತೋಮ

ಅಚ್ಚರಿ:
(೧) ಅನಿಲಜ, ಪವನಜ, ಭೀಮಸೇನ – ಭೀಮನನ್ನು ಕರೆದ ಪರಿ
(೨) ಅವನಿಪ, ನೃಪತಿ, ಭೂಪ – ಕೌರವನನ್ನು ಕರೆದ ಪರಿ