ಪದ್ಯ ೨೦: ಭೀಮ ದುರ್ಯೋಧನರ ಯುದ್ಧವು ಹೇಗಿತ್ತು?

ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ (ಗದಾ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೌರವನು ಗದೆಯಿಂದ ಭೀಮನ ಹೊಡೆತಗಳನ್ನು ತಡೆದು, ಭೀಮನನ್ನು ತಿವಿದನು. ನಿನ್ನ ಮಗನ ಹೊಡೆತವನ್ನು ಭೀಮನು ತಪ್ಪಿಸಿ ಮುಂದೆ ಹೆಜ್ಜೆಯಿಟ್ಟು ಹೊಯ್ದನು. ನಿನ್ನ ಮಗನು ಪಕ್ಕಕ್ಕೆ ಸರಿದು ಹೊಡೆದನು. ಹೀಗೆ ಉಚಿತವಾಗಿ ಪದವಿನ್ಯಾಸದಿಂದ ಇಬ್ಬರೂ ಹೋರಾಡಿದರು.

ಅರ್ಥ:
ಬಿಡಸು: ಹೊಡೆ; ಗದೆ: ಮುದ್ಗರ; ಹೊಯ್: ಹೊಡೆ; ತಡೆ: ನಿಲ್ಲು; ತಿವಿ: ಚುಚ್ಚು; ಮಗ: ಸುತ; ಗಡ: ಬೇಗನೆ; ಘಾಯ: ಪೆಟ್ಟು; ಒಡ್ಡು: ಸಗಾಢ: ಜೋರು, ರಭಸ; ಕೋಪ: ಕುಪಿತ; ತುಡುಕು: ಹೋರಾಡು, ಸೆಣಸು; ಕಲಿ: ಶೂರ; ಹಜ್ಜೆ: ಪಾದ; ಎಡೆ: ನಡುವೆ, ಮಧ್ಯ; ಔಕು: ತಳ್ಳು; ಒಡನೊಡನೆ: ಒಮ್ಮಲೆ; ಗಾಹು: ತಿಳುವಳಿಕೆ, ಮೋಸ; ಉಚಿತ: ಪುಕ್ಕಟೆ; ಗತಿ: ಗಮನ, ಸಂಚಾರ; ಗಮಕ: ಮನದಟ್ಟು ಮಾಡುವ;

ಪದವಿಂಗಡಣೆ:
ಬಿಡಸಿದಡೆ +ಗದೆಯಿಂದ +ಹೊಯ್ಗುಳ
ತಡೆದು +ತಿವಿದನು +ನಿನ್ನ+ ಮಗನ್+ಅವ
ಗಡದ +ಘಾಯಕೆ +ಗದೆಯನ್+ಒಡ್ಡಿ+ ಸಗಾಢ +ಕೋಪದಲಿ
ತುಡುಕಿದನು +ಕಲಿಭೀಮ +ಹಜ್ಜೆಯೊಳ್
ಎಡೆ+ಮುರಿದು +ನಿನ್ನಾತನ್+ಔಕಿದರ್
ಒಡನೊಡನೆ +ಗಾಹಿಸಿದರ್+ಉಚಿತದ +ಗತಿಯ +ಗಮಕದಲಿ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಾಹಿಸಿದರುಚಿತದ ಗತಿಯ ಗಮಕದಲಿ

ಪದ್ಯ ೧೯: ಭೀಮನ ಧೀರನುಡಿ ಹೇಗಿತ್ತು?

ಎಲವೊ ದುರ್ಮತಿ ನಿನ್ನ ಕೌರವ
ಕುಲದ ಶಿಕ್ಷಾರಕ್ಷೆಗಿನ್ನಾ
ರೊಳರು ಹೊರಬಿಗ ದೈವವುಂಟೇ ತಾನೆ ದೈವ ಕಣಾ
ಕಳಚಿದೆನಲಾ ಕೊಂದು ನೂರ್ವರ
ತಲೆಯನಿನ್ನರಘಳಿಗೆಯಲಿ ಹೆಡ
ತಲೆಯನೊದೆವೆನು ಹೋಗೆನುತ ಹೊಯ್ದನು ಸುಯೋಧನನ (ಗದಾ ಪರ್ವ, ೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೋ ದುಷ್ಬುದ್ಧೀ, ನಿನ್ನ ಕೌರವಕುಲವನ್ನು ರಕ್ಷಿಸಲು ಶಿಕ್ಷಿಸಲು ಬೇರೊಂದು ದೈವವಿದೆಯೇ? ನಾನೇ ಆ ದೈವ. ನೂರು ಜನರನ್ನು ಸಂಹರಿಸಿದೆ. ಇನ್ನರ್ಧಗಳಿಗೆಯಲ್ಲಿ ನಿನ್ನ ಹೆಡತಲೆಯನ್ನು ಕಡಿದು ಒದೆಯುತ್ತೇನೆ ಹೋಗು ಹೀಗೆಮ್ದು ಭೀಮನು ಗದೆಯಿಂದ ಕೌರವನ್ನು ಹೊಯ್ದನು.

ಅರ್ಥ:
ದುರ್ಮತಿ: ಕೆಟ್ಟ ಬುದ್ಧಿ; ಕುಲ: ವಂಶ; ಶಿಕ್ಷೆ: ದಂಡನೆ, ದಂಡ; ರಕ್ಷೆ: ಕಾಪಾಡು; ದೈವ: ಭಗವಂತ; ಹೊರಬಿ: ಹೊರಗಿನ; ಕಳಚು: ಬೇರ್ಪಡಿಸು; ಕೊಂದು: ಕೊಲ್ಲು, ಸಾಯಿಸು; ನೂರು: ಶತ; ತಲೆ: ಶಿರ; ಘಳಿಗೆ: ಸಮಯ, ಕಾಲ; ಹೆಡತಲೆ: ಹಿಂದಲೆ; ಒದೆ: ತಳ್ಳು, ನೂಕು; ಹೋಗು: ತೆರಳು; ಹೊಯ್ದು: ಹೊಡೆ;

ಪದವಿಂಗಡಣೆ:
ಎಲವೊ+ ದುರ್ಮತಿ+ ನಿನ್ನ+ ಕೌರವ
ಕುಲದ +ಶಿಕ್ಷಾ+ರಕ್ಷೆಗ್+ಇನ್ನಾ
ರೊಳರು +ಹೊರಬಿಗ +ದೈವವುಂಟೇ +ತಾನೆ +ದೈವ +ಕಣಾ
ಕಳಚಿದೆನಲಾ +ಕೊಂದು +ನೂರ್ವರ
ತಲೆಯನ್+ಇನ್ನ್+ಅರಘಳಿಗೆಯಲಿ +ಹೆಡ
ತಲೆಯನ್+ಒದೆವೆನು +ಹೋಗೆನುತ +ಹೊಯ್ದನು+ ಸುಯೋಧನನ

ಅಚ್ಚರಿ:
(೧) ಕೌರವನನ್ನು ಕರೆಯುವ ಪರಿ – ದುರ್ಮತಿ;
(೨) ಭೀಮನ ಧೀರ ನುಡಿ – ಇನ್ನರಘಳಿಗೆಯಲಿ ಹೆಡತಲೆಯನೊದೆವೆನು

ಪದ್ಯ ೧೮: ಕೌರವನು ಭೀಮನಿಗೆ ಏನೆಂದು ಉತ್ತರಿಸಿದನು?

ಸಾಯಲಾಗದೆ ಸುಭಟರಾಚಂ
ದ್ರಾಯತವೆ ತನು ವಿಧಿಯ ಟಿಪ್ಪಣ
ದಾಯುಷವು ತೀರಿದಡೆ ಸಾವರು ನಿನ್ನಲೇನಹುದು
ಕಾಯಲಳವೇ ನಿನಗೆ ಮುನಿದಡೆ
ನೋಯಿಸುವಡಳವಲ್ಲ ಫಡ ದೈ
ವಾಯತಕೆ ನೀನೇಕೆ ಬೆರತಿಹೆಯೆಂದನಾ ಭೂಪ (ಗದಾ ಪರ್ವ, ೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೌರವನು ಭೀಮನಿಗೆ ಉತ್ತರಿಸುತ್ತಾ, ಎಲೈ ಭೀಮ, ವೀರರು ಸಾಯಬಾರದೇ? ಜೀವನವು ಸೂರ್ಯ ಚಂದ್ರರಿರುವವರೆಗೂ ಇದ್ದೀತೇ? ಆಯುಷ್ಯ ತೀರಿದರೆ ಸಾಯುತ್ತಾರೆ. ವಿಧಿಯು ಒಬ್ಬನ ಆಯುಷ್ಯವಿಷ್ಟೇ ಎಂದು ಟಿಪ್ಪಣಿ ಬರೆಯುತ್ತದೆ. ಸಾಯುವವರನ್ನು ನೀನು ಉಳಿಸಬಲ್ಲೆಯಾ? ದೈವೇಚ್ಛೆಯಂತೆ ಎಲ್ಲವೂ ನಡೆಯುತ್ತದ, ನಾನು ಮಾಡಿದೆನೆಂಬ ಅಹಂಕಾರವೇಕೆ ಎಂದು ಹೇಳಿದನು.

ಅರ್ಥ:
ಸಾಯಲು: ಮರಣ ಹೊಂದಲು; ಸುಭಟ: ವೀರ; ಆಚಂದ್ರಾಯತ: ಸೂರ್ಯ ಚಂದ್ರರಿರುವ ವರೆಗೂ; ತನು: ದೇಹ; ವಿಧಿ: ನಿಯಮ; ಟಿಪ್ಪಣಿ: ಬರಹ; ಆಯುಷ್ಯ: ಜೀವಿತಾವಧಿ; ತೀರು: ಮುಗಿದುದು; ಸಾವು: ಮರನ; ಕಾಯಲು: ರಕ್ಷಿಸು; ಅಳವು: ಅಲ್ಲಾಡು; ಮುನಿ: ಕೋಪ; ನೋವು: ಪೆಟ್ಟು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ದೈವ: ಭಗವಮ್ತ; ಬೆರತಿ

ಪದವಿಂಗಡಣೆ:
ಸಾಯಲಾಗದೆ +ಸುಭಟರ್+ಆಚಂ
ದ್ರಾಯತವೆ +ತನು +ವಿಧಿಯ +ಟಿಪ್ಪಣದ್
ಆಯುಷವು +ತೀರಿದಡೆ +ಸಾವರು +ನಿನ್ನಲೇನಹುದು
ಕಾಯಲ್+ಅಳವೇ +ನಿನಗೆ +ಮುನಿದಡೆ
ನೋಯಿಸುವಡ್+ಅಳವಲ್ಲ +ಫಡ+ ದೈ
ವಾಯತಕೆ+ ನೀನೇಕೆ +ಬೆರತಿಹೆ+ಎಂದನಾ +ಭೂಪ

ಅಚ್ಚರಿ:
(೧) ಲೋಕ ನೀತಿ – ವಿಧಿಯ ಟಿಪ್ಪಣದಾಯುಷವು ತೀರಿದಡೆ ಸಾವರು