ಪದ್ಯ ೧೪: ಕೌರವನು ಯಾರಿಗೆ ಯುದ್ಧವನ್ನು ಚೆನ್ನಾಗಿ ನೋಡಿರೆಂದನು?

ಚಿತ್ತವಿಸು ಬಲರಾಮ ರಿಪುಗಳ
ತೆತ್ತಿಗನೆ ಲೇಸಾಗಿ ನೋದು ನೃ
ಪೋತ್ತಮರು ಪಾಂಚಾಲ ಸೃಂಜಯ ಸೋಮಕಾದಿಗಳು
ಇತ್ತಲಭಿಮುಖವಾಗಿ ರಥಿಕರು
ಮತ್ತ ಗಜದಾರೋಹಕರು ರಾ
ವುತ್ತರೀಕ್ಷಿಸಿ ನಮ್ಮ ಸಮರವನೆಂದನವನೀಶ (ಗದಾ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಬಲರಾಮ ಗಮನವಿಟ್ಟು ನೋದು, ಶತ್ರುಗಳ ಪೋಷಕನೇ ಆದ ಶ್ರೀಕೃಷ್ಣನೇ ಚೆನ್ನಾಗಿ ನೋಡು, ಪಾಂಚಾಲ, ಸೃಂಜಯ, ಸೋಮಕಾದಿ ರಾಜರೇ ನೋಡಿರಿ, ರಥಿಕರು, ಜೋದರು, ರಾವುತರು ನಮ್ಮ ಕಾಳಗದ ಕಣಕ್ಕೆ ಅಭಿಮುಖರಾಗಿ ನಮ್ಮ ಕಾಳಗವನ್ನು ನೋಡಿರಿ ಎಂದು ಹೇಳಿದನು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ರಿಪು: ವೈರಿ; ತೆತ್ತು: ಕುಂದಣಿಸು; ಲೇಸು: ಒಳಿತು; ನೋಡು: ವೀಕ್ಷಿಸು; ನೃಪ: ರಾಜ; ಉತ್ತಮ: ಶ್ರೇಷ್ಠ; ಆದಿ: ಮುಂತಾದ; ಅಭಿಮುಖ: ಎದುರು; ರಥಿಕ: ರಥಿ; ಮತ್ತ: ಅಮಲು; ಗಜ: ಆನೆ; ಆರೋಹಕ: ಮೇಲೇರು; ರಾವುತ: ಕುದುರೆ ಸವಾರ; ಈಕ್ಷಿಸು: ನೋಡು; ಸಮರ: ಯುದ್ಧ; ಅವನೀಶ: ರಾಜ;

ಪದವಿಂಗಡಣೆ:
ಚಿತ್ತವಿಸು +ಬಲರಾಮ +ರಿಪುಗಳ
ತೆತ್ತಿಗನೆ+ ಲೇಸಾಗಿ +ನೋಡು+ ನೃ
ಪೋತ್ತಮರು +ಪಾಂಚಾಲ +ಸೃಂಜಯ +ಸೋಮಕಾದಿಗಳು
ಇತ್ತಲ್+ಅಭಿಮುಖವಾಗಿ +ರಥಿಕರು
ಮತ್ತ+ ಗಜದ್+ಆರೋಹಕರು +ರಾ
ವುತ್ತರ್+ಈಕ್ಷಿಸಿ+ ನಮ್ಮ+ ಸಮರವನೆಂದನ್+ಅವನೀಶ

ಅಚ್ಚರಿ:
(೧) ಕೃಷ್ಣನನ್ನು ರಿಪುಗಳ ತೆತ್ತಿಗನೆ ಎಂದು ಕರೆದಿರುವುದು

ಪದ್ಯ ೧೩: ಕೌರವನು ಪಾಂಡವರನ್ನೇಕೆ ಕುಳ್ಳಿರೆಂದನು?

ಧಾರುಣೀಪತಿ ಕುಳ್ಳಿರೈ ಪರಿ
ವಾರ ಕುಳ್ಳಿರಿ ಪಾರ್ಥ ಸಾತ್ಯಕಿ
ವೀರ ಧೃಷ್ಟದ್ಯುಮ್ನ ಯಮಳ ಶಿಖಂಡಿ ಸೃಂಜಯರು
ವೀರ ಭಟರೆಮ್ಮಾಹವದ ವಿ
ಸ್ತಾರವನು ಸಮ ವಿಷಮ ಪಯಗತಿ
ಯೋರೆಪೋರೆಯನರಿವುದೆಂದನು ನಗುತ ಕುರುರಾಯ (ಗದಾ ಪರ್ವ, ೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕೌರವನು ನಗುತ್ತಾ, ಧ್ರಮಜ, ಕುಳಿತುಕೋ; ಪಾಂದವರೂ, ಸಾತ್ಯಕಿ, ಧೃಷ್ಟದ್ಯುಮ್ನ, ಶಿಖಂಡಿ, ಸೃಂಜಯರೆಲ್ಲರೂ ಕುಳಿತುಕೊಳ್ಳಿ. ನಮ್ಮ ಯುದ್ಧದ ಆದ್ರಮ್ತವನ್ನು ನಮ್ಮ ಪದಗತಿಗಳನ್ನು ತಪ್ಪು ತೊಡಕುಗಳನ್ನು ಕಂಡು ವಿಮರ್ಶಿಸಿ ಎಂದು ನುಡಿದನು.

ಅರ್ಥ:
ಧಾರುಣೀಪತಿ: ರಾಜ; ಕುಳ್ಳಿರಿ: ಆಸೀನರಾಗಿರಿ; ಪರಿವಾರ: ಪರಿಜನ, ಸಂಸಾರ; ವೀರ: ಶೂರ; ಯಮಳ: ಅವಳಿ; ಭಟ: ಸೈನಿಕ, ಶೂರ; ಆಹವ: ಯುದ್ಧ; ವಿಸ್ತಾರ: ಹರಡು, ವಿಶಾಲ, ವ್ಯಾಪ್ತಿ; ಸಮ: ಸರಿಯಾದ; ವಿಷಮ: ಕಷ್ಟಕರವಾದುದು; ಪಯಗತಿ: ಚಲನೆಯ ವೇಗ; ಓರೆಪೋರೆ: ವಕ್ರ; ಅರಿ: ತಿಳಿ; ನಗು: ಹರ್ಷ;

ಪದವಿಂಗಡಣೆ:
ಧಾರುಣೀಪತಿ +ಕುಳ್ಳಿರೈ+ ಪರಿ
ವಾರ +ಕುಳ್ಳಿರಿ+ ಪಾರ್ಥ +ಸಾತ್ಯಕಿ
ವೀರ +ಧೃಷ್ಟದ್ಯುಮ್ನ+ ಯಮಳ +ಶಿಖಂಡಿ +ಸೃಂಜಯರು
ವೀರ +ಭಟರ್+ಎಮ್ಮ್+ಆಹವದ+ ವಿ
ಸ್ತಾರವನು+ ಸಮ +ವಿಷಮ +ಪಯಗತಿ
ಓರೆಪೋರೆಯನ್+ಅರಿವುದೆಂದನು +ನಗುತ +ಕುರುರಾಯ

ಅಚ್ಚರಿ:
(೧) ವೀರ, ಪರಿವಾರ, ವಿಸ್ತಾರ – ಪ್ರಾಸ ಪದಗಳು
(೨) ರಾಯ, ಧಾರುಣೀಪತಿ – ಸಮಾನಾರ್ಥಕ ಪದ
(೩) ತೊಡಕು ಎಂದು ಹೇಳಲು ಆಡು ಭಾಷೆಯ ಪದದ ಬಳಕೆ – ಓರೆಪೋರೆ

ಪದ್ಯ ೧೨: ಬಲರಾಮನೆಂದು ತೀರ್ಥಯಾತ್ರೆಗೆ ಹೊರಟನು?

ಅವನಿಪತಿ ಕೇಳ್ ಪುಷ್ಯದಲಿ ಸಂ
ಭವಿಸಿದುದು ನಿರ್ಗಮನ ಬಳಿಕಾ
ಶ್ರವನನಕ್ಷತ್ರದಲಿ ಕಂಡನು ಕೃಷ್ಣ ಪಾಂಡವರ
ಅವರು ನೋಟಕರಾದರೀ ಕೌ
ರವ ವೃಕೋದರರಂಕ ಮಸೆದು
ತ್ಸವದಿ ಕಳನೇರಿದರು ಹಾಯಿಕಿ ಹಿಡಿದು ನಿಜಗದೆಯ (ಗದಾ ಪರ್ವ, ೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಬಲರಾಮನು ಪುಷ್ಯನಕ್ಷತ್ರದಲ್ಲಿ ತೀರ್ಥಯಾತ್ರೆಗೆ ಹೊರಟನು. ಅವನು ಕೃಷ್ಣನನ್ನು ಪಾಂಡವರನ್ನು ನೋಡಿದ ದಿನ ಶ್ರವಣ ನಕ್ಷತ್ರವಿತ್ತು. ರಣರಮ್ಗದಲ್ಲಿದ್ದ ಎಲ್ಲರೂ ನೋಟಕರಾದರು. ಭೀಮ ದುರ್ಯೋಧನರು ತೋಳುತಟ್ಟಿ ತಮ್ಮ ಗದೆಗಲನ್ನು ಹಿಡಿದು ರಣರಂಗವನ್ನು ಪ್ರವೇಶಿಸಿದರು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಸಂಭವಿಸು: ಹುಟ್ಟು; ನಿರ್ಗಮನ: ಹೊರಗೆ ಹೊಗು; ಬಳಿಕ: ನಂತರ; ನಕ್ಷತ್ರ: ತಾರೆ; ಕಂಡು: ನೋಡು; ನೋಟಕ: ನೋಡುವವ; ವೃಕೋದರ: ಭೀಮ; ಮಸೆ: ಹರಿತವಾದುದು; ಉತ್ಸವ: ಸಂಭ್ರಮ; ಕಳ: ರಣರಂಗ; ಹಾಯಿಕು: ಹಾಕು; ಹಿಡಿ: ಗ್ರಹಿಸು; ಗದೆ: ಮುದ್ಗರ;

ಪದವಿಂಗಡಣೆ:
ಅವನಿಪತಿ+ ಕೇಳ್ +ಪುಷ್ಯದಲಿ +ಸಂ
ಭವಿಸಿದುದು +ನಿರ್ಗಮನ +ಬಳಿಕಾ
ಶ್ರವಣ+ ನಕ್ಷತ್ರದಲಿ +ಕಂಡನು +ಕೃಷ್ಣ+ ಪಾಂಡವರ
ಅವರು +ನೋಟಕರಾದರ್+ಈ+ ಕೌ
ರವ +ವೃಕೋದರರ್+ಅಂಕ +ಮಸೆದ್
ಉತ್ಸವದಿ +ಕಳನೇರಿದರು +ಹಾಯಿಕಿ +ಹಿಡಿದು +ನಿಜಗದೆಯ

ಅಚ್ಚರಿ:
(೧) ನಕ್ಷತ್ರಗಳ ಹೆಸರು – ಪುಷ್ಯ, ಶ್ರವಣ;