ಪದ್ಯ ೫: ಕೃಷ್ಣನು ಬಲರಾಮನಿಗೇನು ಹೇಳಿದ?

ತಿಳಿದು ನೋಡಿರೆ ರಾಮ ಧರ್ಮ
ಸ್ಥಳಕೆ ನೀವು ಸಹಾಯವಿನಿಬರ
ಗೆಲವು ನಿರ್ಮಳ ಧರ್ಮಮೂಲವೊ ಧರ್ಮವಿರಹಿತವೊ
ಛಲವ ಬಿಡಿರೇ ನಿಮ್ಮ ಶಿಷ್ಯನು
ಕಲಿವೃಕೋದರನಲ್ಲವೇ ತವೆ
ಬಳಸಬಹುದೇ ಪಕ್ಷಪಾತದೊಳೆಂದನಸುರಾರಿ (ಗದಾ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಬಲರಾಮನಿಗೆ ನುಡಿಯುತ್ತಾ, ಅಣ್ಣ ಆಲೋಚಿಸಿ ನೋಡು, ಧರ್ಮವೆಲ್ಲಿದೆಯೋ ಅಲ್ಲಿ ನಿನ್ನ ಸಹಾಯವಿರುತ್ತದೆ. ಪಾಂಡವ ವಿಜಯವು ಧರ್ಮದಿಂದಾದುದೋ ಇಲ್ಲವೇ ಧರ್ಮದಿಂದ ದೂರವಾಗಿರುವುದೋ? ನಿಮ್ಮ ಛಲವನ್ನು ಬಿಡಿ. ಭೀಮನೂ ಸಹ ನಿನ್ನ ಶಿಷ್ಯನಲ್ಲವೇ? ಹೀಗಿದ್ದೂ ನೀವು ಪಕ್ಷಪಾತ ಮಾಡಬಹುದೇ ಎಂದು ಪ್ರಶ್ನಿಸಿದನು.

ಅರ್ಥ:
ತಿಳಿ: ಅರ್ಥೈಸು; ನೋಡು: ವೀಕ್ಷಿಸು; ಧರ್ಮ: ಧಾರಣೆ ಮಾಡಿದುದು; ಸ್ಥಳ: ಪ್ರದೇಶ; ಸಹಾಯ: ನೆರವು; ಇನಿಬರು: ಇಷ್ಟುಜನ; ಗೆಲುವು: ಜಯ; ನಿರ್ಮಳ: ಶುದ್ಧ; ಮೂಲ: ಉಗಮ; ವಿರಹಿತ: ಬಿಟ್ಟವನು, ತೊರೆದವನು; ಛಲ: ದೃಢ ನಿಶ್ಚಯ; ಬಿಡು: ತೊರೆ; ಶಿಷ್ಯ: ವಿದ್ಯಾರ್ಥಿ; ಕಲಿ: ಶೂರ; ವೃಕೋದರ: ಭೀಮ; ತವೆ: ಅತಿಶಯವಾಗಿ, ಹೆಚ್ಚಾಗಿ; ಬಳಸು: ಆವರಿಸುವಿಕೆ; ಪಕ್ಷಪಾತ: ಭೇದ, ವಂಚನೆ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ತಿಳಿದು +ನೋಡಿರೆ +ರಾಮ +ಧರ್ಮ
ಸ್ಥಳಕೆ +ನೀವು +ಸಹಾಯವ್+ಇನಿಬರ
ಗೆಲವು +ನಿರ್ಮಳ +ಧರ್ಮಮೂಲವೊ +ಧರ್ಮವಿರಹಿತವೊ
ಛಲವ +ಬಿಡಿರೇ +ನಿಮ್ಮ+ ಶಿಷ್ಯನು
ಕಲಿ+ವೃಕೋದರನಲ್ಲವೇ +ತವೆ
ಬಳಸಬಹುದೇ +ಪಕ್ಷಪಾತದೊಳ್+ಎಂದನ್+ಅಸುರಾರಿ

ಅಚ್ಚರಿ:
(೧) ಧರ್ಮಮೂಲವೋ, ಧರ್ಮವಿರಹಿತವೊ – ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ