ಪದ್ಯ ೫೧: ಕೃಷ್ಣನೇಕೆ ತನ್ನ ಪುಣ್ಯವನ್ನು ಸ್ಮರಿಸಿದನು?

ಇಂದು ನಮ್ಮಯ ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ ಭೀಮ ಕಾದುವು
ದೆಂದು ಜಾರಿಸಿ ನಿಮ್ಮ ಬಿಟ್ಟನು ನಮ್ಮ ಪುಣ್ಯದಲಿ
ಇಂದಿನೀ ಸ್ಮರದಲಿ ಪವನಜ
ನಿಂದಡೇನಹುದೆಂಬ ಚಿತ್ತದ
ಸಂದೆಯವು ನಮಗುಂಟು ಕೌರವನೈಸು ಬಲುಹೆಂದ (ಗದಾ ಪರ್ವ, ೫ ಸಂಧಿ, ೫೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಇಂದು ನಮ್ಮ ಭಾಗ್ಯಲಕ್ಷ್ಮಿ ಕಣ್ತೆರೆದು ನೋಡಿದ್ದರಿಂದ, ಅವನು ನಿಮ್ಮನ್ನು ಬಿಟ್ಟು ಭೀಮನನ್ನು ಯುದ್ಧಕ್ಕೆ ಕರೆದನು. ಇದು ನಮ್ಮ ಪೂರ್ವ ಪುಣ್ಯದ ಫಲ, ಈ ದಿವಸ ಭೀಮನು ಯುದ್ಧಕ್ಕೆ ನಿಂತಾಗ ಏನಾಗುವುದೋ ಎಂಬ ಸಂದೇಹ ನನಗಿದೆ. ಕೌರವನು ಅಷ್ಟು ಬಲಶಾಲಿ ಎಂದು ಕೃಷ್ಣನು ಹೇಳಿದನು.

ಅರ್ಥ:
ಭಾಗ್ಯ: ಮಂಗಳು, ಶುಭ; ಲಕ್ಷ್ಮಿ: ಐಶ್ವರ್ಯ ದೇವತೆ; ಕಂದೆರೆವೆ: ಕಣ್ತೆರೆದು ನೋಡು; ಕಾದು: ಹೋರಾಡು; ಜಾರು: ಬೀಳು; ಪುಣ್ಯ: ಸದಾಚಾರ; ಸಮರ: ಯುದ್ಧ; ಪವನಜ: ಭೀಮ; ಚಿತ್ತ: ಮನಸ್ಸು; ಸಂದೆಯ: ಸಂದೇಹ; ಐಸು: ಅಷ್ಟು; ಬಲುಹ: ಬಲಶಾಲಿ;

ಪದವಿಂಗಡಣೆ:
ಇಂದು+ ನಮ್ಮಯ +ಭಾಗ್ಯಲಕ್ಷ್ಮಿಯ
ಕಂದೆರೆವೆಯಲಿ +ಭೀಮ +ಕಾದುವು
ದೆಂದು +ಜಾರಿಸಿ +ನಿಮ್ಮ +ಬಿಟ್ಟನು +ನಮ್ಮ +ಪುಣ್ಯದಲಿ
ಇಂದಿನೀ +ಸಮರದಲಿ +ಪವನಜ
ನಿಂದಡ್+ಏನಹುದೆಂಬ +ಚಿತ್ತದ
ಸಂದೆಯವು +ನಮಗುಂಟು +ಕೌರವನ್+ಐಸು +ಬಲುಹೆಂದ

ಅಚ್ಚರಿ:
(೧) ನಿಮ್ಮ, ನಮ್ಮ – ಪ್ರಾಸ ಪದಗಳು
(೨) ಭೀಮ, ಪವನಜ – ಭೀಮನನ್ನು ಕರೆದ ಪರಿ