ಪದ್ಯ ೨೯: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೬?

ಅರಸನಲಿ ಹಗೆಯಿಲ್ಲ ಯಮಳರು
ತರಳರಲಿ ಮುನಿಸಿಲ್ಲ ಫಲುಗುಣ
ನರೆವಿರೋಧಿ ಸಗರ್ವಿ ಭೀಮನ ಬಾಡ ಕೊಯ್ಕೊಯ್ದು
ಮರುಳ ಬಳಗವ ತಣಿಸಿದಡೆ
ಹಿರಿಯರಸ ಸಂಧಾನವೆಂಬೈ
ಕುರುಪತಿಯೆ ನೆರೆ ವೈರಿ ಭೀಮನ ಸೀಳಲೇಳೆಂದ (ಗದಾ ಪರ್ವ, ೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧರ್ಮಜನಲ್ಲಿ ವೈರವಿಲ್ಲ, ನಕುಲ ಸಹದೇವರು ಚಿಕ್ಕವರು, ಅವರ ಮೇಲೆ ಸಿಟ್ಟಿಲ್ಲ. ಅರ್ಜುನನ ಮೇಲೆ ಅರ್ಧ ವೈರವಿದೆ. ಗರ್ವಿತನಾದ ಭೀಮನ ಮಾಂಸವನ್ನು ಕೊಯ್ಕೊಯ್ದು ಭೂತಗಣಗಳನ್ನು ತೃಪ್ತಿಪಡಿಸಿ ಅಣ್ಣನೊಡನೆ ಸಂಧಾನ ಮಾಡಿಕೊಳ್ಳುತ್ತೇನೆ ಎನ್ನುತ್ತಿದ್ದೇಯಲ್ಲಾ? ಕೌರವ ಪರಮವೈರಿಯಾದ ಭೀಮನನ್ನು ಸೀಳಲು ಏಳು ಎಂದು ಕೌರವನನ್ನು ರೇಗಿಸಿದನು.

ಅರ್ಥ:
ಅರಸ: ರಾಜ; ಹಗೆ: ವೈರಿ; ಯಮಳ: ಅವಳಿ ಮಕ್ಕಳು; ತರಳ: ಬಾಲಕ; ಮುನಿಸು: ಕೋಪ, ಸಿಟ್ಟು; ವಿರೋಧಿ: ವೈರಿ; ಗರ್ವಿ: ಅಹಂಕಾರಿ; ಬಾಡು: ಮಾಂಸ; ಕೊಯ್ದು: ಸೀಳು; ಮರುಳ: ಭೂತ; ಬಳಗ: ಗುಂಪು; ತಣಿಸು: ತಂಪು, ಶೈತ್ಯ; ಹಿರಿ: ದೊಡ್ಡವ; ಅರಸ: ರಾಜ; ಸಂಧಾನ: ಸೇರಿಸುವುದು, ಹೊಂದಿಸುವುದು; ನೆರೆ: ಪಕ್ಕ, ಪಾರ್ಶ್ವ; ವೈರಿ: ಶತ್ರು; ಸೀಳು: ಚೂರು, ತುಂಡು; ಅರೆ: ಅರ್ಧ;

ಪದವಿಂಗಡಣೆ:
ಅರಸನಲಿ +ಹಗೆಯಿಲ್ಲ +ಯಮಳರು
ತರಳರಲಿ+ ಮುನಿಸಿಲ್ಲ +ಫಲುಗುಣನ್
ಅರೆವಿರೋಧಿ +ಸಗರ್ವಿ+ ಭೀಮನ +ಬಾಡ+ ಕೊಯ್ಕೊಯ್ದು
ಮರುಳ +ಬಳಗವ +ತಣಿಸಿದಡೆ
ಹಿರಿಯರಸ +ಸಂಧಾನವ್+ಎಂಬೈ
ಕುರುಪತಿಯೆ +ನೆರೆ +ವೈರಿ +ಭೀಮನ +ಸೀಳಲ್+ಏಳೆಂದ

ಅಚ್ಚರಿ:
(೧) ಕೌರವನನ್ನು ಪ್ರಚೋದಿಸುವ ಪರಿ – ಸಗರ್ವಿ ಭೀಮನ ಬಾಡ ಕೊಯ್ಕೊಯ್ದು ಮರುಳ ಬಳಗವ ತಣಿಸು

ಪದ್ಯ ೨೮: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೫?

ಜಲವಹೊಕ್ಕನ ಹುಲ್ಲ ಕಚ್ಚಿದ
ಖಳನ ತರುಗಿರಿಶಿಖರದಲಿ ಕಾ
ಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ
ಕೊಲುವುದನುಚಿತವೆಂಬ ಶಾಸ್ತ್ರವ
ತಿಳಿದು ನಂಬಿದೆ ನಿನ್ನನೊಬ್ಬನ
ಕೊಲುವುದಕೆ ಶ್ರುತಶಾಸ್ತ್ರರಾವಲ್ಲೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀರನ್ನು ಹೊಕ್ಕವನನ್ನು, ಹುಲ್ಲನ್ನು ಕಚ್ಚಿದ ನೀಚನನ್ನು, ಮರದ ಮೇಲೆ ಬೆಟ್ಟದ ಕೋಡುಗಲ್ಲಿನ ಮೇಲೆ ಕಾಲನ್ನು ಸಿಕ್ಕಿಸಿದವನನ್ನು, ಹುತ್ತವನ್ನೇರಿದವನನ್ನು, ಆಯುಧವಿಲ್ಲದವನನ್ನು ಕೊಲ್ಲುವುದು ಉಚಿತವಲ್ಲೆವೆಂಬ ಶಾಸ್ತ್ರವನ್ನು ನಂಬಿದ್ದರೆ ಕೇಳು, ನಿನ್ನನ್ನು ಕೊಲ್ಲುವುದಕ್ಕೆ ನಾವು ಶಾಸ್ತ್ರವನ್ನು ಕೇಳಿಲ್ಲ, ಅರಿತಿಲ್ಲ ಎಂದು ಭೀಮನು ಗರ್ಜಿಸಿದನು.

ಅರ್ಥ:
ಜಲ: ನೀರು; ಹೊಕ್ಕು: ಸೇರು; ಹುಲ್ಲು: ತೃಣ; ಕಚ್ಚು: ಕಡಿ, ನೋಯು; ಖಳ: ದುಷ್ಟ; ತರು: ಮರ; ಗಿರಿ: ಬೆಟ್ಟ; ಶಿಖರ: ತುದಿ; ಕಾಲು: ಪಾದ; ತೊಳಸಿದ: ಸಿಕ್ಕಿಸಿದ; ವಲ್ಮೀಕ: ಹುತ್ತ; ಸಂಗ: ಜೊತೆ; ನಿರಾಯುಧ: ಶಸ್ತ್ರವಿಲ್ಲದ ಸ್ಥಿತಿ; ಕೊಲು: ಸಾಯಿಸು; ಅನುಚಿತ: ಸರಿಯಲ್ಲದ; ಶಾಸ್ತ್ರ: ಧರ್ಮ ಗ್ರಂಥ; ತಿಳಿ: ಗೊತ್ತುಮಾಡು; ನಂಬು: ವಿಶ್ವಾಸವಿಡು; ಕೊಲು: ಸಾಯಿಸು; ಶ್ರುತ: ಕೇಳಿದ, ಆಲಿಸಿದ;

ಪದವಿಂಗಡಣೆ:
ಜಲವ+ಹೊಕ್ಕನ +ಹುಲ್ಲ +ಕಚ್ಚಿದ
ಖಳನ +ತರು+ಗಿರಿ+ಶಿಖರದಲಿ +ಕಾ
ಲ್ದೊಳಸಿದನ +ವಲ್ಮೀಕ+ಸಂಗತನನು+ ನಿರಾಯುಧನ
ಕೊಲುವುದ್+ಅನುಚಿತವೆಂಬ +ಶಾಸ್ತ್ರವ
ತಿಳಿದು +ನಂಬಿದೆ +ನಿನ್ನನೊಬ್ಬನ
ಕೊಲುವುದಕೆ+ ಶ್ರುತ+ಶಾಸ್ತ್ರರಾವಲ್ಲ್+ಎಂದನಾ +ಭೀಮ

ಅಚ್ಚರಿ:
(೧) ಶಾಸ್ತ್ರದ ಪ್ರಕಾರ ಯಾರನ್ನು ಕೊಲುವುದು ಅನುಚಿತ – ಜಲವಹೊಕ್ಕನ, ಹುಲ್ಲ ಕಚ್ಚಿದ ಖಳನ, ತರು ಗಿರಿ ಶಿಖರದಲಿ ಕಾಲ್ದೊಳಸಿದನ ವಲ್ಮೀಕಸಂಗತನನು ನಿರಾಯುಧನ ಕೊಲುವುದನುಚಿತ

ಪದ್ಯ ೨೭: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೪?

ಕೆಡಹಿ ದುಶ್ಯಾಸನನ ರಕುತವ
ಕುಡಿದವನು ತಾನಲ್ಲಲೇ ನಿ
ನ್ನೊಡನೆ ಹುಟ್ಟಿದ ನೂರ ನುಂಗಿದ ಕಾಲಯಮನಲ್ಲಾ
ಅಡಗಿದಡೆ ಬಿಡುವೆನೆ ಭಯಜ್ವರ
ಹಿಡಿದ ನಿನ್ನನು ಸೆಳೆದು ರಣದಲಿ
ತೊಡೆಯ ಕಳಚವ ಮೃತ್ಯು ಭೀಮನ ಕಯ್ಯ ನೋಡೆಂದ (ಗದಾ ಪರ್ವ, ೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ನಿನ್ನ ತಮ್ಮ ದುಶ್ಯಾಸನನನ್ನು ಕೆಡವಿ ರಕ್ತವನು ಕುಡಿದವನು ನಾನಲ್ಲವೇ? ನಿನ್ನ ನೂರುಜನ ತಮ್ಮಂದಿರಿಗೆ ನಾನು ಕಾಲಯಮನಾಗಲಿಲ್ಲವೇ? ನೀರಲ್ಲಿ ಅಡಗಿ ಕುಳಿತರೆ ನಾನು ಬಿಡುವೆನೇ? ಭಯಜ್ವರವೇರಿರುವ ನಿನ್ನನ್ನು ಮೇಲಕ್ಕೆತ್ತಲು ತೊಡೆಯನ್ನು ಮುರಿಯುವ ಮೃತ್ಯುವಾದ ಭೀಮನ ಕೈನೋಡು ಎಂದು ಕೌರವನನ್ನು ಪ್ರಚೋದಿಸಿದನು.

ಅರ್ಥ:
ಕೆಡಹು: ಬೀಳು; ರಕುತ: ನೆತ್ತರು; ಕುಡಿ: ಪಾನಮಾಡು; ಹುಟ್ಟು: ಜನಿಸು; ನೂರು: ಶತ; ನುಂಗು: ಕಬಳಿಸು; ಕಾಲ: ಸಮಯ; ಯಮ: ಮೃತ್ಯುದೇವತೆ; ಅಡಗು: ಅವಿತುಕೊಳ್ಳು; ಬಿಡು: ತೆರಳು; ಭಯ: ಹೆದರು, ಅಂಜಿಕೆ; ಜ್ವರ: ಬೇಗುದಿ; ಹಿಡಿ: ಗ್ರಹಿಸು; ಸೆಳೆ: ಗ್ರಹಿಸು; ರಣ: ಯುದ್ಧ; ತೊಡೆ: ಸೊಂಟದಿಂದ ಮಂಡಿಯವರೆಗಿನ ಭಾಗ, ಊರು; ಕಳಚು: ಬೇರ್ಪಡಿಸು, ಬೇರೆಮಾಡು; ಮೃತ್ಯು: ಸಾವು; ಕಯ್ಯ: ಹಸ್ತ; ನೋಡು: ವೀಕ್ಷಿಸು;

ಪದವಿಂಗಡಣೆ:
ಕೆಡಹಿ +ದುಶ್ಯಾಸನನ+ ರಕುತವ
ಕುಡಿದವನು +ತಾನಲ್ಲಲೇ +ನಿ
ನ್ನೊಡನೆ +ಹುಟ್ಟಿದ +ನೂರ +ನುಂಗಿದ+ ಕಾಲಯಮನಲ್ಲಾ
ಅಡಗಿದಡೆ +ಬಿಡುವೆನೆ +ಭಯಜ್ವರ
ಹಿಡಿದ +ನಿನ್ನನು +ಸೆಳೆದು +ರಣದಲಿ
ತೊಡೆಯ +ಕಳಚವ+ ಮೃತ್ಯು +ಭೀಮನ +ಕಯ್ಯ +ನೋಡೆಂದ

ಅಚ್ಚರಿ:
(೧) ಹಂಗಿಸುವ ಪರಿ – ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳಚವ ಮೃತ್ಯು

ಪದ್ಯ ೨೬: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೩?

ಭೀಮನೆನೆ ಭುಗಿಲೆಂಬ ರೋಷದ
ತಾಮಸವ ಬೀಳ್ಕೊಟ್ಟೆಲಾ ನಿ
ರ್ನಾಮವಾದುದೆ ಬಿರುದು ಪಾಂಡವತಿಮಿರರವಿಯೆಂಬ
ಭೀಮವನದಾವಾಗ್ನಿ ಹೊರವಡು
ಭೀಮಭಾಸ್ಕರರಾಹು ಹೊರವಡು
ಭೀಮಗರ್ಜನೆ ಮಧುರಗೀತವೆ ನೃಪತಿಯೇಳೆಂದ (ಗದಾ ಪರ್ವ, ೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನೆಂಬ ಹೆಸರನ್ನು ಕೇಳಿದೊಡನೆ ಭುಗಿಲೆಂದು ಏಳುತ್ತಿದ್ದ ತಾಮಸಕೋಪವನ್ನು ಎತ್ತಲೋ ಕಳಿಸಿಬಿಟ್ಟೆಯಾ? ಪಾಂಡವ ತಿಮಿರರವಿಯೆಂಬ ಬಿರುದು ಹೆಸರಿಲ್ಲದೆ ಹೋಗಿಬಿಟ್ಟಿತೇ? ಭೀಮನೆಂಬ ಕಾಡಿಗೆ ಕಾಡುಗಿಚ್ಚೆಂದು ಕೊಚ್ಚಿಕೊಳ್ಳುತ್ತಿದ್ದವನೇ ಹೊರಕ್ಕೆ ಬಾ, ಭೀಮನೆಂಬ ಸೂರ್ಯನಿಗೆ ರಾಹುವೇ ಹೊರಕ್ಕೆ ಬಾ, ಭೀಮಗರ್ಜನೆ ನಿನಗೆ ಮಧುರ ಗೀತೆಯೇ? ರಾಜಾ ಏಳು ಎಂದು ಭೀಮನು ಕೌರವನನ್ನು ಹಂಗಿಸಿದನು.

ಅರ್ಥ:
ಭುಗಿಲ್- ಭುಗಿಲ್ ಎಂಬ ಶಬ್ದ; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ; ಬೀಳ್ಕೊಡು: ತೆರಳು; ನಿರ್ನಾಮ: ನಾಶ, ಅಳಿವು; ಬಿರುದು: ಗೌರವ ಸೂಚಕ ಪದ; ತಿಮಿರ: ಅಂಧಕಾರ; ರವಿ: ಸೂರ್ಯ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಹೊರವಡು: ತೆರಳು; ಭಾಸ್ಕರ: ಸೂರ್ಯ; ಗರ್ಜನೆ: ಆರ್ಭಟ, ಕೂಗು; ಮಧುರ: ಇಂಪುಆದ; ಗೀತ: ಹಾಡು; ನೃಪತಿ: ರಾಜ; ವನ: ಕಾಡು;

ಪದವಿಂಗಡಣೆ:
ಭೀಮನ್+ಎನೆ +ಭುಗಿಲೆಂಬ +ರೋಷದ
ತಾಮಸವ +ಬೀಳ್ಕೊಟ್ಟೆಲಾ +ನಿ
ರ್ನಾಮವಾದುದೆ +ಬಿರುದು +ಪಾಂಡವ +ತಿಮಿರ+ರವಿಯೆಂಬ
ಭೀಮ+ವನ+ದಾವಾಗ್ನಿ +ಹೊರವಡು
ಭೀಮ+ಭಾಸ್ಕರ+ರಾಹು +ಹೊರವಡು
ಭೀಮಗರ್ಜನೆ +ಮಧುರಗೀತವೆ+ ನೃಪತಿ+ಏಳೆಂದ

ಅಚ್ಚರಿ:
(೧) ಹೊರವಡು – ೪, ೫ ಸಾಲಿನ ಕೊನೆಯ ಪದ
(೨) ರೂಪಕದ ಪ್ರಯೋಗ – ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ

ಪದ್ಯ ೨೫: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೨?

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎಳೊ ಕೌರವ, ಹಿಂದೆ ಯುಧಿಷ್ಠಿರನ ಪಟ್ಟದ ರಾಣಿಯಾದ ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸುಲಿಸಿದ ಛಲವು ಎಲ್ಲಿಗೆ ಹೋಯಿತು? ವೈರಿಗಳನ್ನು ಕಾಡಿಗಟ್ಟಿದೆನಂಬ ಸಂತೋಷ ಎಲ್ಲಿಗೆ ಹೋಯಿತು? ಎಲವೋ ದುಷ್ಟಶಿರೋಮಣಿ, ಗಂಧರ್ವನು ನಿನ್ನ ಕೂದಲುಗಳಿಂದ ನಿನ್ನ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದಾಗ ಬಿಡಿಸಿದವರು ಯಾರು?

ಅರ್ಥ:
ರಾಯ: ರಾಜ; ಪಟ್ಟದರಸಿ: ಮಹಾರಾಣಿ; ಪಟ್ಟ: ಸ್ಥಾನ; ಸುಲಿಸು: ಕಿತ್ತುಕೊಳ್ಳು; ಛಲ: ದೃಢ ನಿಶ್ಚಯ; ಹಗೆ: ವೈರ; ಹಳುವು: ಕಾಡು; ಹೊಗಿಸು: ಸೇರಿಸು; ಸುಮ್ಮಾನ: ಸಂತೋಷ; ಖಳ: ದುಷ್ತ; ಶಿರೋಮಣಿ: ಅಗ್ರಗಣ್ಯ, ಶ್ರೇಷ್ಠ; ಕೂದಲು: ರೋಮ; ಕೈ: ಹಸ್ತ; ಕಟ್ಟು: ಬಂಧಿಸು; ಖೇಚರ: ಗಗನದಲ್ಲಿ ಸಂಚರಿಸುವವ, ಗಂಧರ್ವ, ದೇವತೆ; ಎಳೆ: ನೂಲಿನ ಎಳೆ, ಸೂತ್ರ; ಬಿಡಿಸು: ಸಡಲಿಸು;

ಪದವಿಂಗಡಣೆ:
ಎಲವೊ +ರಾಯನ +ಪಟ್ಟದರಸಿಯ
ಸುಲಿಸಿದ+ಆ +ಛಲವೆಲ್ಲಿ +ಹಗೆಗಳ
ಹಳುವದಲಿ +ಹೊಗಿಸಿದೆನ್+ಎನಿಪ+ ಸುಮ್ಮಾನ +ತಾನೆಲ್ಲಿ
ಖಳ +ಶಿರೋಮಣಿ +ನಿನ್ನ +ತಲೆಗೂ
ದಲಲಿ +ಕೈಗಳ+ ಕಟ್ಟಿ +ಖೇಚರನ್
ಎಳೆಯೆ +ಬಿಡಿಸಿದರ್+ಆರು +ಕೌರವ +ಎಂದನಾ +ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಹ ಕಾರದ ತ್ರಿವಳಿ ಪದ – ಹಗೆಗಳ ಹಳುವದಲಿ ಹೊಗಿಸಿದೆನೆನಿಪ

ಪದ್ಯ ೨೪: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೧?

ವಿಷವನಿಕ್ಕಿದೆ ಹಾವಿನಲಿ ಬಂ
ಧಿಸಿದೆ ಮಡುವಿನೊಳಿಕ್ಕಿ ಬಳಿಕು
ಬ್ಬಸವ ಮಾಡಿದೆ ಹಿಂದೆ ಮನಮುನಿಸಾಗಿ ಬಾಲ್ಯದಲಿ
ವಸತಿಯಲಿ ಬಳಿಕಗ್ನಿ ದೇವರ
ಪಸರಿಸಿದೆ ಪುಣ್ಯದಲಿ ನಾವ್ ಜೀ
ವಿಸಿದೆವಡಗಿದಡಿನ್ನು ಬಿಡುವೆನೆಯೆಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಕೌರವ, ಹಿಂದೆ ಬಾಲಯ್ದಲ್ಲಿ ನನಗೆ ವಿಷವನ್ನಿಟ್ಟೆ, ಹಾವಿನಿಂದ ಕಟ್ಟಿಹಾಕಿದೆ. ಮಡುವಿನಲ್ಲಿ ಮುಳುಗಿಸಿದೆ. ಬಳಿಕ ಅರಗಿನ ಮನೆಗೆ ಬೆಂಕಿ ಹಚ್ಚಿದೆ ಪುಣ್ಯದಿಂದ ನಾವು ಬದುಕಿಕೊಂಡೆವು. ನೀರಿನಲ್ಲಿ ಮುಳುಗಿದರೆ ಈಗ ಬಿಟ್ಟೇನೇ ಎಂದು ಭೀಮನು ಕೌರವನನ್ನು ಪ್ರಚೋದಿಸಿದನು.

ಅರ್ಥ:
ವಿಷ: ಗರಳ; ಹಾವು: ಉರಗ; ಬಂಧಿಸು: ಕಟ್ಟು, ಸೆರೆ; ಮಡು: ನದಿ, ಹೊಳೆ ಮುಂ.ವುಗಳಲ್ಲಿ ಆಳವಾದ ನೀರಿರುವ ಪ್ರದೇಶ; ಉಬ್ಬಸ: ಸಂಕಟ, ಮೇಲುಸಿರು; ಬಳಿಕ: ನಂತರ; ಹಿಂದೆ: ಗತಿಸಿದ ಕಾಲ; ಮನ: ಮನಸ್ಸು; ಮುನಿಸು: ಕೋಪ; ಬಾಲ್ಯ: ಚಿಕ್ಕವ; ವಸತಿ: ವಾಸಮಾಡುವಿಕೆ; ಅಗ್ನಿ: ಬೆಂಕಿ; ಪಸರಿಸು: ಹರಡು; ಪುಣ್ಯ: ಸದಾಚಾರ; ಜೀವಿಸು: ಬದುಕು; ಅಡಗು: ಅವಿತುಕೊಳ್ಳು; ಬಿಡು: ತೊರೆ;

ಪದವಿಂಗಡಣೆ:
ವಿಷವನಿಕ್ಕಿದೆ +ಹಾವಿನಲಿ +ಬಂ
ಧಿಸಿದೆ +ಮಡುವಿನೊಳಿಕ್ಕಿ +ಬಳಿಕ್
ಉಬ್ಬಸವ +ಮಾಡಿದೆ +ಹಿಂದೆ +ಮನ+ಮುನಿಸಾಗಿ +ಬಾಲ್ಯದಲಿ
ವಸತಿಯಲಿ +ಬಳಿಕ್+ಅಗ್ನಿ+ ದೇವರ
ಪಸರಿಸಿದೆ +ಪುಣ್ಯದಲಿ +ನಾವ್ +ಜೀ
ವಿಸಿದೆವ್+ಅಡಗಿದಡ್+ಇನ್ನು +ಬಿಡುವೆನೆ+ಎಂದನಾ +ಭೀಮ

ಅಚ್ಚರಿ:
(೧) ಮನೆಗೆ ಬೆಂಕಿ ಹಚ್ಚಿದೆ ಎಂದು ಹೇಳುವ ಪರಿ – ವಸತಿಯಲಿ ಬಳಿಕಗ್ನಿ ದೇವರಪಸರಿಸಿದೆ

ಪದ್ಯ ೨೩: ದುರ್ಯೋಧನನನ್ನು ಧರ್ಮಜನು ಹೇಗೆ ಹಂಗಿಸಿದನು?

ಕೊಳನ ಬಿಡು ಕಾದೇಳು ಹಿಂದಣ
ಹಳಿವ ತೊಳೆ ಹೇರಾಳ ಬಾಂಧವ
ಬಳಗ ಭೂಮೀಶ್ವರರ ಬಹಳಾಕ್ಷೋಹಿಣೀದಳವ
ಅಳಿದ ಕೀರ್ತಿಯ ಕೆಸರ ತೊಳೆ ಭೂ
ವಳಯಮಾನ್ಯನು ದೈನ್ಯವೃತ್ತಿಯ
ಬಳಸುವರೆ ಸುಡು ಮರುಳೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ಕೊಳದಿಂದ ಮೇಲೆದ್ದು ಯುದ್ಧಮಾಡಲು ಬಾ, ಹಿಂದಿನ ದುಷ್ಕೀರ್ತಿಯನ್ನು ಕಳೆದುಕೋ, ಲೆಕ್ಕವಿಲ್ಲದಷ್ಟು ಬಂಧು ಬಾಂಧವರು ಅನೇಕ ಅಕ್ಷೋಹಿಣೀ ಸೈನ್ಯಗಳನ್ನು ಕೊಂದ ಅಪಕೀರ್ತಿಯ ಕೆಸರನ್ನು ತೊಳೆದುಕೋ, ಲೋಕದಲ್ಲಿ ಮಾನ್ಯನಾದವನು ದೀನನಾಗಬಾರದು, ಹುಚ್ಚಾ, ಆಯುಧವನ್ನು ಹಿಡಿ ಎಂದು ಕೌರವನನ್ನು ಧರ್ಮಜನು ಹಂಗಿಸಿದನು.

ಅರ್ಥ:
ಕೊಳ: ಸರಸಿ, ಸರೋವರ; ಬಿಡು: ತೊರೆ; ಕಾದು: ಹೋರಾಡು; ಹಿಂದಣ: ಹಿಂದೆ ನಡೆದ; ಹಳಿ: ದೂಷಿಸು, ನಿಂದಿಸು; ತೊಳೆ: ಸ್ವಚ್ಛಮಾಡು, ಶುದ್ಧಗೊಳಿಸು; ಹೇರಾಳ: ಬಹಳ; ಬಾಂಧವ: ಬಂಧುಜನ; ಬಳಗ: ಗುಂಪು; ಭೂಮೀಶ್ವರ: ರಾಜ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಅಳಿ: ಸಾವು; ಕೀರ್ತಿ: ಯಶಸ್ಸು; ಕೆಸರು: ರಾಡಿ; ಭೂವಳಯ: ಭೂಮಿ; ಮಾನ್ಯ: ಪ್ರಸಿದ್ಧ; ದೈನ್ಯ: ದೀನತೆ, ಹೀನಸ್ಥಿತಿ; ವೃತ್ತಿ: ಕೆಲಸ; ಬಳಸು: ಸುತ್ತುವರಿ, ಸುತ್ತುಗಟ್ಟು; ಮರುಳ: ತಿಳಿಗೇಡಿ, ದಡ್ಡ; ಕೈದು: ಆಯುಧ;

ಪದವಿಂಗಡಣೆ:
ಕೊಳನ +ಬಿಡು +ಕಾದೇಳು +ಹಿಂದಣ
ಹಳಿವ +ತೊಳೆ +ಹೇರಾಳ +ಬಾಂಧವ
ಬಳಗ+ ಭೂಮೀಶ್ವರರ +ಬಹಳ+ಅಕ್ಷೋಹಿಣೀ+ದಳವ
ಅಳಿದ+ ಕೀರ್ತಿಯ +ಕೆಸರ +ತೊಳೆ +ಭೂ
ವಳಯ+ಮಾನ್ಯನು +ದೈನ್ಯ+ವೃತ್ತಿಯ
ಬಳಸುವರೆ +ಸುಡು +ಮರುಳೆ +ಕುರುಪತಿ +ಕೈದುಗೊಳ್ಳೆಂದ

ಅಚ್ಚರಿ:
(೧) ಹಿಂದಣ ಹಳಿವ ತೊಳೆ, ಅಳಿದ ಕೀರ್ತಿಯ ಕೆಸರ ತೊಳೆ – ತೊಳೆ ಪದದ ಬಳಕೆ
(೨) ಲೋಕ ನೀತಿ – ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ