ಪದ್ಯ ೨೨: ದುರ್ಯೋಧನನೇಕೆ ಹಿಂದಿನ ರಾಜರಿಗೆ ಸಮನಲ್ಲ?

ಭರತ ನಹುಷ ಯಯಾತಿ ನಳ ಸಂ
ವರಣ ಸಗರ ದಿಳೀಪ ನೃಗ ರಘು
ವರ ಪುರೂರವ ದುಂದುಮಾರ ಭಗೀರಥಾದಿಗಳು
ಧರಣಿಪಾಲರನಂತಸಮರದೊ
ಳರಿಬಲವ ಸವರಿದರು ನಿನ್ನೊವೊ
ಲುರುಳಿದವರಾರುದಕದಲಿ ನೃಪ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭರತ, ನಹುಷ, ಯಯಾತಿ, ನಳ, ಸಂವರಣ, ಸಗರ, ದಿಲೀಪ, ನೃಗ, ರಘು, ಪುರೂರವ, ದುಂದುಮಾರ, ಭಗೀರಥ ಮೊದಲಾದ ಲೆಕ್ಕವಿಲ್ಲದಷ್ಟು ವೀರರು ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸಿದರು. ನಿನ್ನಂತೆ ಯಾರೂ ನೀರಿನಲ್ಲಿ ಬೀಳಲಿಲ್ಲ, ಎದ್ದೇಳು ಆಯುಧವನ್ನು ಹಿಡಿ ಎಂದು ಧರ್ಮಜನು ಕೌರವನನ್ನು ಹಂಗಿಸಿದನು.

ಅರ್ಥ:
ಆದಿ: ಮುಂತಾದ; ಧರಣಿಪಾಲ: ರಾಜ; ಸಮರ: ಯುದ್ಧ; ಅರಿ: ವೈರಿ; ಬಲ: ಸೈನ್ಯ; ಸವರು: ನಾಶಮಾಡು; ಉರುಳು: ಬೀಳು; ಉದಕ: ನೀರು; ಕೈದು: ಆಯುಧ;

ಪದವಿಂಗಡಣೆ:
ಭರತ +ನಹುಷ +ಯಯಾತಿ +ನಳ+ ಸಂ
ವರಣ+ ಸಗರ+ ದಿಳೀಪ+ ನೃಗ+ ರಘು
ವರ +ಪುರೂರವ +ದುಂದುಮಾರ +ಭಗೀರಥಾದಿಗಳು
ಧರಣಿಪಾಲರ್+ಅನಂತ+ಸಮರದೊಳ್
ಅರಿಬಲವ +ಸವರಿದರು +ನಿನ್ನೊವೊಲ್
ಉರುಳಿದವರ್+ಆರ್+ಉದಕದಲಿ +ನೃಪ +ಕೈದುಗೊಳ್ಳೆಂದ

ಅಚ್ಚರಿ:
(೧) ಹಂಗಿಸುವ ಪರಿ – ನಿನ್ನೊವೊಲುರುಳಿದವರಾರುದಕದಲಿ
(೨) ನೃಪ, ಧರಣಿಪಾಲ – ಸಮಾನಾರ್ಥಕ ಪದ

ಪದ್ಯ ೨೧: ಧರ್ಮಜನು ಕೌರವನನ್ನು ಹೇಗೆ ಛೇಡಿಸಿದನು?

ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯುದ್ಧರಂಗದಲ್ಲಿ ಆಯುಧವನ್ನೆಸೆದು ಓಡಿ, ಹೇಡಿಗಳ ಮೇಲ್ಪಂಕ್ತಿಯಲ್ಲಿ ಬದುಕಿಕೊಂಡರೂ, ನಿನ್ನ ದೇಹವೇನು ಕಲ್ಪಾಂತರದವರೆಗೂ ಇರುತ್ತದೆಯೇ? ಈ ಕೊಳವಲ್ಲ, ನೀನು ಓಡಿಹೋಗಿ ಪಾತಾಳದಲ್ಲಿ ಅಡಗಿದ್ದರೂ ನಾವು ಬಂದು ನಿನ್ನನ್ನು ಹಿಡಿದು ಬೇಟೆಯಾಡದಂತಹ ಜಾಗವು ಎಲ್ಲಾದರೂ ಇದ್ದೀತೇ? ಕೌರವ ಬಾ, ಆಯುಧವನ್ನು ಹಿಡಿ ಎಂದು ಧರ್ಮಜನು ಕೌರವನನ್ನು ಛೇಡಿಸಿದನು.

ಅರ್ಥ:
ಓಡು: ಧಾವಿಸು; ಕೈದು: ಆಯುಧ; ಕಳ: ಯುದ್ಧರಂಗ; ಹೇಡಿ: ಅಂಜುಕುಳಿ, ಹೆದರುಪುಕ್ಕ; ಹಿಡಿ: ಗ್ರಹಿಸು; ಅಳುಕು: ಹೆದರು; ಬದುಕು: ಜೀವಿಸು; ಕೂಡು: ಜೋಡಿಸು; ಗರುವಾಯಿ: ದೊಡ್ಡತನ, ಠೀವಿ; ಕಲ್ಪಾಂತ: ಪ್ರಳಯ; ಪರಿ: ವರೆಗು; ಪಾತಾಳ: ಅಧೋಲೋಕ; ಹೊಕ್ಕು: ಸೇರು; ಸಂಧಿಸು: ಜೊತೆಗೂಡು; ಬೇಂಟೆ: ಬೇಟೆ, ಶಿಕಾರಿ, ಮೃಗವನ್ನು ಸಾಯಿಸುವುದು; ಠಾವು: ಎಡೆ, ಸ್ಥಳ;

ಪದವಿಂಗಡಣೆ:
ಓಡಿ +ಕೈದುವ +ಹಾಯ್ಕಿ +ಕಳನೊಳು
ಹೇಡಿಗರ +ಹಿಡಿದ್+ಅಳುಕಿ +ಬದುಕಿದ
ಕೂಡಿಹುದೆ+ ಗರುವಾಯಿಯಲಿ +ಕಲ್ಪಾಂತ+ಪರಿಯಂತ
ಓಡಿ +ಪಾತಾಳವನು +ಹೊಕ್ಕಡೆ
ಕೂಡೆ +ಸಂಧಿಸಿ+ ನಿನ್ನ +ಬೇಂಟೆಯನ್
ಆಡದಿಹ +ಠಾವುಂಟೆ +ಕುರುಪತಿ+ ಕೈದುಗೊಳ್ಳೆಂದ

ಅಚ್ಚರಿ:
(೧) ಪಾಂಡವರ ದೃಢ ನಿಶ್ಚಯ – ಓಡಿ ಪಾತಾಳವನು ಹೊಕ್ಕಡೆಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ