ಪದ್ಯ ೬: ಕೃಷ್ಣನು ಯಾವ ರಾಜನೀತಿಯನ್ನು ಹೇಳಿದನು?

ಭರತವಂಶಲಲಾಮ ಕೇಳ್ ನೃಪ
ವರರ ಪದ್ಧತಿ ಕಂಟಕದಿನು
ತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ
ಪರಿಹರಿಸುವುದು ಮಾಯೆಯಿಂ ಪ್ರತಿ
ಗರಳದಲಿ ಗರಳವನು ಮಾಯಾ
ಪರರು ಮಾಯೋಪಾಯವಧ್ಯರು ಭೂಪ ಕೇಳೆಂದ (ಗದಾ ಪರ್ವ, ೫ ಸಂಧಿ, ೬ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಉತ್ತರಿಸುತ್ತಾ, ಭರತವಂಶ ಶ್ರೇಷ್ಠನೇ ಕೇಳು, ರಾಜನೀತಿಯಿದು, ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಮಾಯಾವಿಯ ವಿದ್ಯೆಗಳನ್ನು ಮಾಯೆಯಿಂದಲೇ ಪರಿಹರಿಸಬೇಕು. ವಿಷದಿಂದ ವಿಷವನ್ನು ತೆಗೆಯಬೇಕು. ಮಾಯೆಯನ್ನವಲಂಬಿಸಿದವರನ್ನು ಮಾಯೆಯ ಉಪಾಯದಿಂದಲೇ ಕೊಲ್ಲಬೇಕು.

ಅರ್ಥ:
ವಂಶ: ಕುಲ; ಲಲಾಮ: ತಿಲಕ, ಬೊಟ್ಟು; ನೃಪ: ರಾಜ; ವರ: ಶ್ರೇಷ್ಠ; ಪದ್ಧತಿ: ಕ್ರಮ, ರೀತಿ; ಕಂಟಕ: ವಿಪತ್ತು; ಉತ್ತರಿಸು: ದೂರಮಾಡು; ಮಾಯ: ಗಾರುಡಿ, ಇಂದ್ರಜಾಲ; ಪ್ರತಿ: ಸಾಟಿ, ಸಮಾನ; ಗರಳ: ವಿಷ; ಭೂಪ: ರಾಜ; ಉಪಾಯ: ಯುಕ್ತಿ, ಹಂಚಿಕೆ;

ಪದವಿಂಗಡಣೆ:
ಭರತವಂಶಲಲಾಮ +ಕೇಳ್ +ನೃಪ
ವರರ +ಪದ್ಧತಿ+ ಕಂಟಕದಿನ್+
ಉತ್ತರಿಸುವುದು +ಕಂಟಕವ +ಮಾಯಾವಿಗಳ +ವಿದ್ಯೆಗಳ
ಪರಿಹರಿಸುವುದು +ಮಾಯೆಯಿಂ +ಪ್ರತಿ
ಗರಳದಲಿ +ಗರಳವನು +ಮಾಯಾ
ಪರರು +ಮಾಯ+ಉಪಾಯವಧ್ಯರು+ ಭೂಪ +ಕೇಳೆಂದ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಭರತವಂಶಲಲಾಮ
(೨) ರಾಜನೀತಿ – ಕಂಟಕದಿನುತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ ಪ್ರತಿಗರಳದಲಿ ಗರಳವನು

ನಿಮ್ಮ ಟಿಪ್ಪಣಿ ಬರೆಯಿರಿ