ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ನಿಮ್ಮ ಟಿಪ್ಪಣಿ ಬರೆಯಿರಿ