ಪದ್ಯ ೨೪: ಸಂಜಯನ ಗಂಟಲಿಗೆ ಯಾರು ಕತ್ತಿಯನ್ನಿಟ್ಟರು?

ಕುರುಪತಿಯನರಸುತ್ತ ತಾನೈ
ತರಲು ಸಾತ್ಯಕಿ ಕಂಡು ಸೂಠಿಯ
ಲುರವಣಿಸಿ ಹರಿತಂದು ಹಿಡಿದನು ಹೊಯ್ದು ಕೆಲಬಲನ
ಕರೆದು ಧೃಷ್ಟದ್ಯುಮ್ನ ತನ್ನಯ
ಶಿರವನರಿಯೆನೆ ಬಳಿಕ ಸಾತ್ಯಕಿ
ಕರದ ಖಡುಗವನುಗಿದು ಹೂಡಿದನೆನ್ನ ಗಂಟಲಲಿ (ಗದಾ ಪರ್ವ, ೪ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೌರವನನ್ನು ಹುಡುಕುತ್ತಾ ನಾನು ಹೋಗುತ್ತಿರುವಾಗ, ನನ್ನನ್ನು ನೋಡಿ ಸಾತ್ಯಕಿಯು ವೇಗದಿಂದ ಬಂದು ನನ್ನ ಅಕ್ಕಪಕ್ಕದವರನ್ನು ಹೊಡೆದು ನನ್ನನ್ನು ಹಿಡಿದನು. ಆಗ ಧೃಷ್ಟದ್ಯುಮ್ನನು ನನ್ನ ತಲೆಯನ್ನು ಛೇದಿಸು ಎನ್ನಲು ಸಾತ್ಯಕಿಯು ಖಡ್ಗವನ್ನೆಳೆದು ನನ್ನ ಗಂಟಲಿಗೆ ಗುರಿಯಿಟ್ಟನು.

ಅರ್ಥ:
ಅರಸು: ಹುಡುಕು; ಐತರಲು: ಬಂದು ಸೇರು; ಕಂಡು: ನೋಡು; ಸೂಠಿ: ವೇಗ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ಹರಿ: ಚಲಿಸು; ಹಿಡಿ: ಗ್ರಹಿಸು; ಹೊಯ್ದು: ಹೊಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಕರೆ: ಬರೆಮಾಡು; ಶಿರ: ತಲೆ; ಅರಿ: ಕತ್ತರಿಸು; ಬಳಿಕ: ನಂತರ; ಕರ: ಹಸ್ತ; ಖಡುಗ: ಕತ್ತಿ; ಉಗಿ: ಹೊರಹಾಕು; ಹೂಡು: ಅಣಿಗೊಳಿಸು, ಸಿದ್ಧಗೊಳಿಸು; ಗಂಟಲು: ಕಂಠ;

ಪದವಿಂಗಡಣೆ:
ಕುರುಪತಿಯನ್+ಅರಸುತ್ತ+ ತಾನ್+
ಐತರಲು +ಸಾತ್ಯಕಿ +ಕಂಡು +ಸೂಠಿಯಲ್
ಉರವಣಿಸಿ +ಹರಿತಂದು +ಹಿಡಿದನು +ಹೊಯ್ದು +ಕೆಲಬಲನ
ಕರೆದು +ಧೃಷ್ಟದ್ಯುಮ್ನ +ತನ್ನಯ
ಶಿರವನ್+ಅರಿ+ಎನೆ+ ಬಳಿಕ+ ಸಾತ್ಯಕಿ
ಕರದ+ ಖಡುಗವನ್+ಉಗಿದು +ಹೂಡಿದನ್+ಎನ್ನ +ಗಂಟಲಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಿತಂದು ಹಿಡಿದನು ಹೊಯ್ದು
(೨) ಕತ್ತಿಯನ್ನು ಹೊರತಂದ ಎಂದು ಹೇಳಲು – ಕರದ ಖಡುಗವನುಗಿದು ಹೂಡಿದನ್

ನಿಮ್ಮ ಟಿಪ್ಪಣಿ ಬರೆಯಿರಿ