ಪದ್ಯ ೨೭: ಕೌರವನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು?

ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ (ಗದಾ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಹಿಂದೆ ಧರ್ಮಜನ ಪಟ್ಟದ ರಾಣಿಯನ್ನು ಸಭೆಗೆಳೆಸಿ ತಂದು ಭಾರೀ ಅವಮಾನ ಪಡಿಸಿದೆ, ಶ್ರೀಕೃಷ್ಣನು ಬಂದು ಐದು ಊರುಗಳನ್ನು ಕೊಡು ಸಂಧಿ ಮಾಡಿಸುತ್ತೇನೆ ಎಂದು ಬೇಡಿದಾಗ ಪಾಂಡವರ ಮನಸ್ಸುಗಳಿಗೆ ವಿಷವನ್ನುಣಿಸಿದೆ. ಈಗ ಏನಾಗಿದೆ, ನಿನ್ನ ಸಹೋದರರು, ಮಕ್ಕಳು, ಜ್ಞಾತಿಗಳು, ಬಾಂಧವರು ಎಲ್ಲರೂ ಅಳಿದುಹೋದರು. ನಿನ್ನೊಬ್ಬನ ನೆರಳು ಉಳಿದಿದೆ ಎಂದು ಸಂಜಯನು ಹೇಳಿದನು.

ಅರ್ಥ:
ಹಿಂದೆ: ಪೂರ್ವ; ರಾಯ: ರಾಜ; ಪಟ್ಟ: ಸಿಂಹಾಸನ ಗದ್ದುಗೆ; ಅರಸಿ: ರಾಣಿ; ತಂದು: ಬರೆಮಾದು; ಭಾರಿ: ದೊಡ್ಡ; ಭಂಗ: ಮುರಿಯುವಿಕೆ; ಬಡಿಸು: ಹೊಡೆಯಿಸು; ಹರಿ: ಕೃಷ್ಣ; ಊರು: ಪ್ರದೇಶ; ಬೇಡು: ಕೇಳು; ಚಿತ್ತ: ಮನಸ್ಸು; ಕಂದಕ: ತಗ್ಗು, ಹಳ್ಳ; ಬಿತ್ತು: ಉಂಟುಮಾಡು; ಕದನ: ಯುದ್ಧ; ನೆಳಲು: ನೆರಳು; ಉಳಿ: ಬದುಕಿರು, ನಿಲ್ಲು; ಸಹೋದರ: ಅಣ್ಣ ತಮ್ಮಂದಿರು; ವೃಂದ: ಗುಂಪು; ತನುಜ: ಮಕ್ಕಳು; ಜ್ಞಾತಿ: ತಂದೆಯ ಕಡೆಯ ಬಂಧು, ದಾಯಾದಿ; ಅಳಿ: ಸಾವು;

ಪದವಿಂಗಡಣೆ:
ಹಿಂದೆ +ರಾಯನ +ಪಟ್ಟದರಸಿಯ
ತಂದು +ಭಾರಿಯ +ಭಂಗ+ಬಡಿಸಿದೆ
ಬಂದು +ಹರಿ+ಐದೂರ+ ಬೇಡಿದರ್+ಅವರ +ಚಿತ್ತದಲಿ
ಕಂದ +ಬಿತ್ತಿದೆ+ ಕದನದಲಿ ನೀ
ನೊಂದು +ನೆಳಲ್+ಉಳಿಯಲು+ ಸಹೋದರ
ವೃಂದ +ತನುಜ +ಜ್ಞಾತಿ +ಬಾಂಧವರ್+ಅಳಿದರ್+ಅದರಿಂದ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಕದನದಲಿ ನೀನೊಂದು ನೆಳಲುಳಿಯಲು
(೨) ಬಂದು, ತಂದು, ನೊಂದು – ಪ್ರಾಸ ಪದಗಳು

ಪದ್ಯ ೨೬: ಸಂಜಯನು ಯಾವ ಪ್ರಶ್ನೆಯನ್ನು ದುರ್ಯೋಧನನಿಗೆ ಕೇಳಿದನು?

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕುಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ (ಗದಾ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಕೌರವೇಶ್ವರ, ನಿನ್ನ ತಾಯಿ ಗಾಂಧಾರಿಯು ನನ್ನನ್ನು ಕಂಡು, ಎಲೈ ಸಂಜಯ ದುರ್ಯೋಧನನು ಏನು ಮಾಡಿದ? ಕುಂತಿಯ ಮಕ್ಕಳಲ್ಲಿ ಯಾರು ಅಳಿದರು, ಯಾರು ಉಳಿದರು? ನಮ್ಮ ಸೇನೆಯಲ್ಲಿ ಯಾರು ಉಳಿದಿದ್ದಾರೆ? ಶಕುನಿಯು ಯುದ್ಧದಲ್ಲಿ ಏನು ಮಾಡಿದೆ ಎಂದು ಕೇಳಿದರೆ ಯುದ್ಧದ ವಾರ್ತೆಯನ್ನು ನಾನು ಏನೆಂದು ಹೇಳಲಿ ಎಂದು ಕೌರವನನ್ನು ಪ್ರಶ್ನಿಸಿದ.

ಅರ್ಥ:
ಸೂನು: ಮಕ್ಕಳು; ಅಳಿ: ಸಾವು; ಉಳಿ: ಜೀವಿಸು; ಥಟ್ಟು: ಗುಂಪು; ಹದ: ಸ್ಥಿತಿ; ರಣ: ಯುದ್ಧ; ಬೆಸ:ಅಪ್ಪಣೆ, ಆದೇಶ; ತಾಯಿ: ಮಾತೆ; ಉತ್ಸವ: ಸಂಭ್ರಮ;

ಪದವಿಂಗಡಣೆ:
ಏನು +ಸಂಜಯ +ಕೌರವೇಶ್ವರನ್
ಏನ+ ಮಾಡಿದನಲ್ಲಿ +ಕುಂತೀ
ಸೂನುಗಳೊಳ್+ಆರ್+ಅಳಿದರ್+ಉಳಿದರು +ನಮ್ಮ ಥಟ್ಟಿನಲಿ
ಏನು +ಹದನೈ+ ಶಕುನಿ+ ರಣದೊಳಗ್
ಏನ +ಮಾಡಿದನೆಂದು +ಬೆಸಗೊಳಲ್
ಏನನೆಂಬೆನು +ತಾಯಿ +ಗಾಂಧಾರಿಗೆ +ರಣೋತ್ಸವವ

ಅಚ್ಚರಿ:
(೧) ಅಳಿ, ಉಳಿ – ವಿರುದ್ಧಾರ್ಥಕ ಪದ
(೨) ಏನು, ಏನ ಪದದ ಬಳಕೆ ಎಲ್ಲಾ ಸಾಲುಗಳ ಮೊದಲ ಪದ (೩ ಸಾಲು ಹೊರತುಪಡಿಸಿ)

ಪದ್ಯ ೨೫: ಸಂಜಯನು ಯಾವ ವಿಷಯವನ್ನು ಹೇಳಲಿ ಎಂದು ಕೇಳಿದನು?

ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸುಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಈಗು ಊರಿಗೆ ಹೋಗಿ ನಿನ್ನ ತಂದೆಗೆ ನಿನ್ನ ಮಗನು ವಿಜಯಶಾಲಿಯಾದ, ವಿಜಯಧ್ವಜವನ್ನು ಹಾರಿಸು ಎಂದು ಹೇಳಲೇ? ತಲೆ ತಪ್ಪಿಸಿಕೊಂಡು ಓಡಿಹೋಗಿ ಬದುಕಿದ ಎನ್ನಲೇ? ಅಂತಃಪುರದ ರಾಣಿಯರಿಗೆ ಯಾವ ಶುಭ ಸಂದೇಶವನ್ನು ನೀಡಲಿ? ಧೃತರಾಷ್ಟ್ರನನ್ನು ಅಳಿಸಲೋ, ನಗಿಸಲು ಏನು ಹೇಳಲಿ, ನಿನ್ನ ತಾಯಿಗೆ ನಾನು ಏನೆಂದು ಹೇಳಲಿ ಎಂದು ಸಂಜಯನು ಕೇಳಿದನು.

ಅರ್ಥ:
ಗೆಲಿ: ಜಯಿಸು; ಅರಸ: ರಾಜ; ಕಟ್ಟಿಸು: ನಿರ್ಮಿಸು; ಗುಡಿ: ಆಲಯ; ತಲೆ: ಶಿರ; ಬಳಚು: ಕತ್ತರಿಸು; ಓಡು: ಧಾವಿಸು; ಬದುಕು: ಜೀವಿಸು; ಮೇಣ್: ಅಥವಾ; ಲಲನೆ: ಹೆಣ್ಣು; ಒಸಗೆ: ಶುಭ; ಕುರುಡ: ಅಂಧ; ಅಳಿಸು: ರೋಧಿಸು; ನಗಿಸು: ಹರ್ಷ, ಸಂತೋಷ ಪಡಿಸು; ತಾಯಿ: ಮಾತೆ, ಅಮ್ಮ; ಕಲಿ: ಅಭ್ಯಾಸ ಮಾಡು, ತಿಳಿ; ಬುದ್ಧಿ: ತಿಳಿವು, ಅರಿವು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗೆಲಿದನ್+ಅರಸನು+ ಹಸ್ತಿನಾಪುರ
ದೊಳಗೆ +ಕಟ್ಟಿಸು+ಗುಡಿಯನ್+ಎಂಬೆನೊ
ತಲೆಬಳಿಚಿ +ತಾನೋಡಿ +ಬದುಕಿದನ್+ಎಂಬೆನೋ +ಮೇಣು
ಲಲನೆಯರಿಗೇನ್+ಒಸಗೆ +ಕುರುಡನನ್
ಅಳಿಸುವೆನೊ +ನಗಿಸುವೆನೊ +ತಾಯಿಗೆ
ಕಲಿಸು +ಬುದ್ಧಿಯನ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ವಿರುದ್ಧ ಪದ – ಅಳಿಸು, ನಗಿಸು
(೨) ತ ಕಾರದ ಜೋಡಿ ಪದ – ತಲೆಬಳಿಚಿ ತಾನೋಡಿ
(೩) ಭೂಪ, ಅರಸ – ಸಮಾನಾರ್ಥಕ ಪದ