ಪದ್ಯ ೯: ಅರ್ಜುನನನ್ನು ಕೆರಳಿಸಿದ್ದು ಯಾವುದಕ್ಕೆ ಸಮಾನ?

ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ (ಗದಾ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಕುರುಸೇನೆಯವರು ಅರ್ಜುನನನ್ನು ಕೆರಳಿಸಿದ್ದು, ಕಾಲರುದ್ರನೊಡನೆ ಸರಸವಾಡಿದಂತೆ, ಪ್ರಚಂಡ ಪ್ರಳಯಭೈರವನನ್ನು ಪರಿಹಾಸಮಾಡಿದಂತೆ, ಪ್ರಳಯಕಾಲದ ಯಮನನ್ನು ಮೂದಲಿಸಿ ಕರೆದಂತೆ ಆಯಿತು. ಆಗ ಅರ್ಜುನನ ಬಾಣ ಪ್ರಯೋಗದ ರೀತಿಯನ್ನು ವರ್ಣಿಸಲು ನನಗಾಗದು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ಕೆರಳಿಸು: ಪ್ರಚೋದಿಸು; ಕಾಲರುದ್ರ: ಪ್ರಳಯ ಕಾಲದ ಶಿವ; ಸರಸ: ಚೆಲ್ಲಾಟ, ವಿನೋದ; ಪ್ರಚಂಡ: ಭಯಂಕರವಾದುದು; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಭೈರವ: ಶಿವನ ಒಂದು ಅವತಾರ; ಪರಿಭವ: ಅನಾದರ, ತಿರಸ್ಕಾರ; ಲಯ: ನಾಶ; ಕೃತಾಂತ: ಯಮ; ಕರೆ: ಬರೆಮಾಡು; ಮೂದಲಿಸು: ಹಂಗಿಸು; ಅರಿ: ತಿಳಿ; ಎಸು: ಬಾಣ ಪ್ರಯೋಗ ಮಾಡು; ಅಭಿವರ್ಣನೆ: ವಿಶೇಷ ವರ್ಣನೆ; ನಿರ್ಣಯ: ನಿರ್ಧಾರ;

ಪದವಿಂಗಡಣೆ:
ಅರಸ +ಕೇಳೈ +ಬಳಿಕ +ಪಾರ್ಥನ
ಕೆರಳಿಚಿದರೋ +ಕಾಲರುದ್ರನ
ಸರಸವಾಡಿದರೋ +ಪ್ರಚಂಡ+ಪ್ರಳಯ+ಭೈರವನ
ಪರಿಭವಿಸಿದರೊ +ಲಯ+ಕೃತಾಂತನ
ಕರೆದರೋ +ಮೂದಲಿಸಿ+ ನಾವಿನ್ನ್
ಅರಿಯೆವ್+ಅರ್ಜುನನ್+ಎಸುಗೆ+ಅಭಿವರ್ಣನೆಯ +ನಿರ್ಣಯವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾಲರುದ್ರನಸರಸವಾಡಿದರೋ, ಪ್ರಚಂಡಪ್ರಳಯಭೈರವನ ಪರಿಭವಿಸಿದರೊ, ಲಯಕೃತಾಂತನಕರೆದರೋ
(೨) ಪದದ ರಚನೆ – ನಾವಿನ್ನರಿಯೆವರ್ಜುನನೆಸುಗೆಯಭಿವರ್ಣನೆಯ

ನಿಮ್ಮ ಟಿಪ್ಪಣಿ ಬರೆಯಿರಿ