ಪದ್ಯ ೧೨: ಭೀಮನ ಹೊಡೆತದ ಪ್ರಭಾವ ಹೇಗಿತ್ತು?

ಅಳಿದುದೈನೂರಾನೆ ಸಾವಿರ
ಬಲುಗುದುರೆ ರಥ ಮೂರು ಸಾವಿರ
ನೆಲಕೆ ಕೈವರ್ತಿಸಿತು ಭೀಮನ ಹೊಯ್ಲ ಹೋರಟೆಗೆ
ಬಿಲುಹರಿಗೆ ಸಬಳದ ಪದಾತಿಯ
ತಲೆಯ ತೊಡಸಿದನೆಂಟು ಲಕ್ಕವ
ನುಳಿದ ಬಲವೋಲೈಸುತಿರ್ದುದು ಘನ ಪಲಾಯನವ (ಶಲ್ಯ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಸಾವಿರ ಕುದುರೆಗಳು, ಮೂರು ಸಾವಿರ ರಥಗಳು ಭೀಮನ ಹೊಡೆತಕ್ಕೆ ಸಿಕ್ಕಿ ನೆಲಕ್ಕೆ ಬಿದ್ದವು. ಬಿಲ್ಲು, ಹರಿಗೆ ಸಬಳಗಳನ್ನು ಹಿಡಿದ ಎಂಟು ಲಕ್ಷ ಸೈನಿಕರನ್ನು ಸಂಹರಿಸಿದನು. ಉಳಿದವರು ಯುದ್ಧದಿಂದ ಪಲಾಯನ ಮಾಡಿದರು.

ಅರ್ಥ:
ಅಳಿ: ನಾಶ; ಸಾವಿರ: ಸಹಸ್ರ; ಬಲು: ಸೈನ್ಯ; ಕುದುರೆ: ಅಶ್ವ; ರಥ: ಬಂಡಿ; ನೆಲ: ಭೂಮಿ; ವರ್ತಿಸು: ಚಲಿಸು; ಹೊಯ್ಲು: ಏಟು, ಹೊಡೆತ; ಹೋರಟೆ: ಕಾಳಗ, ಯುದ್ಧ; ಬಿಲು: ಬಿಲ್ಲು, ಚಾಪ; ಸಬಳ: ಈಟಿ; ಪದಾತಿ: ಕಾಲಾಳು, ಸೈನಿಕ; ತಲೆ: ಶಿರ; ತೊಡಸು: ಸಿಕ್ಕಿಸು; ಲಕ್ಕ: ಲಕ್ಷ; ಉಳಿದ: ಮಿಕ್ಕ; ಬಲ: ಸೈನ್ಯ; ಓಲೈಸು: ಪ್ರೀತಿಸು; ಘನ: ಶ್ರೇಷ್ಠ; ಪಲಾಯನ: ಹಿಂದಿರುಗು, ಪರಾರಿ;

ಪದವಿಂಗಡಣೆ:
ಅಳಿದುದ್+ಐನೂರ್+ಆನೆ +ಸಾವಿರ
ಬಲು+ಕುದುರೆ +ರಥ +ಮೂರು +ಸಾವಿರ
ನೆಲಕೆ+ ಕೈವರ್ತಿಸಿತು +ಭೀಮನ +ಹೊಯ್ಲ +ಹೋರಟೆಗೆ
ಬಿಲುಹರಿಗೆ +ಸಬಳದ+ ಪದಾತಿಯ
ತಲೆಯ +ತೊಡಸಿದನ್+ಎಂಟು +ಲಕ್ಕವನ್
ಉಳಿದ +ಬಲವ್+ಓಲೈಸುತಿರ್ದುದು +ಘನ +ಪಲಾಯನವ

ಅಚ್ಚರಿ:
(೧) ಓಡಿದರು ಎಂದು ಹೇಳುವ ಪರಿ – ಉಳಿದ ಬಲವೋಲೈಸುತಿರ್ದುದು ಘನ ಪಲಾಯನವ

ಪದ್ಯ ೧೧: ಭೀಮನ ಪರಾಕ್ರಮವು ಹೇಗಿತ್ತು?

ಗಜದಳದ ಘಾಡಿಕೆಗೆ ವಾಜಿ
ವ್ರಜದ ವೇಢೆಗೆ ಭೀಮನೇ ಗಜ
ಬಜಿಸುವನೆ ಹೊಡೆಸೆಂಡನಾಡಿದನಹಿತ ಮೋಹರವ
ಗುರಜು ಗುಲ್ಮದ ಕುಂಜರಾಶ್ವ
ವ್ರಜದ ಮೆಳೆಯೊಣಗಿದುದು ಪವಮಾ
ನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು ನಿಮಿಷದಲಿ (ಶಲ್ಯ ಪರ್ವ, ೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಜದಳವು ಯುದ್ಧಕ್ಕೆ ಬಂದರೆ ಭೀಮನು ಹಿಂದೆಮುಂದೆ ನೋಡುವನೇ? ಆನೆ ಕುದುರೆಗಳನ್ನು ಹೊಡೆದು ಚೆಂಡಾಡಿದನು. ಆ ಸೇನೆಯ ಮಳೆಯು ಭೀಮನ ಪರಾಕ್ರಮದ ಅಗ್ನಿಯ ಝಳಕ್ಕೆ ಒಣಗಿ ಹೋಯಿತು.

ಅರ್ಥ:
ಗಜ: ಆನೆ; ದಳ: ಸೈನ್ಯ; ಘಾಡಿಸು: ವ್ಯಾಪಿಸು; ವಾಜಿ: ಕುದುರೆ; ವ್ರಜ: ಗುಂಪು; ವೇಡೆ: ಆಕ್ರಮಣ; ಗಜಬಜಿಸು: ಹಿಂದುಮುಂದು ನೋಡು, ಗೊಂದಲಕ್ಕೀಡಾಗು; ಹೊಡೆ: ಹೋರಾಡು; ಅಹಿತ: ವೈರಿ; ಸೆಂಡನಾಡು: ಚೆಂಡಾಡು; ಮೋಹರ: ಯುದ್ಧ; ಗುಜುರು: ಕೆದಕಿದ; ಗುಲ್ಮ: ಸೇನೆಯ ಒಂದು ಘಟಕ; ಕುಂಜರ: ಆನೆ; ಅಶ್ವ: ಕುದುರೆ; ವ್ರಜ: ಗುಂಪು; ಮೆಳೆ: ಗುಂಪು; ಒಣಗು: ಸತ್ವವಿಲ್ಲದ;ಪವಮಾನಜ: ಭೀಮ; ಪರಾಕ್ರಮ: ಶೌರ್ಯ; ಶಿಖಿ: ಬೆಂಕಿ; ಝಳ: ಕಾಂತಿ; ಝೊಂಪಿಸು: ಮೈಮರೆ; ನಿಮಿಷ: ಕ್ಷಣ ಮಾತ್ರ;

ಪದವಿಂಗಡಣೆ:
ಗಜದಳದ+ ಘಾಡಿಕೆಗೆ +ವಾಜಿ
ವ್ರಜದ +ವೇಢೆಗೆ +ಭೀಮನೇ +ಗಜ
ಬಜಿಸುವನೆ +ಹೊಡೆ+ಸೆಂಡನಾಡಿದನ್+ಅಹಿತ +ಮೋಹರವ
ಗುರಜು +ಗುಲ್ಮದ +ಕುಂಜರ+ಅಶ್ವ
ವ್ರಜದ +ಮೆಳೆ+ಒಣಗಿದುದು +ಪವಮಾ
ನಜ+ ಪರಾಕ್ರಮ+ಶಿಖಿಯ +ಝಳ +ಝೊಂಪಿಸಿತು +ನಿಮಿಷದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಕುಂಜರಾಶ್ವವ್ರಜದ ಮೆಳೆಯೊಣಗಿದುದು ಪವಮಾನಜ ಪರಾಕ್ರಮಶಿಖಿಯ ಝಳ ಝೊಂಪಿಸಿತು
(೨) ಘಾಡಿಕೆಗೆ, ವೇಢೆಗೆ – ಪದಗಳ ಬಳಕೆ
(೩) ಜೋಡಿ ಪದಗಳ ಬಳಕೆ – ಗುರಜು ಗುಲ್ಮದ; ಝಳ ಝೊಂಪಿಸಿತು

ಪದ್ಯ ೧೦: ವೈರಿ ಸೈನ್ಯವನ್ನು ಹೇಗೆ ನಿರ್ನಾಮ ಮಾಡಿದರು?

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ (ಶಲ್ಯ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬತ್ತು ಹೋಗುತ್ತಿದ್ದ ಸಮಯದಲ್ಲಿ, ನಿನ್ನ ಮಗ ಬಹಳ ಶೌರ್ಯದಿಂದ ಮುನ್ನುಗ್ಗಿದನು. ಐವತ್ತು ಸಾವಿರ ಕುದುರೆಗಳೊಡನೆ ಶಕುನಿಯು ಯುದ್ಧಕ್ಕೆ ಮುಂದಾದನು. ಆಯುಧಗಳನ್ನು ಹಿಡಿದು ಆನೆಗಳ ಮೇಲೆ ಬರುತ್ತಿದ್ದ ಸೈನಿಕರು ಕೈ ಸನ್ನೆ ಕೊಡುವ ಮೊದಲೇ ವೈರಿ ಸೈನ್ಯವನ್ನು ನಿರ್ನಾಮ ಮಾಡಿದವು.

ಅರ್ಥ:
ಸಮಯ: ಕಾಲ; ಬಹಳ: ತುಂಬ; ಶೌರ್ಯ: ಪರಾಕ್ರಮ; ಆವೇಶ: ರೋಷ; ನೂಕು: ತಳ್ಳು; ಸಾವಿರ: ಸಹಸ್ರ; ತುರಗ: ಕುದುರೆ; ದಳ: ಗುಂಪು; ಸಹಿತ: ಜೊತೆ; ಕೇಸುರಿ: ಕೆಂಪು ಉರಿ; ಕರ್ಬೊಗೆ: ಕಪ್ಪಾದ ಧೂಮ; ನಿಟ್ಟಾಸಿ: ಭಯಂಕರವಾದ; ಆಯುಧ: ಶಸ್ತ್ರ; ಆನೆ: ಕರಿ, ಗಜ; ಕೈವೀಸು: ಕೈ ಸನ್ನೆಮಾಡು; ಮುನ್ನ: ಮುಂಚೆ; ಮೊಗೆ:ನುಂಗು, ಕಬಳಿಸು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಆ +ಸಮಯದಲಿ +ಬಹಳ +ಶೌರ್ಯ
ಆವೇಶದಲಿ +ನಿನ್ನಾತ +ನೂಕಿದನ್
ಆ+ ಶಕುನಿ+ಐವತ್ತು +ಸಾವಿರ +ತುರಗದಳ +ಸಹಿತ
ಕೇಸುರಿಯ +ಕರ್ಬೊಗೆಯವೊಲು +ನಿ
ಟ್ಟಾಸಿನ್+ಆಯುಧದ್+ಆನೆಗಳು +ಕೈ
ವೀಸುವಲ್ಲಿಂ +ಮುನ್ನ +ಮೊಗೆದುವು +ವೈರಿ+ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೇಸುರಿಯ ಕರ್ಬೊಗೆಯವೊಲು

ಪದ್ಯ ೯: ಕೌರವ ಸೈನ್ಯದ ಸ್ಥಿತಿ ಏನಾಯಿತು?

ಫಡ ಎನುತ ಪಾಂಚಾಲಬಲ ಸಂ
ಗಡಿಸಿತನಿಲಜನೊಡನೆ ಸೃಂಜಯ
ರೆಡೆಯಲಡಹಾಯಿದರು ಸುತ ಸೋಮಾದಿಗಳು ಸಹಿತ
ಕಡೆವಿಡಿದು ಕಲಿಪಾರ್ಥನಂಬಿನ
ವಡಬನೆದ್ದುದು ಕುರುಬಲದ ಹೆ
ಗ್ಗಡಲು ಬರತುದು ಹೇಳಲೇನದ ಭೂಪ ಕೇಳೆಂದ (ಶಲ್ಯ ಪರ್ವ, ೩ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಥತ್ ಎಂದು ಕೌರವರನ್ನು ತಿರಸ್ಕರಿಸಿ ಪಾಂಚಾಲ ಬಲವು ಭೀಮನೊಡನೆ ಸೇರಿತು. ಸೃಂಜಯರು ಸುತಸೋಮನೇ ಮೊದಲಾದವರು ಕೌರವಬಲವನ್ನು ತಡೆದರು. ಅರ್ಜುನನ ಬಾಣಗಳ ವಡಬಾಗ್ನಿಯು ಮೇಲೆದ್ದಿತು. ಕೌರವ ಬಲದ ಕಡಲು ಬತ್ತಿಹೋಯಿತು.

ಅರ್ಥ:
ಫಡ: ತಿರಸ್ಕಾರದ ಮಾತು; ಬಲ: ಸೈನ್ಯ; ಸಂಗಡಿಸು: ಒಟ್ಟಾಗು, ಗುಂಪಾಗು; ಅನಿಲಜ: ಭೀಮ; ಅಡಹಾಯಿ: ಅಡ್ಡ ಬಂದು; ಆದಿ: ಮುಂತಾದ; ಸಹಿತ: ಜೊತೆ; ಕಡೆ: ಕೊನೆ; ಕಲಿ: ಶೂರ; ಅಂಬು: ಬಾಣ; ವಡಬ: ಸಮುದ್ರದಲ್ಲಿರುವ ಬೆಂಕಿ; ಎದ್ದು: ಮೇಲೇಳು; ಹೆಗ್ಗಡಲು: ದೊಡ್ಡ ಸಮುದ್ರ; ಬರ: ಕ್ಷಾಮ, ದುರ್ಭಿಕ್ಷ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಫಡ +ಎನುತ +ಪಾಂಚಾಲಬಲ +ಸಂ
ಗಡಿಸಿತ್+ಅನಿಲಜನೊಡನೆ +ಸೃಂಜಯರ್
ಎಡೆಯಲ್+ಅಡಹಾಯಿದರು +ಸುತ +ಸೋಮಾದಿಗಳು +ಸಹಿತ
ಕಡೆವಿಡಿದು +ಕಲಿ+ಪಾರ್ಥನ್+ಅಂಬಿನ
ವಡಬನೆದ್ದುದು +ಕುರುಬಲದ +ಹೆ
ಗ್ಗಡಲು +ಬರತುದು +ಹೇಳಲೇನದ +ಭೂಪ +ಕೇಳೆಂದ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸುತ ಸೋಮಾದಿಗಳು ಸಹಿತ
(೨) ರೂಪಕದ ಪ್ರಯೋಗ – ಕಲಿಪಾರ್ಥನಂಬಿನವಡಬನೆದ್ದುದು ಕುರುಬಲದ ಹೆಗ್ಗಡಲು ಬರತುದು

ಪದ್ಯ ೮: ಕೌರವರ ಜೊತೆಗೆ ಯಾವ ದೇಶದ ಸೈನಿಕರು ಸೇರಿದರು?

ಪಡಿಬಲಕೆ ಹೊಕ್ಕುದು ತ್ರಿಗರ್ತರ
ಗಡಣ ಕೃಪ ಕೃತವರ್ಮರಿಗೆ ಸಂ
ಗಡಿಗನಶ್ವತ್ಥಾಮನೀ ಹೇರಾಳ ದಳಸಹಿತ
ಕೊಡಹಿದರು ಪಾಂಡವಬಲವನವ
ಗಡಿಸಿದರು ಪವಮಾನಜನನ
ಕ್ಕುಡಿಸಿ ಬೆಬ್ಬಳೆವೋಯ್ತು ಭೀಮನ ಭಾರಣೆಯ ಭಟರು (ಶಲ್ಯ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಬೆಂಬಲಕ್ಕೆ ತ್ರಿಗರ್ತ ದೇಶದ ಸೈನಿಕರ ಬಲವು ನುಗ್ಗಿತು. ಅಶ್ವತ್ಥಾಮನು ಕೃಪ ಕೃತವರ್ಮರ ಸಂಗಡಿಗನಲ್ಲವೇ ಎಂದು ನುಗ್ಗಿ ಪಾಂಡವ ಬಲವನ್ನು ತಡೆದು ಭೀಮನನ್ನು ನಿಲ್ಲಿಸಿದರು. ಭೀಮನ ಪರಾಕ್ರಮಿಗಳು ಕಳವಳಗೊಂಡರು.

ಅರ್ಥ:
ಪಡಿಬಲ: ವೈರಿಸೈನ್ಯ; ಹೊಕ್ಕು: ಸೇರು; ತ್ರಿಗರ್ತ: ದೇಶದ ಹೆಸರು; ಗಡಣ: ಗುಂಪು; ಸಂಗಡಿ: ಜೊತೆಗಾರ; ಹೇರಾಳ: ದೊಡ್ಡ, ವಿಶೇಷ; ದಳ: ಸೈನ್ಯ; ಸಹಿತ: ಜೊತೆ; ಕೊಡಹು: ಚೆಲ್ಲು; ಬಲ: ಸೈನ್ಯ; ಅವಗಡಿಸು: ಕಡೆಗಣಿಸು; ಪವಮಾನಜ: ಭೀಮ; ಅಕ್ಕುಡರ್: ಸತ್ವಶಾಲಿ; ಬೆಬ್ಬಳೆ: ಸೋಜಿಗ, ಗಾಬರಿ; ಭಾರಣೆ: ಮಹಿಮೆ, ಗೌರವ; ಭಟ: ಸೈನಿಕ;

ಪದವಿಂಗಡಣೆ:
ಪಡಿಬಲಕೆ +ಹೊಕ್ಕುದು +ತ್ರಿಗರ್ತರ
ಗಡಣ+ ಕೃಪ +ಕೃತವರ್ಮರಿಗೆ+ ಸಂ
ಗಡಿಗನ್+ಅಶ್ವತ್ಥಾಮನ್+ಈ+ ಹೇರಾಳ +ದಳಸಹಿತ
ಕೊಡಹಿದರು +ಪಾಂಡವಬಲವನ್+ಅವ
ಗಡಿಸಿದರು +ಪವಮಾನಜನನ್
ಅಕ್ಕುಡಿಸಿ +ಬೆಬ್ಬಳೆವೋಯ್ತು +ಭೀಮನ +ಭಾರಣೆಯ +ಭಟರು

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭೀಮನ ಭಾರಣೆಯ ಭಟರು

ಪದ್ಯ ೭: ಭೀಮನು ಹೇಗೆ ಯುದ್ಧವನ್ನು ಮಾಡುತ್ತಿದ್ದನು?

ರಾಯ ಹೊಕ್ಕನು ಭೀಮಸೇನನ
ದಾಯ ಬಲುಹೋ ಧರ್ಮಪುತ್ರನ
ದಾಯವಲ್ಲಿದು ನೂಕೆನುತ ಕೃತವರ್ಮ ಗೌತಮರ
ಸಾಯಕದ ಮಳೆಗರೆದು ಕೌರವ
ರಾಯನನು ಹಿಂದಿಕ್ಕಿ ವೇಢೆಯ
ವಾಯುಜನ ವಂಗಡವ ಮುರಿದರು ತರಿದರರಿಬಲವ (ಶಲ್ಯ ಪರ್ವ, ೩ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನ ಯುದ್ಧದಂತಲ್ಲ, ಭೀಮನ ಲೆಕ್ಕಾಚಾರ ಉಗ್ರವಾದುದು. ದೊರೆಯು ಆವನೊಡನೆ ಕದನಕ್ಕೆ ಹೋಗಿದ್ದಾನೆ ಎಂದು ಕೃತವರ್ಮ ಕೃಪರು ಮುಂದೆ ಬಂದು ಬಾಣಗಳ ಮಳೆಗರೆದು, ಕೌರವನನ್ನು ಹಿಂದಿಟ್ಟು ದಾಳಿ ಮಾಡುತ್ತಿದ್ದ ಭೀಮನ ಗುಂಪನ್ನು ನುಗ್ಗಿ ಶತ್ರುಗಳನ್ನು ಸಂಹರಿಸಿದರು.

ಅರ್ಥ:
ರಾಯ: ರಾಜ; ಹೊಕ್ಕು: ಸೇರು; ಆಯ: ಪರಿಮಿತಿ, ರೀತಿ; ಬಲುಹು: ಶಕ್ತಿ; ನೂಕು: ತಳ್ಳು; ಸಾಯಕ: ಬಾಣ, ಶರ; ಮಳೆ: ವರ್ಷ; ಹಿಂದಿಕ್ಕು: ಹಿಂದೆ ತಳ್ಳು; ವೇಢೆಯ: ಹಯಮಂಡಲ; ವಾಯುಜ: ಭೀಮ; ವಂಗಡ: ಗುಂಪು; ಮುರಿ: ಸೀಳು; ತರಿ: ಕಡಿ, ಕತ್ತರಿಸು; ಅರಿ: ವೈರಿ; ಬಲ: ಸೈನ್ಯ;

ಪದವಿಂಗಡಣೆ:
ರಾಯ +ಹೊಕ್ಕನು +ಭೀಮಸೇನನದ್
ಆಯ +ಬಲುಹೋ +ಧರ್ಮಪುತ್ರನದ್
ಆಯವಲ್ಲಿದು+ ನೂಕೆನುತ+ ಕೃತವರ್ಮ +ಗೌತಮರ
ಸಾಯಕದ +ಮಳೆಗರೆದು +ಕೌರವ
ರಾಯನನು +ಹಿಂದಿಕ್ಕಿ +ವೇಢೆಯ
ವಾಯುಜನ+ ವಂಗಡವ+ ಮುರಿದರು+ ತರಿದರ್+ಅರಿಬಲವ

ಅಚ್ಚರಿ:
(೧) ವ ಕಾರದ ತ್ರಿವಳಿ ಪದ – ವೇಢೆಯ ವಾಯುಜನ ವಂಗಡವ
(೨) ಯುದ್ಧದ ತೀವ್ರತೆ – ಸಾಯಕದ ಮಳೆಗರೆದು ಕೌರವರಾಯನನು ಹಿಂದಿಕ್ಕಿ