ಪದ್ಯ ೬: ಅಶ್ವತ್ಥಾಮನ ಬೆಂಬಲಕ್ಕೆ ಯಾರು ಬಂದರು?

ಅರಸ ಕೇಳಡಹಾಯ್ದು ಪಾರ್ಥನ
ವರ ರಥವ ಹಿಂದಿಕ್ಕಿ ಪವನಜ
ನುರವಣಿಸಿದನು ನಕುಲ ಸಾತ್ಯಕಿ ಸಹಿತ ಗುರುಸುತನ
ಸರಳ ಸರಿವಳೆಗಳ ಸಘಾಡದ
ಲರಿಭಟನು ನನೆದನು ಮಹೋಗ್ರದ
ಧುರವ ಕಂಡನು ನೃಪತಿ ಬಂದನು ಬಿಟ್ಟ ಸೂಠಿಯಲಿ (ಶಲ್ಯ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನು ಅರ್ಜುನನ ರಥವನ್ನು ಹಿಂದಿಟ್ಟು, ಅಡ್ಡಹಾದು ಅಶ್ವತ್ಥಾಮನನ್ನಿದಿರಿಸಿದನು. ನಕುಲ ಸಾತ್ಯಕಿಗಳೂ ಬಂದು ಅವನ ಮೇಲೆ ಬಾಣಗಲನ್ನು ಬಿಡಲು ಅವರ ಬಾಣಗಳಿಂದ ಗುರುಸುತನು ನೆನೆದುಹೋದನು. ಉಗ್ರವಾದ ಈ ಯುದ್ಧವನ್ನು ಕಂಡು ಕೌರವನು ಅತಿವೇಗದಿಂದ ಅಶ್ವತ್ಥಾಮನಿಗೆ ಬೆಂಬಲವಾಗಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅಡಹಾಯ್ದು: ಮಧ್ಯಪ್ರವೇಶಿಸು; ವರ: ಶ್ರೇಷ್ಠ; ರಥ: ಬಂಡಿ; ಹಿಂದೆ: ಹಿಂಭಾಗ; ಪವನಜ: ಭೀಮ; ಉರವಣೆ: ಅವಸರ; ಸಹಿತ: ಜೊತೆ; ಸುತ: ಮಗ; ಸರಳ: ಬಾಣ; ಸರಿವಳೆ: ಜೋರಾದ ಮಳೆ; ಸಘಾಡ: ರಭಸ, ವೇಗ; ಅರಿ: ವೈರಿ; ಭಟ: ಸೈನಿಕ; ನನೆ: ತೋಯು, ಒದ್ದೆಯಾಗು; ಮಹೋಗ್ರ: ತುಂಬಾ ತೀಕ್ಷ್ಣವಾದ; ಧುರ: ಯುದ್ಧ, ಕಾಳಗ; ಕಂಡು: ನೋಡು; ನೃಪತಿ: ರಾಜ; ಬಂದನು: ಆಗಮಿಸು; ಸೂಠಿ: ವೇಗ;

ಪದವಿಂಗಡಣೆ:
ಅರಸ +ಕೇಳ್+ಅಡಹಾಯ್ದು +ಪಾರ್ಥನ
ವರ +ರಥವ +ಹಿಂದಿಕ್ಕಿ +ಪವನಜನ್
ಉರವಣಿಸಿದನು +ನಕುಲ +ಸಾತ್ಯಕಿ +ಸಹಿತ +ಗುರುಸುತನ
ಸರಳ +ಸರಿವಳೆಗಳ +ಸಘಾಡದಲ್
ಅರಿಭಟನು +ನನೆದನು +ಮಹೋಗ್ರದ
ಧುರವ +ಕಂಡನು +ನೃಪತಿ +ಬಂದನು +ಬಿಟ್ಟ +ಸೂಠಿಯಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸರಳ ಸರಿವಳೆಗಳ ಸಘಾಡದ

ನಿಮ್ಮ ಟಿಪ್ಪಣಿ ಬರೆಯಿರಿ