ಪದ್ಯ ೩೧: ಶಲ್ಯನ ಕೋಪದ ತೀವ್ರತೆ ಹೇಗಿತ್ತು?

ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ (ಶಲ್ಯ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಕಾಲಯಮನ ಕೋಪವೋ, ಕಾಲರುದ್ರನ ಹಣೆಗಣ್ಣಿನ ದೊಡ್ಡ ಕಿಡಿಯೋ ಎಂಬಂತೆ ರೋಷವುಕ್ಕಲು ಶಲ್ಯನ ಉಸಿರಿನಲ್ಲಿ ಹೊಗೆ ಮಸಗಿತು. ಕೌಂತೇಯ ಸುಧಾರಿಸಿಕೋ ಎಂದು ಬಾಣವನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮುಳಿ: ಕೋಪ; ಮಾದ್ರೇಶ್ವರ: ಶಲ್ಯ; ಖತಿ: ರೇಗು, ಕೋಪ; ಕುಪಿತ: ಕೋಪಗೊಳ್ಳು; ಯಮ: ಜವ; ಉಬ್ಬರ: ಅತಿಶಯ; ಕೋಪ: ಖತಿ; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಹಣೆ: ಲಲಾಟ; ಹೆಗ್ಗಿಡಿ: ದೊಡ್ಡ ಕಿಡಿ; ಉರಿ: ಬೆಂಕಿ; ಅಗ್ಗ: ಶ್ರೇಷ್ಠ; ರೋಷ: ಕೋಪ; ಹೊಗೆ: ಧೂಮ; ಹೊರಳು: ತಿರುವು; ಸುಯ್ಲು: ನಿಟ್ಟುಸಿರು; ಸಂವರಿಸು: ಸಮಾಧಾನಗೊಳಿಸು, ಸರಿಪಡಿಸು; ಕೌಂತೇಯ: ಕುಂತಿಯ ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಮಹೀಪತಿ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮುಳಿದ +ಮಾದ್ರೇ
ಶ್ವರನ +ಖತಿಯೋ +ಕುಪಿತ +ಯಮನ್
ಉಬ್ಬರದ +ಕೋಪವೊ +ಕಾಲರುದ್ರನ +ಹಣೆಯ +ಹೆಗ್ಗಿಡಿಯೊ
ಉರಿದನ್+ಅಗ್ಗದ +ರೋಷದಲಿ+ ಹೊಗೆ
ಹೊರಳಿ+ಕಟ್ಟಿತು +ಸುಯ್ಲಿನಲಿ +ಸಂ
ವರಿಸಿಕೊಳು+ ಕೌಂತೇಯ +ಎನುತ್+ಎಚ್ಚನು +ಮಹೀಪತಿಯ

ಅಚ್ಚರಿ:
(೧) ಮುಳಿ, ಖತಿ, ಕೋಪ, ರೋಷ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಕುಪಿತ ಯಮನುಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ

ನಿಮ್ಮ ಟಿಪ್ಪಣಿ ಬರೆಯಿರಿ