ಪದ್ಯ ೧೭: ಯಾರ ಮರಣದ ನಂತರ ಕರ್ಣನು ದುರ್ಯೋಧನನ ಕೈಹಿಡಿಯುತ್ತಾನೆ?

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಮ್ದನು ನಿನ್ನ ಮಗ ನಗುತ (ಶಲ್ಯ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮಾರ್ಜುನರೊಳಗೇ ದುಶ್ಯಾಸನನಿದ್ದಾನೆ. ನನ್ನ ಪ್ರಾಣಸ್ನೇಹಿತ ಕರ್ಣನು ಭೀಮಾರ್ಜುನರ ಮರಣದಿಂದ ಸಿದ್ಧಿಸಿ ನನ್ನ ಕೈಹಿಡಿಯುತ್ತಾನೆಂದು ನಿಶ್ಚಯಿಸಿದ್ದೇನೆ. ಕರ್ಣನ ಮರಣದ ಸುದ್ದಿಯನ್ನು ನಾಳೆ ತಿಳಿದುಕೊಳ್ಳುತ್ತೇನೆ ಎಂದು ದುರ್ಯೋಧನನು ನಗುತ್ತಾ ಹೇಳಿದನು.

ಅರ್ಥ:
ವೃಕೋದರ: ಭೀಮ; ಉದರ: ಹೊಟ್ಟೆ; ನರ: ಅರ್ಜುನ; ಅಂತರ್ಭಾವ: ಒಳಭಾವನೆ; ಜೀವ: ಪ್ರಾಣ; ಸಖ: ಸ್ನೇಹಿತ; ಮರಣ: ಸಾವು; ಸಿದ್ಧಿ: ಸಾಧನೆ; ಕೈವಿಡಿ: ಕೈಹಿಡಿ; ನಿಶ್ಚಯ: ನಿರ್ಧಾರ; ಸಾವು: ಮರಣ; ನಾಳೆ: ಮರುದಿನ; ಅರಿ: ತಿಳಿ; ಮಗ: ಸುತ; ನಗು: ಹರ್ಷ, ಸಂತಸ;

ಪದವಿಂಗಡಣೆ:
ಆ +ವೃಕೋದರ +ನರರೊಳ್+ಅಂತ
ರ್ಭಾವ +ದುಶ್ಯಾಸನಗೆ+ ತನ್ನಯ
ಜೀವಸಖಗಾ +ಭೀಮ +ಪಾರ್ಥರ +ಮರಣ+ಸಿದ್ಧಿಯಲಿ
ಕೈವಿಡಿಯಲೇ +ಕರ್ಣನಿಹನೆಂದ್
ಆವು +ನಿಶ್ಚಯಿಸಿದೆವು+ ಕರ್ಣನ
ಸಾವ +ನಾಳಿನೊಳ್+ಅರಿವೆನ್+ಎಂದನು +ನಿನ್ನ +ಮಗ +ನಗುತ

ಅಚ್ಚರಿ:
(೧) ವೃಕೋದರ, ಭೀಮ – ಭೀಮನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ