ಪದ್ಯ ೪೧: ದ್ರೋಣನು ತನ್ನ ಮಗನನ್ನು ಯಾರಿಗೆ ಹೋಲಿಸಿದನು?

ಶಿವ ಶಿವಾ ಕರ್ಣಜ್ವರಾಯತ
ರವವಿದೆತ್ತಣದೋ ಕುಮಾರನ
ತಿವಿದರಾರೋ ತಾನಿದದುಭುತವೆನುತ ತನ್ನೊಳಗೆ
ತವಕಿಸುತ ತಿಳಿದನು ವೃಕೋದರ
ನಿವ ದುರಾತ್ಮನು ತನ್ನ ಮಗನಾ
ಶಿವನೊಡನೆ ಸಮಜೋಳಿ ಹುಸಿ ಹೋಗೆಂದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಿವ ಶಿವಾ, ಇದು ಕಿವಿಗೆ ಜ್ವರ ಬರಿಸುವ ಮಾತು, ಈ ಧ್ವನಿ ಎತ್ತಣಿಂದ ಬಂದಿತು? ಅಶ್ವತ್ಥಾಮನನ್ನು ಕೊಂದವರಾರು? ಇದು ಪರಮಾದ್ಭುತ, ಎಂದು ಚಿಂತಿಸುತ್ತಾ ದ್ರೋಣನು ಈ ಮಾತನ್ನು ಹೇಳಿದವನು ಭೀಮನೆಂದು ತಿಳಿದು, ಇವನು ದುಷ್ಟ, ನನ್ನ ಮಗನು ಶಿವನಿಗೆ ಸಮಾನನಾದವನು. ಇದು ಸುಳ್ಳು ತೊಲಗು ಎಂದು ಹೇಳಿದನು.

ಅರ್ಥ:
ಕರ್ಣ: ಕಿವಿ; ಜ್ವರ: ಬೇನೆ; ಆಯತ: ಉಚಿತವಾದ; ರವ: ಶಬ್ದ; ಕುಮಾರ: ಮಗ; ತಿವಿ: ಚುಚ್ಚು; ಅದುಭುತ: ಆಶ್ಚರ್ಯ; ತವಕ: ಕಾತುರ; ತಿಳಿ: ಗೋಚರಿಸು; ವೃಕೋದರ: ತೋಳದಂತಹ ಹೊಟ್ಟೆ (ಭೀಮ); ದುರಾತ್ಮ: ದುಷ್ಟ; ಮಗ: ಸುತ; ಶಿವ: ಶಂಕರ; ಸಮಜೋಳಿ: ಸಮಾನವಾದ; ಹುಸಿ: ಸುಳ್ಳು; ಹೋಗು: ತೆರಳು;

ಪದವಿಂಗಡಣೆ:
ಶಿವ+ ಶಿವಾ+ ಕರ್ಣ+ಜ್ವರ+ಆಯತ
ರವವಿದ್+ಎತ್ತಣದೋ +ಕುಮಾರನ
ತಿವಿದರಾರೋ +ತಾನಿದ್+ಅದುಭುತವೆನುತ+ ತನ್ನೊಳಗೆ
ತವಕಿಸುತ +ತಿಳಿದನು +ವೃಕೋದರನ್
ಇವ +ದುರಾತ್ಮನು +ತನ್ನ +ಮಗನ್+ಆ
ಶಿವನೊಡನೆ +ಸಮಜೋಳಿ +ಹುಸಿ +ಹೋಗೆಂದನಾ +ದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಶಿವ ಶಿವಾ ಕರ್ಣಜ್ವರಾಯತರವವಿದೆತ್ತಣದೋ
(೨) ಅಶ್ವತ್ಥಾಮನನ್ನು ಹೋಲಿಸುವ ಪರಿ – ತನ್ನ ಮಗನಾ ಶಿವನೊಡನೆ ಸಮಜೋಳಿ

ನಿಮ್ಮ ಟಿಪ್ಪಣಿ ಬರೆಯಿರಿ