ಪದ್ಯ ೯: ಕುದುರೆಗಳು ಹೇಗೆ ಮಲಗಿದ್ದವು?

ಬಾಯ ಲೋಳೆಗಳಿಳಿಯೆ ಮೈಹಳು
ವಾಯಿ ಮಿಗೆ ತುದಿ ಖುರವನೂರಿ ನ
ವಾಯಿ ಮಿಗಲರೆನೋಟದಾಲಿಯ ಮಿಡುಕದವಿಲಣದ
ಲಾಯದಲಿ ಲಂಬಿಸಿದವೊಲು ವಾ
ನಾಯುಜದ ಸಾಲೆಸೆದುದೊರಗಿದ
ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ (ದ್ರೋಣ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಬಾಯಿಂದ ನೊರೆಯಿಳಿಯುತ್ತಿರಲು, ಮೈ ಬೆಂಡಾಗಿ ತುದಿಗೊರಸನ್ನೂರಿ ಕಣ್ಣನ್ನು ಅರೆತೆರೆದು ಲಾಯದಲ್ಲಿ ಮಲಗಿದಂತೆ ಕುದುರೆಗಳ ಸಾಲು ಮಲಗಿತ್ತು. ರಾವುತರ ಕಿರೀಟಗಳು ಮರಗೋಡಿನ ಮೇಲಿದ್ದವು.

ಅರ್ಥ:
ಲೋಳೆ: ಅ೦ಟುಅ೦ಟಾಗಿರುವ ದ್ರವ್ಯ; ಇಳಿ: ಕೆಳಕ್ಕೆ ಬೀಳು; ಮೈ: ತನು; ಹಳುವ: ಕಾಡು; ಮಿಗೆ: ಅಧಿಕ; ತುದಿ: ಕೊನೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಊರು: ಮೆಟ್ಟು; ನವಾಯಿ: ಹೊಸರೀತಿ, ಠೀವಿ; ಮಿಗಲು: ಹೆಚ್ಚು; ಅರೆ: ಅರ್ಧ; ನೋಟ: ದೃಷ್ಥಿ; ಆಲಿ: ಕಣ್ಣು; ಮಿಡುಕು: ಅಲುಗಾಟ, ಚಲನೆ; ಲಾಯ: ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ಲಂಬಿಸು: ತೂಗಾಡು, ಜೋಲಾಡು; ವಾನಾಯುಜ: ಕುದುರೆ; ಸಾಲು: ಆವಳಿ; ಒರಗು: ಮಲಗು, ಬೆನ್ನಿಗೆ ಆಶ್ರಯಹೊಂದಿ ವಿಶ್ರಮಿಸು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಣಿ: ಬೆಲೆಬಾಳುವ ರತ್ನ; ಮಕುಟ: ಕಿರೀಟ; ಮರಗೋಡು: ಕುದುರೆಯ ನೆತ್ತಿಗೆ ಕಟ್ಟಿದ ಲೋಹದ ರಕ್ಷೆ; ಓಲೈಸು: ಸೇವೆಮಾಡು, ಉಪಚರಿಸು;

ಪದವಿಂಗಡಣೆ:
ಬಾಯ +ಲೋಳೆಗಳ್+ಇಳಿಯೆ +ಮೈಹಳು
ವಾಯಿ +ಮಿಗೆ +ತುದಿ +ಖುರವನ್+ಊರಿ +ನ
ವಾಯಿ +ಮಿಗಲ್+ಅರೆನೋಟದ್+ಆಲಿಯ +ಮಿಡುಕದವಿಲಣದ
ಲಾಯದಲಿ +ಲಂಬಿಸಿದವೊಲು+ ವಾ
ನಾಯುಜದ +ಸಾಲೆಸೆದುದ್+ಒರಗಿದ
ರಾಯ +ರಾವ್ತರ+ ಮಣಿಮಕುಟ+ ಮರಗೋಡನ್+ಓಲೈಸೆ

ಅಚ್ಚರಿ:

(೧) ವಾನಾಯುಜ – ಕುದುರೆಗಳನ್ನು ಕರೆದ ಪರಿ
(೨) ಲಾಯ, ಬಾಯ, ರಾಯ – ಪ್ರಾಸ ಪದಗಳು
(೩) ಕುದುರೆಗಳು ಮಲಗಿದ ಪರಿ – ವಾನಾಯುಜದ ಸಾಲೆಸೆದುದೊರಗಿದ ರಾಯ ರಾವ್ತರ ಮಣಿಮಕುಟ ಮರಗೋಡನೋಲೈಸೆ

ನಿಮ್ಮ ಟಿಪ್ಪಣಿ ಬರೆಯಿರಿ