ಪದ್ಯ ೮: ಆನೆಗಳು ಹೇಗೆ ಮಲಗಿದವು?

ಒಲೆದ ಒಡಲನು ಮುರಿದು ಬರಿಕೈ
ಗಳನು ದಾಡೆಯೊಳಿಟ್ಟು ಫೂತ್ಕೃತಿ
ಬಲಿದ ನಾಸಾಪುಟದ ಜೋಲಿದ ಕರ್ಣಪಲ್ಲವದ
ತಳಿತ ನಿದ್ರಾರಸವನರೆ ಮು
ಕ್ಕುಳಿಸಿದಕ್ಷಿಯೊಳೆರಡು ಗಲ್ಲದ
ಲುಲಿವ ತುಂಬಿಯ ರವದ ದಂತಿಗಳೆಸೆದವೊಗ್ಗಿನಲಿ (ದ್ರೋಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಮೈಯನ್ನು ಅತ್ತಿತ್ತ ತೂಗಾಡಿ, ಸೊಂಡಿಲನ್ನು ದಾಡೆಗಳಲ್ಲಿಟ್ಟು, ಮೂಗಿನಿಂದ ಫೂತ್ಕಾರ ಮಾಡುತ್ತಾ, ಕಿವಿಗಳು ಜೋಲು ಬಿದ್ದಿರಲು, ಕಣ್ಣುಗಳಲ್ಲಿ ನಿದ್ರಾರಸವನ್ನು ಸೂಸುತ್ತಾ, ಎರಡು ಗಲ್ಲಗಳಲ್ಲೂ ಮದಜಲಕ್ಕೆ ಮುತ್ತಿದ ದುಂಬಿಗಳ ಝೇಂಕಾರ ತುಂಬಿರಲು ಆನೆಗಳು ಸಾಲು ಸಾಲಾಗಿ ಮಲಗಿದವು.

ಅರ್ಥ:
ಒಲೆ: ತೂಗಾಡು; ಒಡಲು: ದೇಹ; ಮುರಿ: ಸೀಳು; ಬರಿ: ಕೇವಲ; ಕೈ: ಹಸ್ತ; ದಾಡೆ: ದವಡೆ, ಒಸಡು; ಫೂತ್ಕೃತಿ: ಆರ್ಭಟ; ಬಲಿ: ಗಟ್ಟಿಯಾಗು; ನಾಸಾಪುಟ: ಮೂಗು; ಜೋಲು: ಕೆಳಕ್ಕೆ ಬೀಳು, ನೇತಾಡು; ಕರ್ಣ: ಕಿವಿ; ಪಲ್ಲವ: ಚಿಗುರು; ಕರ್ಣಪಲ್ಲವ: ಚಿಗುರಿನಂತೆ ಮೃದುವಾದ ಕಿವಿ; ತಳಿತ: ಚಿಗುರು; ನಿದ್ರೆ: ಶಯನ; ರಸ: ಸಾರ; ಮುಕ್ಕುಳಿಸು: ಬಾಯಿ ತೊಳೆದುಕೋ; ಅಕ್ಷಿ: ಕಣ್ಣು; ಗಲ್ಲ: ಕೆನ್ನ; ಉಲಿವು: ಶಬ್ದ; ತುಂಬಿ: ಭ್ರಮರ; ರವ: ಶಬ್ದ; ದಂತಿ: ಆನೆ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಒಲೆದ+ ಒಡಲನು +ಮುರಿದು +ಬರಿಕೈ
ಗಳನು +ದಾಡೆಯೊಳ್+ಇಟ್ಟು +ಫೂತ್ಕೃತಿ
ಬಲಿದ +ನಾಸಾಪುಟದ+ ಜೋಲಿದ +ಕರ್ಣ+ಪಲ್ಲವದ
ತಳಿತ +ನಿದ್ರಾರಸವನ್+ಅರೆ +ಮು
ಕ್ಕುಳಿಸಿದ್+ಅಕ್ಷಿಯೊಳ್+ಎರಡು+ ಗಲ್ಲದಲ್
ಉಲಿವ +ತುಂಬಿಯ +ರವದ +ದಂತಿಗಳ್+ಎಸೆದವ್+ಒಗ್ಗಿನಲಿ

ಅಚ್ಚರಿ:
(೧) ನಾಸಾಪುಟ, ದಾಡೆ, ಒಡಲು, ಕರ್ಣ, ಅಕ್ಷಿ – ದೇಹದ ಅಂಗಗಳನ್ನು ಬಳಸಿದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ