ಪದ್ಯ ೩೦: ಕರ್ಣನು ದುರ್ಯೋಧನನಿಗೆ ಯಾವ ವಿನೋದವನ್ನು ನೋಡಲು ಹೇಳಿದನು?

ಆದಡಮರವಿರೋಧಿಯಸುವನು
ಸೇದುವೆನು ಸರಿಸದಲಿ ನಿಂದರೆ
ನಾದುವೆನು ನಿಟ್ಟೊಡಲ ರಕುತದಲಖಿಳ ದಿಗುತಟವ
ಕಾದುವೆನು ನಮ್ಮವರು ಕಳಚಿದ
ಕೈದುವನು ಕೈವಶವಮಾಡಿ ವಿ
ನೋದವನು ನೀವ್ ನೋಡಿ ಎಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ಹಾಗಾದರೆ ಈ ರಾಕ್ಷಸನ ಪ್ರಾಣವನ್ನು ಹೀರುತ್ತೇನೆ, ನನ್ನೆದುರು ಸರಿಸಮಾನವಾಗಿ ನಿಮ್ತರೆ ಇವನ ದೈತ್ಯದೇಹದ ರಕ್ತವನ್ನು ಎಲ್ಲಾ ದಿಕ್ಕುಗಳಲ್ಲೂ ಚೆಲ್ಲುತ್ತೇನೆ, ನಮ್ಮವರು ಕಳೆದುಕೊಂಡ ಆಯುಧಗಳು ಮತ್ತೆ ಕೈವಶವಾಗುವಂತೆ ಯುದ್ಧಮಾಡುತ್ತೇನೆ, ಈ ವಿನೋದವನ್ನು ನೀವು ನೋಡಿರಿ ಎಂದು ಕರ್ಣನು ಹೇಳಿದನು.

ಅರ್ಥ:
ಅಮರ: ದೇವತೆ; ವಿರೋಧಿ: ವೈರಿ; ಅಸು: ಪ್ರಾಣ; ಸೇದು: ಸೆಳೆ, ದೋಚು; ಸರಿಸ: ರೀತಿ, ಕ್ರಮ; ನಿಂದು: ನಿಲ್ಲು; ನಾದು: ಕಲಸು; ಒಡಲು: ದೇಹ; ರಕುತ: ನೆತ್ತರು; ಅಖಿಳ: ಎಲ್ಲಾ; ದಿಗುತಟ: ದಿಕ್ಕು; ಕಾದು: ಹೋರಾಡು; ಕಳಚು: ತೆಗೆ, ಬೇರ್ಪಡಿಸು; ಕೈದು: ಆಯುಧ; ವಶ: ಅಧೀನ; ವಿನೋದ: ಹರ್ಷ; ನೋಡು: ವೀಕ್ಷಿಸು; ಅರಸು: ರಾಜ;

ಪದವಿಂಗಡಣೆ:
ಆದಡ್+ಅಮರ+ವಿರೋಧಿ+ಅಸುವನು
ಸೇದುವೆನು +ಸರಿಸದಲಿ +ನಿಂದರೆ
ನಾದುವೆನು+ ನಿಟ್ಟೊಡಲ+ ರಕುತದಲ್+ಅಖಿಳ +ದಿಗುತಟವ
ಕಾದುವೆನು +ನಮ್ಮವರು +ಕಳಚಿದ
ಕೈದುವನು +ಕೈವಶವಮಾಡಿ+ ವಿ
ನೋದವನು +ನೀವ್ +ನೋಡಿ +ಎಂದನು +ಕರ್ಣನ್+ಅರಸಂಗೆ

ಅಚ್ಚರಿ:
(೧) ಘಟೋತ್ಕಚನನ್ನು ಅಮರವಿರೋಧಿ ಎಂದು ಕರೆದಿರುವುದು
(೨) ಕಾದು, ನಾದು, ಕೈದು – ಪ್ರಾಸ ಪದಗಳು

ಪದ್ಯ ೨೯: ಮೊದಲು ಯಾರನ್ನು ಸಂಹರಿಸಲು ದುರ್ಯೋಧನನು ಹೇಳಿದನು?

ಈಗಳೀ ದಾನವನ ಬಲೆಯಲಿ
ತಾಗಿ ಸಿಲುಕಿತು ನಮ್ಮ ಮೋಹರ
ಮೇಲೆ ಫಲುಗುಣನಾರ ಕೊಲುವನು ಮರಣ ನಮಗಾಗೆ
ನೀಗಿ ಕಳೆ ಕೊಲೆಗಡಿಗನನು ಜಯ
ವಾಗಲೀಗಳೆ ಮುಂದೆ ನರನು
ದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ (ದ್ರೋಣ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ದುರ್ಯೊಧನನು ನುಡಿಯುತ್ತಾ, ಕರ್ಣಾ, ಈಗ ಈ ರಾಕ್ಷಸನ ಬಲೆಯಲ್ಲಿ ನಮ್ಮ ಸೈನ್ಯ ಸಿಕ್ಕುಹಾಕಿಕೊಂಡಿದೆ. ಈ ರಾತ್ರಿ ನಾವೇ ಸತ್ತು ಹೋದರೆ ಅರ್ಜುನನು ಇನ್ನಾರನು ಕೊಲ್ಲುತ್ತಾನೆ. ಈ ಕೊಲೆಗಡಿಕನನ್ನು ಕೊಂದುಹಾಕಿ ಜಯವನ್ನು ಸಾಧಿಸು. ಮುಂದೆ ಅರ್ಜುನನೆಂಬ ರೋಗಕ್ಕೆ ಮದನ್ನು ಕಂಡು ಹಿಡಿಯೋಣ ಎಂದು ಹೇಳಿದನು.

ಅರ್ಥ:
ದಾನವ: ರಾಕ್ಷಸ; ಬಲೆ: ಮೋಸ, ವಂಚನೆ; ತಾಗು: ಮುಟ್ಟು; ಸಿಲುಕು: ಬಂಧನಕ್ಕೊಳಗಾಗು; ಮೋಹರ: ಯುದ್ಧ; ಕೊಲು: ಸಾಯಿಸು; ಮರಣ: ಸಾವು; ನೀಗು: ನಿವಾರಿಸಿಕೊಳ್ಳು; ಕಳೆ: ತೊರೆ; ಕೊಲೆ: ಸಾಯಿಸು; ಜಯ: ಗೆಲುವು; ಮುಂದೆ: ಎದುರು; ಉದ್ಯೋಗ: ಕಾರ್ಯ; ಚಿಕಿತ್ಸೆ: ಮದ್ದು, ಶುಶ್ರೂಷೆ, ರೋಗವನ್ನು ಹೋಗಲಾಡಿಸುವ ಪರಿ; ಭೂಪ: ರಾಜ;

ಪದವಿಂಗಡಣೆ:
ಈಗಳ್+ಈ+ ದಾನವನ +ಬಲೆಯಲಿ
ತಾಗಿ +ಸಿಲುಕಿತು +ನಮ್ಮ +ಮೋಹರ
ಮೇಲೆ +ಫಲುಗುಣನ್+ಆರ +ಕೊಲುವನು +ಮರಣ+ ನಮಗಾಗೆ
ನೀಗಿ +ಕಳೆ +ಕೊಲೆಗಡಿಗನನು +ಜಯ
ವಾಗಲ್+ಈಗಳೆ+ ಮುಂದೆ +ನರನ್
ಉದ್ಯೋಗಕಾರೈವೆವು +ಚಿಕಿತ್ಸೆಯನ್+ಎಂದನಾ +ಭೂಪ

ಅಚ್ಚರಿ:
(೧) ಚಿಕಿತ್ಸೆ ಪದದ ಬಳಕೆ – ನರನುದ್ಯೋಗಕಾರೈವೆವು ಚಿಕಿತ್ಸೆಯನೆಂದನಾ ಭೂಪ

ಪದ್ಯ ೨೮: ಕರ್ಣನಿಗೆ ಏನು ತಿಳಿಯದಾಗಿಹುದು?

ಕಳೆದ ಮೀಸಲ ಶಕ್ತಿ ಪಾರ್ಥನ
ತಲೆಗೆ ಬೈಚಿಟ್ಟಿಹುದನೀಗಳು
ಸೆಳೆದೆನಾದರೆ ಮುಂದೆ ಫಲುಗುಣನೆನ್ನ ಲೆಕ್ಕಿಸನು
ಉಳಿದ ಬಾಣಂಗಳಲಿ ದೈತ್ಯನ
ಗೆಲುವುದರಿದಿದಕಾವ ಹದನೋ
ತಿಳಿಯಲರಿಯೆನು ಜೀಯಯೆಂದನು ಕುರುಪತಿಗೆ ಕರ್ಣ (ದ್ರೋಣ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಒಡೆಯಾ, ಇಂದ್ರನು ನೀಡಿದ ಶಕ್ತಿಯನ್ನು ಅರ್ಜುನನ ಸಂಹಾರಕ್ಕಾಗಿ ಮೀಸಲಾಗಿಟ್ಟಿದ್ದೇನೆ, ಅದನ್ನೀಗ ಪ್ರಯೋಗಿಸಿದರೆ ಮುಂದೆ, ಅರ್ಜುನನು ನನ್ನನ್ನು ಲೆಕ್ಕಿಸುವುದಿಲ್ಲ. ಅದನ್ನು ಬಿಟ್ಟು ಉಳಿದ ಬಾಣಗಳಿಂದ ಇವನನ್ನು ಗೆಲ್ಲುವುದು ಸಾಧ್ಯವಿಲ್ಲ. ಆದುದರಿಂದ ಇದಕ್ಕೇನು ಮಾಡಬೇಕೋ ತಿಳಿಯದಾಗಿದೆ ಎಂದು ಕರ್ಣನು ಹೇಳಿದನು.

ಅರ್ಥ:
ಕಳೆದ: ತೀರಿದ; ಮೀಸಲು: ಕಾಯ್ದಿರಿಸು; ಶಕ್ತಿ: ಬಲ; ತಲೆ: ಶಿರ; ಬೈಚಿಟ್ಟು: ಅಡಗಿಸು; ಸೆಳೆ: ಆಕರ್ಷಿಸು, ಎಳೆ; ಲೆಕ್ಕಿಸು: ಎಣಿಕೆಮಾಡು; ಉಳಿದ: ಮಿಕ್ಕ; ಬಾಣ: ಅಂಬು; ದೈತ್ಯ: ರಾಕ್ಷಸ; ಗೆಲುವು: ಜಯ; ಅರಿ: ತಿಳಿ; ಹದ: ಸ್ಥಿತಿ; ತಿಳಿ: ಅರ್ಥೈಸು; ಜೀಯ: ಒಡೆಯ;

ಪದವಿಂಗಡಣೆ:
ಕಳೆದ +ಮೀಸಲ +ಶಕ್ತಿ +ಪಾರ್ಥನ
ತಲೆಗೆ +ಬೈಚಿಟ್ಟಿಹುದನ್+ಈಗಳು
ಸೆಳೆದೆನಾದರೆ+ ಮುಂದೆ +ಫಲುಗುಣನ್+ಎನ್ನ +ಲೆಕ್ಕಿಸನು
ಉಳಿದ +ಬಾಣಂಗಳಲಿ +ದೈತ್ಯನ
ಗೆಲುವುದರಿದ್+ಇದಕಾವ +ಹದನೋ
ತಿಳಿಯಲ್+ಅರಿಯೆನು +ಜೀಯ+ಎಂದನು +ಕುರುಪತಿಗೆ +ಕರ್ಣ

ಅಚ್ಚರಿ:
(೧) ಕಳೆದ, ಉಳಿದ; ಸೆಳೆದೆ, ಮುಂದೆ – ಪ್ರಾಸ ಪದ

ಪದ್ಯ ೨೭: ಕರ್ಣನಿಗೆ ಯಾರನ್ನು ಸಂಹರಿಸಲು ಹೇಳಿದನು?

ತಾಗಿ ವಜ್ರವ ಮುಕ್ಕುಗಳೆವಡೆ
ಸಾಗರವ ಹೊಗಳೇಕ ಗಿರಿಗಳು
ಹೋಗಲಿನ್ನಾ ಮಾತು ಮೀರಿದ ದೈತ್ಯನುಪಟಳವ
ಈಗ ಮಾಣಿಸು ನಮ್ಮ ಸುಭಟರು
ಯೋಗಿಗಳವೊಲು ದಂಡಹೀನರು
ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ (ದ್ರೋಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಆಗಲಿ, ಇನ್ನು ನಮ್ಮ ವೀರರನ್ನು ನಿಂದಿಸುವುದಿಲ್ಲ. ವಜ್ರಾಯುಧವನ್ನು ನಿಷ್ಕ್ರಿಯಗೊಳಿಸಲು, ಪರ್ವತಗಳು ಸಮುದ್ರವನ್ನೇಕೆ ಹೊಗಬೇಕು. ಈಗ ಈ ರಾಕ್ಷಸನ ಉಪಟಳವನ್ನು ನಿಲ್ಲಿಸು. ಉಳಿದ ವೀರರೆಲ್ಲಾ ಯೋಗಿಗಳಂತೆ ಪ್ರತೀಕಾರಕ್ಕಾಗಿ ದಂಡೋಪಾಯವನ್ನು ತ್ಯಜಿಸಿದ್ದಾರೆ. ಬಹುಬೇಗ ಘಟೋತ್ಕಚನನ್ನು ಸಂಹರಿಸು ಎಂದು ಕರ್ಣನಿಗೆ ಹೇಳಿದನು.

ಅರ್ಥ:
ತಾಗು: ಮುಟ್ಟು; ವಜ್ರ: ಗಟ್ಟಿಯಾದ; ಮುಕ್ಕು: ಸೊಕ್ಕು, ಗರ್ವ; ಕಳೆ: ತೀರಿಸು; ಸಾಗರ: ಸಮುದ್ರ; ಹೊಗಲು: ತೆರಳಲು; ಗಿರಿ: ಬೆಟ್ಟ; ಮಾತು: ನುಡಿ; ಮೀರು: ದಾಟು; ದೈತ್ಯ: ರಾಕ್ಷಸ; ಉಪಟಳ: ಕಿರುಕುಳ; ಮಾಣಿಸು: ನಿಲ್ಲಿಸು; ಸುಭಟ: ಪರಾಕ್ರಮಿ; ಯೋಗಿ: ಋಷಿ; ದಂಡ: ಕೋಲು, ಆಯುಧ; ಹೀನ: ತೊರೆದ; ಬೇಗ: ರಭಸ; ಅಮರವೈರಿ: ರಾಕ್ಷಸ; ಅಮರ: ದೇವತೆ; ವೈರಿ: ಶತ್ರು; ತರಿ: ಕಡಿ, ಕತ್ತರಿಸು; ಬಿಸುಡು: ಬಿಸಾಡು, ಹೊರಹಾಕು;

ಪದವಿಂಗಡಣೆ:
ತಾಗಿ +ವಜ್ರವ +ಮುಕ್ಕು+ಕಳೆವಡೆ
ಸಾಗರವ +ಹೊಗಲೇಕ +ಗಿರಿಗಳು
ಹೋಗಲಿನ್ನಾ + ಮಾತು +ಮೀರಿದ +ದೈತ್ಯನ್+ಉಪಟಳವ
ಈಗ+ ಮಾಣಿಸು +ನಮ್ಮ +ಸುಭಟರು
ಯೋಗಿಗಳವೊಲು +ದಂಡಹೀನರು
ಬೇಗ +ಮಾಡಿನ್+ಅಮರವೈರಿಯ +ತರಿದು +ಬಿಸುಡೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಬೇಗ ಮಾಡಿನ್ನಮರವೈರಿಯ ತರಿದು ಬಿಸುಡೆಂದ
(೨) ಕೌರವ ರಾಜರನ್ನು ತೆಗಳುವ ಪರಿ – ನಮ್ಮ ಸುಭಟರು ಯೋಗಿಗಳವೊಲು ದಂಡಹೀನರು

ಪದ್ಯ ೨೬: ಕರ್ಣನು ದುರ್ಯೋಧನನಿಗೆ ಏನು ಹೇಳಿದನು?

ನಡೆವುತೆಡಹಿದ ಪಟ್ಟದಾನೆಯ
ಮಿಡಿಯ ಹೊಯ್ವರೆ ಜೀಯ ರಣವವ
ಗಡವು ನಮಗಿದು ರಾತ್ರಿ ದೈತ್ಯರಿಗಿದುವೆ ನಡುಹಗಲು
ಮೃಡನನೊಂದವಸರಕೆ ಬಗೆಯದ
ಕಡುಹುಕಾರರು ನಿನ್ನವರು ಕೆಡೆ
ನುಡಿದು ನೋಯಿಸಲೇತಕೆಂದನು ಕರ್ಣನರಸಂಗೆ (ದ್ರೋಣ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಡೆಯುತ್ತಾ ಎಡವಿದ ಪಟ್ಟದಾನೆಯನ್ನು ನಡುಗುವಂತೆ ಹೊಯ್ಯುವರೇ? ಜೀಯಾ ಈಗ ರಾತ್ರಿ, ನಮಗೆ ಈಗ ಯುದ್ಧವು ಕಷ್ಟಸಾಧ್ಯ, ರಾಕ್ಷಸರಿಗೆ ರಾತ್ರಿಯೇ ನಡುಹಗಲು, ಆದುದರಿಂದ ನಮಗೆ ಈ ದುರ್ಗತಿ ಬಂದಿದೆ. ಸಮಯಬಂದರೆ ಶಿವನನ್ನು ಲೆಕ್ಕಿಸದ ವೀರರಿವರು. ಇಂತಹವನರ್ನ್ನು ತಿರಸ್ಕಾರದ ಮಾತುಗಳಿಂದ ಏಕೆ ನೋಯಿಸಬೇಕು?

ಅರ್ಥ:
ನಡೆ: ಚಲಿಸು; ಎಡಹು: ಮುಗ್ಗುರಿಸು, ಬೀಳು; ಪಟ್ಟದಾನೆ: ಶ್ರೇಷ್ಠವಾದ, ಪರಾಕ್ರಮಿ; ಮಿಡಿ: ತವಕಿಸು, ಹಿಂಭಾಗ; ಹೊಯ್ವ: ಹೊಡೆಯುವ; ಜೀಯ: ಒಡೆಯ; ರಣ: ಯುದ್ಧರಂಗ; ಗಡ: ಅಲ್ಲವೆ; ತ್ವರಿತವಾಗಿ; ರಾತ್ರಿ: ಇರುಳು; ದೈತ್ಯ: ದಾನವ; ನಡು: ಮಧ್ಯ; ಹಗಲು: ದಿನ; ಮೃಡ: ಈಶ್ವರ; ಅವಸರ: ಬೇಗ, ಲಗುಬಗೆ; ಬಗೆ: ಯೋಚಿಸು, ಎಣಿಸು; ಕಡುಹು: ಸಾಹಸ, ಹುರುಪು; ಕೆಡೆ: ಬೀಳು; ನುಡಿ: ಮಾತು; ನೋವು: ಪೆಟ್ಟು; ಅರಸ: ರಾಜ;

ಪದವಿಂಗಡಣೆ:
ನಡೆವುತ್+ಎಡಹಿದ +ಪಟ್ಟದಾನೆಯ
ಮಿಡಿಯ +ಹೊಯ್ವರೆ +ಜೀಯ +ರಣವವ
ಗಡವು +ನಮಗಿದು +ರಾತ್ರಿ +ದೈತ್ಯರಿಗ್+ಇದುವೆ +ನಡುಹಗಲು
ಮೃಡನನೊಂದ್+ಅವಸರಕೆ +ಬಗೆಯದ
ಕಡುಹುಕಾರರು +ನಿನ್ನವರು +ಕೆಡೆ
ನುಡಿದು +ನೋಯಿಸಲ್+ಏತಕೆಂದನು+ ಕರ್ಣನ್+ಅರಸಂಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆವುತೆಡಹಿದ ಪಟ್ಟದಾನೆಯಮಿಡಿಯ ಹೊಯ್ವರೆ
(೨) ರಾಕ್ಷಸರ ಬಗ್ಗೆ ಕರ್ಣನ ನುಡಿ – ಮೃಡನನೊಂದವಸರಕೆ ಬಗೆಯದ ಕಡುಹುಕಾರರು