ಪದ್ಯ ೭: ಘಟೋತ್ಕಚನು ಯುದ್ಧದಲ್ಲಿ ಯಾವ ತಂತ್ರವನ್ನು ಉಪಯೋಗಿಸಿದನು?

ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ (ದ್ರೋಣ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಘಟೋತ್ಕಚನು, ಭಲೇ ಕುರು ಸೈನ್ಯವು ಬಹಳ ವಿಶಾಲವಾಗಿದೆ. ಎಂದಿಗೆ ನಾನು ಇವರನ್ನು ಕೊಲ್ಲಲಾದೀತು, ನನ್ನ ಕೈಸೋತವು ಆದರೂ ಇವರನ್ನು ಕೊಲ್ಲಲು ಒಂದು ಮದ್ದನ್ನು ಬಲ್ಲೆ, ಎಂದು ಮಾಯಾಯುದ್ಧದಿಂದ ಬೆದರಿಕೆ ಹಾಕಿದನು, ಅದನ್ನು ನಾನು ಹೇಗೆ ತಾನೆ ವರ್ಣಿಸಲಿ.

ಅರ್ಥ:
ಪೂತು: ಭಲೇ; ಸೈನಿಕ: ಭಟ; ಅಸಂಖ್ಯಾತ: ಅಗಣಿತ; ಸವೆ: ನಾಶ; ಸೋತು: ಪರಾಭವ; ಹರ: ಶಿವ; ಕೊಲು: ಸಾಯಿಸು; ಅಮರಾರಿ: ದಾನವ, ರಾಕ್ಷಸ; ಅಮರ: ದೇವತೆ; ಅರಿ: ವೈರಿ; ಚಿಂತಿಸು: ಯೋಚಿಸು; ಅಳಿ: ನಾಶ; ಮದ್ದು: ಔಷಧಿ; ಮಾಯ: ಇಂದ್ರಜಾಲ; ಅತಿಶಯ: ಹೆಚ್ಚು; ಯುದ್ಧ: ರಣರಂಗ; ಸಂಘಾತ: ಗುಂಪು, ಸಮೂಹ; ಬೆದರಿಸು: ಹೆದರಿಸು; ವಣ್ಣಿಸು: ವಿವರಿಸು;

ಪದವಿಂಗಡಣೆ:
ಪೂತುರೇ +ಕುರುಸೈನಿಕವ್+ಅಸಂ
ಖ್ಯಾತವ್+ಎಂದಿಗೆ +ಸವೆವುದೋ +ಕೈ
ಸೋತವೇ +ಹರ +ಕೊಲುವೆನ್+ಎನುತ್+ಅಮರಾರಿ +ಚಿಂತಿಸಿದ
ಈತಗ್+ಅಳಿಗಿದು +ಮದ್ದೆನುತ +ಮಾ
ಯಾತಿಶಯ +ಯುದ್ಧದಲಿ +ಬಲ+ಸಂ
ಘಾತವನು +ಬೆದರಿಸಿದನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ