ಪದ್ಯ ೯: ಘಟೋತ್ಕಚನ ಮಾಯಾವತಾರಗಳು ಹೇಗಿದ್ದವು?

ಬೀಳಹೊಯ್ದನು ಬಿರುದರನು ಬಿರು
ಗಾಳಿಯಾಗಿ ವರೂಥಚಯವನು
ಕಾಳುಕಿಚ್ಚಾಗುರುಹಿದನು ಫಣಿಯಾಗಿ ತುಡುಕಿದನು
ಮೇಲುಗವಿದನು ಜಲಧಿಯಾಗಿ ನೃ
ಪಾಲನಿಕರದೊಳುರುಳಿದನು ಗಿರಿ
ಜಾಳವಾಗಿ ಘಟೋತ್ಕಚನು ಘಲ್ಲಿಸಿದನತಿರಥರ (ದ್ರೋಣ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬಿರುಗಾಳಿಯಾಗಿ ಬೀಸಿ ವೀರರನ್ನುರುಳಿಸಿದನು. ಕಾಡುಗಿಚ್ಚಾಗಿ ರಥಗಳನ್ನು ಸುಟ್ಟನು. ಹಾವಾಗಿ ಕಚ್ಚಿದನು, ಸಮುದ್ರವಾಗಿ ಕೊಚ್ಚಿಕೊಂಡು ಹೋದನು. ಬೆಟ್ಟವಾಗಿ ಶತ್ರುಗಳ ಮೇಲೆ ಬಿದ್ದು ಅತಿರಥರನ್ನು ಪೀಡಿಸಿದನು.

ಅರ್ಥ:
ಬೀಳು: ಬಾಗು; ಹೊಯ್ದು: ಹೊಡೆ; ಬಿರುದು: ಗೌರವ ಸೂಚಕ ಪದ; ಬಿರುದರು: ಪರಾಕ್ರಮಿ; ಬಿರುಗಾಳಿ: ಸುಂಟರಗಾಳಿ; ವರೂಥ: ತೇರು, ರಥ; ಚಯ: ಗುಂಪು; ಕಾಳುಕಿಚ್ಚು: ಬೆಂಕಿ; ಉರು: ತಾಪಗೊಳಿಸು; ಫಣಿ: ಹಾವು; ತುಡುಕು: ಹೋರಾಡು, ಸೆಣಸು; ಕವಿ: ಆವರಿಸು; ಜಲಧಿ: ಸಾಗರ; ನೃಪಾಲ: ರಾಜ; ನಿಕರ: ಗುಂಪು; ಉರುಳು: ಕೆಳಕ್ಕೆ ಬೀಳು, ನೆಲದ ಮೇಲೆ ತಿರುಗು; ಗಿರಿ: ಬೆಟ್ಟ; ಘಲ್ಲಿಸು: ಪೀಡಿಸು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಬೀಳಹೊಯ್ದನು+ ಬಿರುದರನು +ಬಿರು
ಗಾಳಿಯಾಗಿ +ವರೂಥ+ಚಯವನು
ಕಾಳುಕಿಚ್ಚಾಗ್+ಉರುಹಿದನು +ಫಣಿಯಾಗಿ +ತುಡುಕಿದನು
ಮೇಲು+ಕವಿದನು +ಜಲಧಿಯಾಗಿ +ನೃ
ಪಾಲ+ನಿಕರದೊಳ್+ಉರುಳಿದನು +ಗಿರಿ
ಜಾಳವಾಗಿ +ಘಟೋತ್ಕಚನು +ಘಲ್ಲಿಸಿದನ್+ಅತಿರಥರ

ಅಚ್ಚರಿ:
(೧) ಬಿರುದರನು ಬಿರುಗಾಳಿಯಾಗಿ, ಘಟೋತ್ಕಚನು ಘಲ್ಲಿಸಿದ – ಪದಗಳ ಬಳಕೆ
(೨) ಬಿರುಗಾಳಿ, ಕಾಳುಕಿಚ್ಚು, ಫಣಿ, ಜಲಧಿ, ಗಿರಿಜಾಳ – ಮಾಯಾವತಾರಗಳು

ಪದ್ಯ ೮: ಘಟೋತ್ಕಚನು ಸೈನ್ಯವನ್ನು ಹೇಗೆ ನಾಶ ಮಾಡಿದನು?

ಮಾಯದಲಿ ಹುಲಿಯಾಗಿ ಗರ್ಜಿಸಿ
ಹಾಯಿದನು ಕಲಿಸಿಂಹವಾಗಿ ಗ
ದಾಯುಧದಲಪ್ಪಳಿಸಿದನು ಭೈರವನ ರೂಪಾಗಿ
ಬಾಯಲಡಸಿದನಹಿತರನು ದಂ
ಡಾಯುಧದ ನಿಲವಿನಲಿ ಸುಭಟರ
ದಾಯಗೆಡಿಸಿದನೊಂದು ನಿಮಿಷದೊಳೊರಸಿದನು ಬಲವ (ದ್ರೋಣ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ಘಟೋತ್ಕಚನು ಮಾಯೆಯಿಂದ ಹುಲಿಯಾಗಿ ಗರ್ಜಿಸಿ, ಸಿಂಹನಾಗಿ ಸೈನ್ಯದ ಮೇಲೆ ಬಿದ್ದು, ಭೈರವರೂಪದಿಂದ ಗದೆಯಿಂದಪ್ಪಳಿಸಿ, ಬಾಯಲ್ಲಿ ಕೆಲವರನ್ನು ನುಂಗಿ, ದಂಡಾಯುಧದಂತೆ ನಿಂತು ಒಂದು ನಿಮಿಷ ಮಾತ್ರದಲ್ಲಿ ಶತ್ರುಗಳನ್ನು ಕೊಂದನು.

ಅರ್ಥ:
ಮಾಯ: ಇಂದ್ರಜಾಲ; ಹುಲಿ: ವ್ಯಾಘ್ರ; ಗರ್ಜಿಸು: ಆರ್ಭಟಿಸು; ಹಾಯಿ: ಹೊಡೆ; ಕಲಿ: ಶೂರ; ಸಿಂಹ: ಕೇಸರಿ; ಗದೆ: ಮುದ್ಗರ; ಅಪ್ಪಳಿಸು: ತಟ್ಟು, ತಾಗು; ಭೈರವ: ಶಿವನ ರೂಪ; ರೂಪ: ಆಕಾರ; ಅಡಸು: ಬಿಗಿಯಾಗಿ ಒತ್ತು; ಅಹಿತ: ವೈರಿ; ದಂಡ: ಕೋಲು, ದಡಿ; ಆಯುಧ; ಶಸ್ತ್ರ; ನಿಲವು: ನಿಲ್ಲು; ಸುಭಟ: ಸೈನಿಕ; ಕೆಡಿಸು: ಹಾಳುಮಾಡು; ಆಯ: ಉದ್ದೇಶ; ನಿಮಿಷ: ಕಾಲದ ಪ್ರಮಾಣ; ಒರಸು: ನಾಶ; ಬಲ: ಸೈನ್ಯ;

ಪದವಿಂಗಡಣೆ:
ಮಾಯದಲಿ +ಹುಲಿಯಾಗಿ +ಗರ್ಜಿಸಿ
ಹಾಯಿದನು +ಕಲಿ+ಸಿಂಹವಾಗಿ +ಗ
ದಾಯುಧದಲ್+ಅಪ್ಪಳಿಸಿದನು +ಭೈರವನ +ರೂಪಾಗಿ
ಬಾಯಲ್+ಅಡಸಿದನ್+ಅಹಿತರನು +ದಂ
ಡಾಯುಧದ +ನಿಲವಿನಲಿ +ಸುಭಟರದ್
ಆಯಗೆಡಿಸಿದನ್+ಒಂದು+ನಿಮಿಷದೊಳ್+ಒರಸಿದನು +ಬಲವ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ಬಾಯಲಡಸಿದನಹಿತರನು, ಸುಭಟರದಾಯಗೆಡಿಸಿದನೊಂದು

ಪದ್ಯ ೭: ಘಟೋತ್ಕಚನು ಯುದ್ಧದಲ್ಲಿ ಯಾವ ತಂತ್ರವನ್ನು ಉಪಯೋಗಿಸಿದನು?

ಪೂತುರೇ ಕುರುಸೈನಿಕವಸಂ
ಖ್ಯಾತವೆಂದಿಗೆ ಸವೆವುದೋ ಕೈ
ಸೋತವೇ ಹರ ಕೊಲುವೆನೆನುತಮರಾರಿ ಚಿಂತಿಸಿದ
ಈತಗಳಿಗಿದು ಮದ್ದೆನುತ ಮಾ
ಯಾತಿಶಯ ಯುದ್ಧದಲಿ ಬಲಸಂ
ಘಾತವನು ಬೆದರಿಸಿದನದನೇವಣ್ಣಿಸುವೆನೆಂದ (ದ್ರೋಣ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಘಟೋತ್ಕಚನು, ಭಲೇ ಕುರು ಸೈನ್ಯವು ಬಹಳ ವಿಶಾಲವಾಗಿದೆ. ಎಂದಿಗೆ ನಾನು ಇವರನ್ನು ಕೊಲ್ಲಲಾದೀತು, ನನ್ನ ಕೈಸೋತವು ಆದರೂ ಇವರನ್ನು ಕೊಲ್ಲಲು ಒಂದು ಮದ್ದನ್ನು ಬಲ್ಲೆ, ಎಂದು ಮಾಯಾಯುದ್ಧದಿಂದ ಬೆದರಿಕೆ ಹಾಕಿದನು, ಅದನ್ನು ನಾನು ಹೇಗೆ ತಾನೆ ವರ್ಣಿಸಲಿ.

ಅರ್ಥ:
ಪೂತು: ಭಲೇ; ಸೈನಿಕ: ಭಟ; ಅಸಂಖ್ಯಾತ: ಅಗಣಿತ; ಸವೆ: ನಾಶ; ಸೋತು: ಪರಾಭವ; ಹರ: ಶಿವ; ಕೊಲು: ಸಾಯಿಸು; ಅಮರಾರಿ: ದಾನವ, ರಾಕ್ಷಸ; ಅಮರ: ದೇವತೆ; ಅರಿ: ವೈರಿ; ಚಿಂತಿಸು: ಯೋಚಿಸು; ಅಳಿ: ನಾಶ; ಮದ್ದು: ಔಷಧಿ; ಮಾಯ: ಇಂದ್ರಜಾಲ; ಅತಿಶಯ: ಹೆಚ್ಚು; ಯುದ್ಧ: ರಣರಂಗ; ಸಂಘಾತ: ಗುಂಪು, ಸಮೂಹ; ಬೆದರಿಸು: ಹೆದರಿಸು; ವಣ್ಣಿಸು: ವಿವರಿಸು;

ಪದವಿಂಗಡಣೆ:
ಪೂತುರೇ +ಕುರುಸೈನಿಕವ್+ಅಸಂ
ಖ್ಯಾತವ್+ಎಂದಿಗೆ +ಸವೆವುದೋ +ಕೈ
ಸೋತವೇ +ಹರ +ಕೊಲುವೆನ್+ಎನುತ್+ಅಮರಾರಿ +ಚಿಂತಿಸಿದ
ಈತಗ್+ಅಳಿಗಿದು +ಮದ್ದೆನುತ +ಮಾ
ಯಾತಿಶಯ +ಯುದ್ಧದಲಿ +ಬಲ+ಸಂ
ಘಾತವನು +ಬೆದರಿಸಿದನ್+ಅದನೇ+ವಣ್ಣಿಸುವೆನೆಂದ

ಅಚ್ಚರಿ:
(೧) ಘಟೋತ್ಕಚನನ್ನು ಅಮರಾರಿ ಎಂದು ಕರೆದಿರುವುದು

ಪದ್ಯ ೬: ಘಟೋತ್ಕಚನು ಸೈನಿಕರನ್ನು ಹೇಗೆ ಕೊಂದನು?

ಕೆಲರ ನುಂಗಿದನೊದೆದು ಕೊಂದನು
ಕೆಲಬರನು ಹೊರಕೈಯ್ಯ ಹೊಯಿಲಲಿ
ಕೆಲಬರನು ಧನುವಿನಲಿ ಗದೆಯಲಿ ಹೊಯ್ದು ಕೆಲಕೆಲರ
ಕಲಕಿದನು ಬಲಜಲಧಿಯನು ಮೇ
ಲುಲಿದು ಕವಿದುದು ಮತ್ತೆ ಹೆಣನನು
ತುಳಿದು ಮುಗ್ಗಿತು ಮೇಲೆ ಬಿದ್ದುದು ಮುಸುಕಿತರಿಭಟನ (ದ್ರೋಣ ಪರ್ವ, ೧೬ ಸಂಧಿ, ೬ ಪದ್ಯ)

ತಾತ್ಪರ್ಯ:
ಘಟೋತ್ಕಚನು ಮೇಲೆ ಬಿದ್ದ ಕೆಲವರನ್ನು ನುಂಗಿದನು. ಕೆಲವರನು ಒದೆದು ಕೊಂದನು. ಹಿಂಗೈಯ ಹೊಡೆತದಿಂದ ಕೆಲವರನ್ನು ಬಿಲ್ಲುಗದೆಗಳ ಹೊಡೆತದಿಂದ ಕೆಲವರನ್ನು ಕೊಂದನು. ಸೈನ್ಯ ಸಮುದ್ರವನ್ನು ಕಲಕಿದನು. ಆಗ ಕುರುಯೋಧರು ಹೆಣಗಳನ್ನು ತುಳಿದು ಅವನ ಮೇಲೆ ಬಿದ್ದರು.

ಅರ್ಥ:
ಕೆಲ: ಕೆಲವರು; ನುಂಗು: ಕಬಳಿಸು; ಒದೆ: ತುಳಿ, ಮೆಟ್ಟು; ಕೊಂದು: ಸಾಯಿಸು; ಕೈ: ಹಸ್ತ; ಹೊಯಿ: ಹೊಡೆ, ಬಡಿ; ಧನು: ಬಿಲ್ಲು; ಗದೆ: ಮುದ್ಗರ; ಹೊಯ್ದು: ಹೊಡೆ; ಕಲಕು: ಬೆರಸು; ಬಲ: ಸೈನ್ಯ; ಜಲಧಿ: ಸಾಗರ; ಉಲಿ: ಧ್ವನಿ; ಕವಿ: ಆವರಿಸು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ಮುಗ್ಗು: ಬಾಗು, ಮಣಿ; ಬಿದ್ದು: ಬೀಳು; ಮುಸುಕು: ಆವರಿಸು; ಅರಿ: ವೈರಿ; ಭಟ: ಸೈನಿಕ;

ಪದವಿಂಗಡಣೆ:
ಕೆಲರ +ನುಂಗಿದನ್+ಒದೆದು +ಕೊಂದನು
ಕೆಲಬರನು+ ಹೊರ+ಕೈಯ್ಯ +ಹೊಯಿಲಲಿ
ಕೆಲಬರನು +ಧನುವಿನಲಿ +ಗದೆಯಲಿ +ಹೊಯ್ದು +ಕೆಲಕೆಲರ
ಕಲಕಿದನು +ಬಲಜಲಧಿಯನು +ಮೇಲ್
ಉಲಿದು +ಕವಿದುದು +ಮತ್ತೆ +ಹೆಣನನು
ತುಳಿದು +ಮುಗ್ಗಿತು +ಮೇಲೆ +ಬಿದ್ದುದು+ ಮುಸುಕಿತ್+ಅರಿ+ಭಟನ

ಅಚ್ಚರಿ:
(೧) ಕೆಲ ಪದದ ಬಳಕೆ – ಕೆಲರ, ಕೆಲಬರನು, ಕೆಲಕೆಲರ
(೨) ಸೈನ್ಯದ ಅಘಾದತೆಯನ್ನು ತಿಳಿಸಲು – ಬಲಜಲಧಿ ಪದದ ಬಳಕೆ

ಪದ್ಯ ೫: ಘಟೋತ್ಕಚನು ಹೇಗೆ ಯುದ್ಧವನ್ನು ಮಾಡಿದನು?

ಅಗಡು ದಾನವನಿವನು ಕಡ್ಡಿಗೆ
ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು
ಹೊಗೆದುದೈ ಹೆಚ್ಚಾಳುಗಳ ನಗೆ
ಮೊಗವು ಮೋಡಾಮೋಡಿಯಲಿ ಕೈ
ಮಗುಚಿ ಕಳೆದನು ನಿಮಿಷದಲಿ ಹೇರಾಳ ರಾಶಿಗಳ (ದ್ರೋಣ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ಅರವಟ್ಟಿಗೆಯಲ್ಲಿ ಸಾಗರವನ್ನಿಟ್ಟಾಗ ಅದನ್ನು ಕುಡಿಯಲು ಬಂಡ ವಡಬನಂತೆ, ಶತ್ರುಗಳ ಮುತ್ತಿಗೆಯನ್ನು ಘಟೋತ್ಕಚನು ಲೆಕ್ಕಿಸಲೇ ಇಲ್ಲ. ಮುತ್ತಿದ ವೀರರ ಮುಖಗಳು ಕಪ್ಪಾದವು. ಸೊಗಸಾದ ಕೈಚಳಕದಿಂದ ನಿಮಿಷ ಮಾತ್ರದಲ್ಲಿ ಅನೇಕ ಯೋಧರ ಗುಂಪುಗಳನ್ನು ಎತ್ತಿಹಾಕಿ ಸಂಹರಿಸಿದನು.

ಅರ್ಥ:
ಅಗಡು: ತುಂಟತನ; ದಾನವ: ರಾಕ್ಷಸ; ಕಡ್ಡಿ: ಸಣ್ಣ ಸಿಗುರು, ಚಿಕ್ಕದೇಟು; ಬಗೆ: ಯೋಚಿಸು; ಸಾಗರ: ಸಮುದ್ರ; ಅರವಟ್ಟಿಗೆ: ದಾರಿಹೋಕರಿಗೆ ನೀರು ಪಾನಕ, ಆಹಾರ, ಇತ್ಯಾದಿ ಕೊಡುವ ಸ್ಥಳ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ನೀರು: ಜಲ; ಕುಡಿ: ಪಾನ ಮಾದು; ಹೊಗೆ: ಸುಡು, ದಹಿಸು; ಹೆಚ್ಚು: ಅಧಿಕ; ಆಳು: ಸೈನಿಕ; ನಗೆ: ಹರ್ಷ; ಮೊಗ: ಮುಖ; ಮೋಡ: ಮುಗಿಲು, ಮೇಘ; ಮೋಡಿ: ರೀತಿ, ಶೈಲಿ; ಮಗುಚು: ಹಿಂದಿರುಗಿಸು, ಮರಳಿಸು; ನಿಮಿಷ: ಕ್ಷನ; ಹೇರಾಳ: ಹೆಚ್ಚು; ರಾಶಿ: ಗುಂಪು;

ಪದವಿಂಗಡಣೆ:
ಅಗಡು +ದಾನವನ್+ಇವನು +ಕಡ್ಡಿಗೆ
ಬಗೆವನೇ +ಸಾಗರವನ್+ಅರವ
ಟ್ಟಿಗೆಯನಿಟ್ಟರೆ +ವಡಬನಲ್ಲಾ +ನೀರ +ಕುಡಿವವನು
ಹೊಗೆದುದೈ +ಹೆಚ್ಚಾಳುಗಳ +ನಗೆ
ಮೊಗವು +ಮೋಡಾಮೋಡಿಯಲಿ +ಕೈ
ಮಗುಚಿ +ಕಳೆದನು +ನಿಮಿಷದಲಿ +ಹೇರಾಳ +ರಾಶಿಗಳ

ಅಚ್ಚರಿ:
(೧) ರೂಪಕದ ಪ್ರಯೋಗ – ಅಗಡು ದಾನವನಿವನು ಕಡ್ಡಿಗೆ ಬಗೆವನೇ ಸಾಗರವನರವ
ಟ್ಟಿಗೆಯನಿಟ್ಟರೆ ವಡಬನಲ್ಲಾ ನೀರ ಕುಡಿವವನು