ಪದ್ಯ ೩೦: ರಾತ್ರಿಯ ಯುದ್ಧವು ಯಾವ ರೀತಿಯಲ್ಲಿತ್ತು?

ಹೆಣಗಿ ಮಿಗೆ ತಲೆಯೊತ್ತಿ ಹೊಯ್ದರು
ಹಣಿದದಲಿ ತಮ್ಮೊಳಗೊಳಗೆ ಸಂ
ದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ
ರಣಮಹೀಸಂತಮಸಶಾಂತೇ
ಕ್ಷಣರು ದಿಗುಭ್ರಮೆಯಲಿ ಸ್ವಕೀಯ
ಕ್ಷಣನವನು ರಚಿಸಿದರು ರೌರವವಾಯ್ತು ರಾತ್ರಿಯಲಿ (ದ್ರೋಣ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ತಲೆಯೊತ್ತಿ ಹೆಣಗಿ ಹೊಯ್ದರು, ಒಟ್ಟಾಗಿ ತಮ್ಮ ತಮ್ಮಲ್ಲೇ ಬಾಣಗಳನ್ನು ಬಿಟ್ಟರು. ರಣಭೂಮಿಯ ಕತ್ತಲಲ್ಲಿ ಸರಿಯಾಗಿ ಕಾಣದಿದ್ದುದರಿಂದ ತಮ್ಮವರನ್ನೇ ಹೊಯ್ದರು. ರಾತ್ರಿಯ ಯುದ್ಧವು ರೌರವ ನರಕ ಸಮಾನವಾಯಿತು.

ಅರ್ಥ:
ಹೆಣಗು: ಹೋರಾಡು; ಮಿಗೆ: ಅಧಿಕ; ತಲೆ: ಶಿರ; ಹೊಯ್ದು: ಹೊಡೆ; ಹಣೆ: ಬಾಗು, ಮಣಿ; ಸಂದಣಿ: ಗುಂಪು; ಅಂಬು: ಬಾಣ; ಸಿರಿ: ಐಶ್ವರ್ಯ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ರಣ: ಯುದ್ಧರಂಗ; ಮಹೀ: ಭೂಮಿ; ದಿಗ್ಭ್ರಮೆ: ಆಶ್ಚರ್ಯ; ಸ್ವಕೀಯ: ತಮ್ಮ ಪಕ್ಷ; ಶಾಂತೀಕ್ಷಣ: ಸಮಾಧಾನದಿಂದ ನೋಡುವವ; ರಚಿಸು: ನಿರ್ಮಿಸು; ರೌರವ: ಭಯಾನಕ; ರಾತ್ರಿ: ಇರುಳು;

ಪದವಿಂಗಡಣೆ:
ಹೆಣಗಿ +ಮಿಗೆ +ತಲೆಯೊತ್ತಿ +ಹೊಯ್ದರು
ಹಣಿದದಲಿ +ತಮ್ಮ್+ಒಳಗೊಳಗೆ +ಸಂ
ದಣಿಗಳಲಿ +ಸೈಗರೆದರ್+ಅಂಬಿನ +ಸಿರಿಯನ್+ಉರವಣಿಸಿ
ರಣಮಹೀಸಂತಮಸ+ಶಾಂತೇ
ಕ್ಷಣರು +ದಿಗುಭ್ರಮೆಯಲಿ+ ಸ್ವಕೀಯ
ಕ್ಷಣನವನು +ರಚಿಸಿದರು +ರೌರವವಾಯ್ತು +ರಾತ್ರಿಯಲಿ

ಅಚ್ಚರಿ:
(೧) ರ ಕಾರದ ತ್ರಿವಳಿ ಪದ – ರಚಿಸಿದರು ರೌರವವಾಯ್ತು ರಾತ್ರಿಯಲಿ
(೨) ಹಣಿ, ಸಂದಣಿ; ಶಾಂತೇಕ್ಷಣ, ಸ್ವಕೀಯಕ್ಷಣ
(೩) ಯುದ್ಧಭೂಮಿ ಎಂದು ಕರೆಯುವ ಪರಿ – ರಣಮಹೀ
(೪) ಸ ಕಾರದ ತ್ರಿವಳಿ ಪದ – ಸಂದಣಿಗಳಲಿ ಸೈಗರೆದರಂಬಿನ ಸಿರಿಯನುರವಣಿಸಿ

ಪದ್ಯ ೨೯: ರಣರಂಗದಲ್ಲಿ ಯಾವ ಮಳೆಗಾಲ ಕಂಡಿತು?

ದಳದ ಬೊಬ್ಬೆಯ ಸಿಡಿಲ ಬಲುಗ
ತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ
ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ
ಬಲುಸರಿಯ ನಾರಾಚ ಜಾಳದ
ಮಳೆಯ ನೆತ್ತರ ಹೊನಲುಗಳ ರೌ
ಕುಳದ ಮಳೆಗಾಲದಲಿ ಹೆಚ್ಚಿತು ಭಟರ ಶೌರ್ಯಶಿಖಿ (ದ್ರೋಣ ಪರ್ವ, ೧೫ ಸಂಧಿ, ೨೯ ಪದ್ಯ)

ತಾತ್ಪರ್ಯ:
ಸೇನೆಯ ಬೊಬ್ಬೆಯ ಸಿಡಿಲು, ದಟ್ಟ ಕತ್ತಲೆಯ ಮೇಘ, ರಾಜರ ಕಿರೀಟರತ್ನಗಳ ಮಿಂಚುಮಳೆ, ಮೇಲೆ ಮೇಲೆ ಬರುವ ಬಾಣಗಳ ಸುರಿಮಳೆ, ಹರಿಯುವ ರಕ್ತದ ಪ್ರವಾಹಗಳ ಮಳೆಗಾಲದಲ್ಲಿ ಯೋಧರ ಶೌರಾಗ್ನಿ ಹೆಚ್ಚಿತು.

ಅರ್ಥ:
ದಳ: ಗುಂಪು; ಬೊಬ್ಬೆ: ಗರ್ಜನೆ, ಆರ್ಭಟ; ಸಿಡಿಲು: ಅಶನಿ; ಬಲುಗತ್ತಲೆ: ಬಹಳ ಕತ್ತಲೆ; ಝಾಡಿ: ಕಾಂತಿ; ಮುಗಿಲು: ಮೋಡ, ಮೇಘ; ಮಿಗೆ: ಹೆಚ್ಚು; ಹೊಳೆ: ಪ್ರಕಾಶ; ಮಹಿಪ: ರಾಜ; ಮಕುಟ: ಕಿರೀಟ; ರತ್ನ: ಬೆಲೆಬಾಳುವ ಮುತ್ತು; ಬಳ್ಳಿ: ಲತೆ; ಮಿಂಚು: ಹೊಳಪು, ಕಾಂತಿ; ನಾರಾಚ: ಬಾಣ, ಸರಳು; ಮಳೆ: ವರ್ಷ; ನೆತ್ತರು: ರಕ್ತ; ಹೊನಲು: ಪ್ರವಾಹ, ನೀರೋಟ; ರೌಕುಳ: ಅವ್ಯವಸ್ಥೆ; ಮಳೆಗಾಲ: ವರ್ಷಋತು; ಹೆಚ್ಚು: ಅಧಿಕ; ಭಟ: ಸೈನ್ಯ; ಶೌರ್ಯ: ಪರಾಕ್ರಮ; ಶಿಖಿ: ಬೆಂಕಿ;

ಪದವಿಂಗಡಣೆ:
ದಳದ +ಬೊಬ್ಬೆಯ +ಸಿಡಿಲ +ಬಲುಗ
ತ್ತಲೆಯ +ಝಾಡಿಯ +ಮುಗಿಲ +ಮಿಗೆ +ಹೊಳೆ
ಹೊಳೆವ +ಮಹಿಪರ +ಮಕುಟರತ್ನದ +ಬಳ್ಳಿ+ಮಿಂಚುಗಳ
ಬಲುಸರಿಯ+ ನಾರಾಚ +ಜಾಳದ
ಮಳೆಯ +ನೆತ್ತರ +ಹೊನಲುಗಳ+ ರೌ
ಕುಳದ+ ಮಳೆಗಾಲದಲಿ +ಹೆಚ್ಚಿತು +ಭಟರ +ಶೌರ್ಯ+ಶಿಖಿ

ಅಚ್ಚರಿ:
(೧) ಸಿಡಿಲು, ಮೋಡ, ಮಿಂಚನ್ನು ಹೋಲಿಸುವ ಪರಿ – ದಳದ ಬೊಬ್ಬೆಯ ಸಿಡಿಲ ಬಲುಗತ್ತಲೆಯ ಝಾಡಿಯ ಮುಗಿಲ ಮಿಗೆ ಹೊಳೆ ಹೊಳೆವ ಮಹಿಪರ ಮಕುಟರತ್ನದ ಬಳ್ಳಿಮಿಂಚುಗಳ

ಪದ್ಯ ೨೮: ಕತ್ತಲನ್ನು ಹೇಗೆ ವರ್ಣಿಸಲಾಯಿತು?

ಖಳರ ಹೃದಯದ ಗರುಡಿ ಘೂಕಾ
ವಳಿಯ ನಯನಾಂಜನ ಧರಿತ್ರಿಯ
ನಳಿನಕೆರಗಿದ ತುಂಬಿ ಸುಭಟಸ್ವಾಂತ ಶಶಿ ರಾಹು
ಪ್ರಳಯ ತಿಮಿರದ ಬೀಜ ನೀಲಾ
ಚಳದ ಸಾಯುಜ್ಯವೊ ನಭೋಮಂ
ಡಲದೊಳದನೇವೊಗಳುವೆನು ಮಸಗಿತು ತಮಸ್ತೋಮ (ದ್ರೋಣ ಪರ್ವ, ೧೫ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀಚರ ಹೃದಯದ ಗರುಡಿಮನೆಯಂತಿತ್ತು, ಗೂಬೆಗಳ ಕಣ್ಣಿಗೆ ಅಂಜನವಾಯಿತು, ಭೂಕಮಲಕ್ಕೆರಗಿದ ದುಂಬಿಯಾಯಿತು, ಸುಭಟರ ಅಂತರಂಗ ಚಂದ್ರನಿಗೆ ರಾಹುವಾಯಿತು, ಪ್ರಳಯದ ಕತ್ತಲೆಯ ಬೀಜವೋ, ನೀಲಾಚಲದ ಸಾಯುಜ್ಯವೋ, ಮುಸುಕಿದ ಕತ್ತಲನ್ನು ಏನೆಂದು ಹೊಗಳಲಿ.

ಅರ್ಥ:
ಖಳ: ದುಷ್ಟ; ಹೃದಯ: ಎದೆ; ಗರುಡಿ: ವ್ಯಾಯಾಮಶಾಲೆ; ಘೂಕ: ಗೂಗೆ, ಗೂಬೆ; ಆವಳಿ: ಗುಂಪು; ನಯನ: ಕಣ್ಣು; ಅಂಜನ: ಕಾಡಿಗೆ, ಕಪ್ಪು; ಧರಿತ್ರಿ: ಭೂಮಿ; ನಳಿನ: ಕಮಲ; ಎರಗು: ಬಾಗು; ತುಂಬಿ: ದುಂಬಿ, ಭ್ರಮರ; ಸುಭಟ: ಪರಾಕ್ರಮಿ; ಸ್ವಾಂತ: ಅಂತಃಕರಣ; ಶಶಿ: ಚಂದ್ರ; ರಾಹು: ಅಗ್ನಿ, ಬೆಂಕಿ, ನವಗ್ರಹಗಳಲ್ಲಿ ಒಂದು; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ; ತಿಮಿರ: ಕತ್ತಲೆ; ಬೀಜ: ಉತ್ಪತ್ತಿ ಸ್ಥಾನ, ಮೂಲ; ಅಚಲ: ಬೆಟ್ಟ; ಸಾಯುಜ್ಯ: ಅನ್ಯೋನ್ಯ; ನಭ: ಆಗಸ; ನಭೋಮಂಡಲ: ಆಗಸ; ಹೊಗಳು: ಪ್ರಶಂಶಿಸು; ಮಸಗು: ಹರಡು; ಕೆರಳು; ತಿಕ್ಕು; ತಮ: ಅಂಧಕಾರ; ಸ್ತೋಮ: ಗುಂಪು;

ಪದವಿಂಗಡಣೆ:
ಖಳರ +ಹೃದಯದ +ಗರುಡಿ +ಘೂಕಾ
ವಳಿಯ +ನಯನಾಂಜನ +ಧರಿತ್ರಿಯ
ನಳಿನಕ್+ಎರಗಿದ +ತುಂಬಿ +ಸುಭಟಸ್ವಾಂತ+ ಶಶಿ+ ರಾಹು
ಪ್ರಳಯ +ತಿಮಿರದ +ಬೀಜ +ನೀಲಾ
ಚಳದ +ಸಾಯುಜ್ಯವೊ +ನಭೋ+ಮಂ
ಡಲದೊಳ್+ಅದನೇವೊಗಳುವೆನು +ಮಸಗಿತು +ತಮ+ಸ್ತೋಮ

ಅಚ್ಚರಿ:
(೧) ರೂಪಕಗಳ ಪ್ರಯೋಗ – ಖಳರ ಹೃದಯದ ಗರುಡಿ ಘೂಕಾವಳಿಯ ನಯನಾಂಜನ

ಪದ್ಯ ೨೭: ರಾತ್ರಿಯ ಯುದ್ಧ ಹೇಗೆ ಕಂಡಿತು?

ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನ ಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ (ದ್ರೋಣ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಜಡಿದ ಖಡ್ಗಗಳ ಕಿಡಿಗಳು ಕತ್ತಲಿನಲ್ಲಿ ರಂಧ್ರವನ್ನು ಕೊರೆದವು. ರಾಜರ ಕಿರೀಟ ಪ್ರಭೆಗಳಿಂದ ಕತ್ತಲು ಜರ್ಝರಿತವಾಯಿತು. ಬಾಣಗಳ ತುದಿಯ ಕಿಡಿಗಳಿಂದ ಹೊರಟ ಬೆಳಕನ್ನು ಆ ನಿಮಿಷಕ್ಕೆ ಕತ್ತಲು ಆವರಿಸಿತು. ಕತ್ತಲಿನ ದಾಳಿ ದಿಕ್ಕು ದಿಕ್ಕಿನಲ್ಲೂ ಹಬ್ಬಿತು.

ಅರ್ಥ:
ಜಡಿ: ಗದರಿಸು, ಬೆದರಿಸು; ಖಡುಗ: ಕತ್ತಿ; ಕಿಡಿ: ಬೆಂಕಿ; ಬೇಗಡೆ: ಮಿಂಚುವ ಬಣ್ಣ; ಮಕುಟ: ಕಿರೀಟ; ಬದ್ಧ: ಕಟ್ಟಿದ, ಬಿಗಿದ; ಮುಡಿ: ಶಿರ; ರತ್ನ: ಬೆಲೆಬಾಳುವ ಹರಳು; ಪ್ರಭೆ: ಕಾಂತಿ; ಜರ್ಝರಿತ: ಭಗ್ನ; ತನು: ದೇಹ; ಗಡಣ: ಕೂಡಿಸುವಿಕೆ; ಅಂಬು: ಬಾಣ; ಮಸೆ: ಹರಿತವಾದುದು; ಬೆಳಗು: ದಿನ; ಅಡಸು: ಆಕ್ರಮಿಸು, ಮುತ್ತು; ಕ್ಷಣ: ಹೊತ್ತು; ನಿಮಿಷ: ಕಾಲ; ಹೊಡಕರಿಸು: ಕಾಣಿಸು; ಹಬ್ಬು: ಹರಡು; ಮಬ್ಬು: ನಸುಗತ್ತಲೆ, ಮಸುಕು; ದಾಳಿ: ಲಗ್ಗೆ, ಆಕ್ರಮಣ; ದೆಸೆ: ದಿಕ್ಕು;

ಪದವಿಂಗಡಣೆ:
ಜಡಿವ +ಖಡುಗದ +ಕಿಡಿಗಳಲಿ +ಬೇ
ಗಡೆಯನಾಂತುದು +ಮಕುಟ+ಬದ್ಧರ
ಮುಡಿಯ +ರತ್ನ +ಪ್ರಭೆಗಳಲಿ +ಜರ್ಝರಿತ +ತನುವಾಯ್ತು
ಗಡಣದ್+ಅಂಬಿನ +ಮಸೆಯ +ಬೆಳಗಿನೊಳ್
ಅಡಸಿದ್+ಆ+ ಕ್ಷಣ +ಮತ್ತೆ +ನಿಮಿಷಕೆ
ಹೊಡಕರಿಸಿ +ಹಬ್ಬಿದುದು +ಮಬ್ಬಿನ +ದಾಳಿ +ದೆಸೆದೆಸೆಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಜಡಿವ ಖಡುಗದ ಕಿಡಿಗಳಲಿ ಬೇಗಡೆಯನಾಂತುದು
(೨) ಕಿಡಿ, ಪ್ರಭೆ, ಬೆಳಗು – ಸಾಮ್ಯಾರ್ಥ ಪದ
(೩) ಕತ್ತಲನ್ನು ವಿವರಿಸುವ ಪರಿ – ನಿಮಿಷಕೆ ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ

ಪದ್ಯ ೨೬: ಕತ್ತಲಾಗುವುದನ್ನು ಹೇಗೆ ವರ್ಣಿಸಬಹುದು?

ಇಳಿದುದೀ ಕಣನೊಳಗೆ ದಿಗುಮಂ
ಡಲದ ಸಂಧ್ಯಾರಾಗವೆನೆ ಪರಿ
ದಳಿತ ಚತುರಂಗದಲಿ ಮಸಗಿದುದರುಣಜಲರಾಶಿ
ಕಲಿಗಳುಬ್ಬಿನ ರೋಷ ತಾಮಸ
ತುಳುಕಿತೆನೆ ದಿಗುವಳಯದಲಿ ಕುಡಿ
ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ (ದ್ರೋಣ ಪರ್ವ, ೧೫ ಸಂಧಿ, ೨೬ ಪದ್ಯ)

ತಾತ್ಪರ್ಯ:
ಸಂಜೆಯ ಕೆಂಪು ಬಣ್ನವು ಯುದ್ಧರಂಗದಲ್ಲಿಳಿಯಿತೋ ಎಂಬಂತೆ ಸೈನ್ಯಗಳು ತುಳಿದು ಸಿಡಿಯುತ್ತಿದ್ದ ರಕ್ತವು ಕಾಣಿಸಿತು. ವೀರರ ತಾಮಸ ರೋಷ ತುಂಬಿ ತುಳುಕುತ್ತಿದೆಯೋ ಎಂಬಮ್ತೆ ಕತ್ತಲ ಬಳ್ಳಿ ಸಂಜೆ ಬೆಳಗನ್ನು ನುಂಗಿ ಮೇಲೇರಿತು.

ಅರ್ಥ:
ಕಣ: ರಣರಂಗ; ದಿಗು: ದಿಕ್ಕು; ಮಂಡಲ: ನಾಡಿನ ಒಂದು ಭಾಗ; ಸಂಧ್ಯಾರಾಗ: ಸಂಜೆಯ ಕೆಂಪು ಬಣ್ಣ; ಪರಿದಳಿತ: ಚಿಗುರಿದ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಮಸಗು: ಹರಡು; ಕೆರಳು; ತಿಕ್ಕು; ಅರುಣ: ಕೆಂಪು; ಜಲರಾಶಿ: ಸಮುದ್ರ; ಕಲಿ: ಶೂರ; ಉಬ್ಬು: ಹೆಚ್ಚು; ರೋಷ: ಕೋಪ; ತಾಮಸ: ಕತ್ತಲೆ, ಅಂಧಕಾರ; ತುಳುಕು: ತುಂಬಿ ಹೊರಸೂಸು, ಹೊರ ಚೆಲ್ಲು; ದಿಗು: ದಿಕ್ಕು; ಕುಡಿ: ತುದಿ, ಕೊನೆ; ತಿಮಿರ: ರಾತ್ರಿ; ಲತೆ: ಬಳ್ಳಿ; ಜಗ: ಜಗತ್ತು; ಅಡರು: ಮೇಲಕ್ಕೆ ಹತ್ತು ;

ಪದವಿಂಗಡಣೆ:
ಇಳಿದುದೀ+ ಕಣನೊಳಗೆ +ದಿಗು+ಮಂ
ಡಲದ +ಸಂಧ್ಯಾರಾಗವ್+ಎನೆ +ಪರಿ
ದಳಿತ +ಚತುರಂಗದಲಿ +ಮಸಗಿದುದ್+ಅರುಣ+ಜಲರಾಶಿ
ಕಲಿಗಳ್+ಉಬ್ಬಿನ +ರೋಷ +ತಾಮಸ
ತುಳುಕಿತೆನೆ +ದಿಗುವಳಯದಲಿ +ಕುಡಿ
ವೆಳಗ+ ಕುಡಿ +ಕುಡಿದ್+ಅಡರುತಿರ್ದುದು +ತಿಮಿರ+ಲತೆ +ಜಗವ

ಅಚ್ಚರಿ:
(೧) ರಾತ್ರಿ ಹೆಚ್ಚಾಯಿತು ಎಂದು ಹೇಳಲು – ದಿಗುವಳಯದಲಿ ಕುಡಿ ವೆಳಗ ಕುಡಿ ಕುಡಿದಡರುತಿರ್ದುದು ತಿಮಿರಲತೆ ಜಗವ
(೨) ಉಪಮಾನದ ಪ್ರಯೋಗ – ಇಳಿದುದೀ ಕಣನೊಳಗೆ ದಿಗುಮಂಡಲದ ಸಂಧ್ಯಾರಾಗವೆನೆ