ಪದ್ಯ ೨೨: ರಣವಾದ್ಯಗಳ ಶಬ್ದವು ಹೇಗಿತ್ತು?

ಲಟಕಟಿಸಿತಾಹವಕೆ ರಾಯನ
ಕಟಕ ಸುಮ್ಮಾನದಲಿ ಪೊಳಗುವ
ಪಟಹ ಡಮರು ಮೃದಂಗ ಘನಗಂಭೀರ ಭೇರಿಗಳ
ಚಟುಳ ಕಹಳೆಯ ಗಜರು ಮಿಗಲು
ತ್ಕಟಿಸಿತಂಬುಜ ಭವನ ನಿರ್ಮಿತ
ಘಟ ಬಿರಿಯೆ ಬಿಗುಹಾಯ್ತು ದ್ರೋಣನ ಸಮರಸನ್ನಾಹ (ದ್ರೋಣ ಪರ್ವ, ೧೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೈನ್ಯವು ಯುದ್ಧಕ್ಕೆ ಅತಿ ಉತ್ಸಾಹದಿಂದ ಹೊರಟಿತು. ತಮ್ಮಟೆ, ಡಮರುಗ, ಮೃದಮ್ಗ, ಭೇರಿ, ಕಹಳೆಗಳು ಮೊಳಗುತ್ತಿದ್ದವು. ರಣವಾದ್ಯಗಳ ಶಬ್ದವು ಎಲ್ಲೆಡೆ ವ್ಯಾಪಿಸಲು, ಬ್ರಹ್ಮಾಂಡವು ಬಿರಿಯಿತು. ದ್ರೋಣನ ಸಮರಸನ್ನಾಹ ಪ್ರಬಲವಾಗಿತ್ತು.

ಅರ್ಥ:
ಲಟಕಟ: ಉದ್ರೇಕಗೊಳ್ಳು; ಆಹವ: ಯುದ್ಧ; ರಾಯ: ರಾಜ; ಕಟಕ: ಸೈನ್ಯ; ಸುಮ್ಮಾನ: ಸಂತೋಷ, ಹಿಗ್ಗು; ಪಟಹ: ನಗಾರಿ; ಡಮರು: ಒಂದು ಬಗೆಯ ಚರ್ಮವಾದ್ಯ; ಮೃದಂಗ: ಒಂದು ಬಗೆಯ ಚರ್ಮವಾದ್ಯ/ತಾಳವಾದ್ಯ; ಘನ: ಶ್ರೇಷ್ಠ; ಗಂಭೀರ: ಆಳವಾದುದು, ಗಾಂಭೀರ್ಯ; ಭೇರಿ: ಚರ್ಮವಾದ್ಯ; ಚಟುಳ: ಲವಲವಿಕೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗಜರು: ಆರ್ಭಟಿಸು; ಮಿಗಲು: ಹೆಚ್ಚು; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಅಂಬುಜ: ತಾವರೆ; ಭವನ: ಮನೆ; ನಿರ್ಮಿತ: ಕಟ್ಟಿದ; ಘಟ: ಕೊಡ, ಗಡಿಗೆ; ಬಿರಿ: ತುಂಬು; ಬಿಗುಹು: ಗಟ್ಟಿ; ಸಮರ: ಯುದ್ಧ; ಸನ್ನಾಹ: ಗುಂಪು;

ಪದವಿಂಗಡಣೆ:
ಲಟಕಟಿಸಿತ್+ಆಹವಕೆ +ರಾಯನ
ಕಟಕ +ಸುಮ್ಮಾನದಲಿ +ಪೊಳಗುವ
ಪಟಹ +ಡಮರು +ಮೃದಂಗ +ಘನಗಂಭೀರ +ಭೇರಿಗಳ
ಚಟುಳ +ಕಹಳೆಯ +ಗಜರು +ಮಿಗಲ್
ಉತ್ಕಟಿಸಿತ್+ಅಂಬುಜ +ಭವನ +ನಿರ್ಮಿತ
ಘಟ +ಬಿರಿಯೆ +ಬಿಗುಹಾಯ್ತು +ದ್ರೋಣನ +ಸಮರ+ಸನ್ನಾಹ

ಅಚ್ಚರಿ:
(೧) ರಣವಾದ್ಯಗಳ ಪರಿಚಯ – ಪಟಹ, ಡಮರು, ಮೃದಂಗ, ಭೇರಿ, ಕಹಳೆ
(೨) ಬ್ರಹ್ಮಾಂಡ ಎಂದು ಹೇಳುವ ಪರಿ – ಮಿಗಲುತ್ಕಟಿಸಿತಂಬುಜ ಭವನ ನಿರ್ಮಿತ ಘಟ ಬಿರಿಯೆ ಬಿಗುಹಾಯ್ತು

ನಿಮ್ಮ ಟಿಪ್ಪಣಿ ಬರೆಯಿರಿ