ಪದ್ಯ ೧: ಧರ್ಮಜನು ಏನೆಂದು ಚಿಂತಿಸಿದನು?

ದೃಗುಯುಗಳ ನೀರೇರಿದವು ಸೆರೆ
ಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ ತನ್ನೊಡನೆ ಫಲುಗುಣನೇಕೆ ಜನಿಸಿದನೊ
ಹಗೆಯ ಹರಿವಿಂಗೊಪ್ಪುಗೊಟ್ಟೆನು
ಮಗನಳಲು ಮಿಗೆ ಹೂಣೆ ಹೊಕ್ಕನು
ಮಗುಳಲರಿಯನು ತಮ್ಮನೆನುತವನೀಶ ಚಿಂತಿಸಿದ (ದ್ರೋಣ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಕೃಷ್ಣನ ಪಾಂಚಜನ್ಯ ಧ್ವನಿಯನ್ನು ಕೇಳಿ ಯುಧಿಷ್ಠಿರನ ಕಣ್ಣುಗಳಲ್ಲಿ ನೀರು ತುಂಇದವು. ಗಂಟಲು ಗದ್ಗದವಾಯಿತು. ನಾನು ಅನಾಥ, ಅರ್ಜುನನು ನನ್ನೊಡನೆ ಏಕೆ ಹುಟ್ತಿದನೋ ಏನೋ, ಮಗನ ಮರಣದಿಂದ ಅತಿಶಯ ದುಃಖಕ್ಕೆ ಪಕ್ಕಾಗಿ ಶತ್ರುಸೈನ್ಯದೊಳಕ್ಕೆ ಅವನು ಹೊಕ್ಕ, ನಾನೋ ಅವನನ್ನು ಕಳಿಸಿಕೊಟ್ಟೆ, ಅವನು ಹಿಂದಿರುಗಲಾರ ಎಂದು ಧರ್ಮಜನ ಚಿಂತಿಸಿದನು.

ಅರ್ಥ:
ದೃಗು: ಕಣ್ಣು; ಯುಗಳ: ಎರಡು; ನೀರು: ಜಲ; ಏರು: ಹೆಚಾಗು; ಸೆರೆ: ನರ, ಬಂಧನ; ಬಿಗಿ: ಬಂಧಿಸು; ಹಲುಬು: ದುಃಖಪಡು; ಅಕಟ: ಅಯ್ಯೋ; ಕಡು: ಬಹಳ; ದೇಸಿಗ: ದಿಕ್ಕಿಲ್ಲದವ, ಅನಾಥ; ಜನಿಸು: ಹುಟ್ಟು; ಹಗೆ: ವೈರಿ; ಹರಿ: ಚಲಿಸು, ಸೀಳು; ಒಪ್ಪು: ಒಪ್ಪಿಗೆ, ಸಮ್ಮತಿ; ಮಗ: ಸುತ; ಅಳಲು: ದುಃಖ; ಮಿಗೆ: ಹೆಚ್ಚು; ಹೂಣು: ಶಪಥಮಾಡು; ಹೊಕ್ಕು: ಸೇರು; ಮಗುಳ: ಹಿಂದಿರುಗು; ಅರಿ: ತಿಳಿ; ತಮ್ಮ; ಸಹೋದರ; ಅವನೀಶ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ದೃಗುಯುಗಳ +ನೀರೇರಿದವು+ ಸೆರೆ
ಬಿಗಿದು +ಹಲುಬಿದನ್+ಅಕಟ +ಕಡು +ದೇ
ಸಿಗನು +ತಾ +ತನ್ನೊಡನೆ +ಫಲುಗುಣನೇಕೆ+ ಜನಿಸಿದನೊ
ಹಗೆಯ+ ಹರಿವಿಂಗ್+ಒಪ್ಪು+ಕೊಟ್ಟೆನು
ಮಗನ್+ಅಳಲು +ಮಿಗೆ +ಹೂಣೆ +ಹೊಕ್ಕನು
ಮಗುಳಲ್+ಅರಿಯನು+ ತಮ್ಮನ್+ಎನುತ್+ಅವನೀಶ +ಚಿಂತಿಸಿದ

ಅಚ್ಚರಿ:
(೧) ಧರ್ಮಜನು ದುಃಖ ಪಟ್ಟ ಪರಿ – ದೃಗುಯುಗಳ ನೀರೇರಿದವು ಸೆರೆಬಿಗಿದು ಹಲುಬಿದನಕಟ ಕಡು ದೇ
ಸಿಗನು ತಾ

ನಿಮ್ಮ ಟಿಪ್ಪಣಿ ಬರೆಯಿರಿ