ಪದ್ಯ ೧೦: ಕಾಲನು ಯಾರನ್ನು ಯಥೇಚ್ಛವಾಗಿ ಸ್ವೀಕರಿಸಿದನು?

ಉಡಿದು ಕುಪ್ಪಲಿಸಿದವು ರಥ ಕಡಿ
ವಡೆದುದಗ್ಗದ ಸಾರಥಿಗಳೆಡೆ
ಗೆಡೆದುದತಿರಥ ಸಮರಥಾರ್ಧಮಹಾರಥಾದಿಗಳು
ಹೊಡೆಗೆಡೆದ ದಂತಿಗಳು ರಕ್ತದ
ಕಡಲೊಳೀಸಾಡಿದವು ತೇಜಿಯ
ಕಡಿಕು ಹರಿದವು ಹೊರೆದನಂತಕನುರುಪರಿಗ್ರಹವ (ದ್ರೋಣ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ರಥಗಳು ಮುರಿದು ಕೆಳಕ್ಕೆ ಬಿದ್ದವು. ಸಾರಥಿಗಳು ಅಲ್ಲೇ ಬಿದ್ದರು, ಸಮರಥರು ಮಹಾರಥರು ಅತಿರಥರು ಸತ್ತು ಬಿದ್ದರು. ಮುರಿದ ಆನೆಗಳು ರಕ್ತದಲ್ಲಿ ತೇಲಿದವು. ಕುದುರೆಗಳ ತುಂಡುಗಳು ಹರಿದು ಹೋದವು. ಕಾಲನು ಯಥೇಚ್ಛವಾಗಿ ಪ್ರಾಣಿಗಳನ್ನು ಸ್ವೀಕರಿಸಿದನು.

ಅರ್ಥ:
ಉಡಿ: ಮುರಿ, ತುಂಡು ಮಾಡು; ಕುಪ್ಪಳಿಸು: ಜಿಗಿದು ಬೀಳು; ರಥ: ಬಂಡಿ; ಕಡಿ: ಸೀಳು; ಅಗ್ಗ: ಶ್ರೇಷ್ಠ; ಸಾರಥಿ: ಸೂತ; ಅತಿರಥ/ಮಹಾರಥ: ಪರಾಕ್ರಮಿ; ಸಮರ: ಯುದ್ಧ; ದಂತಿ: ಆನೆ; ರಕ್ತ: ನೆತ್ತರು; ಕಡಲು: ಸಾಗರ; ಈಸು: ಇಷ್ಟು; ತೇಜಿ: ಕುದುರೆ; ಕಡಿ:ತುಂಡು; ಹರಿ: ಸೀಳು; ಹೊರೆ: ಕಾಪಾಡು, ರಕ್ಷಿಸು; ಅಂತಕ: ಯಮ; ಉರು: ಹೆಚ್ಚು; ಪರಿಗ್ರಹ: ಸ್ವೀಕರಿಸು;

ಪದವಿಂಗಡಣೆ:
ಉಡಿದು +ಕುಪ್ಪಳಿಸಿದವು +ರಥ +ಕಡಿ
ವಡೆದುದ್+ಅಗ್ಗದ +ಸಾರಥಿಗಳ್+ಎಡೆ
ಗೆಡೆದುದ್+ಅತಿರಥ +ಸಮರಥ+ಅರ್ಧ+ಮಹಾರಥಾದಿಗಳು
ಹೊಡೆಗೆಡೆದ +ದಂತಿಗಳು +ರಕ್ತದ
ಕಡಲೊಳ್+ಈಸಾಡಿದವು +ತೇಜಿಯ
ಕಡಿಕು +ಹರಿದವು +ಹೊರೆದನ್+ಅಂತಕನ್+ಉರು+ಪರಿಗ್ರಹವ

ಅಚ್ಚರಿ:
(೧) ಅತಿರಥ, ಸಮರಥ, ಮಹಾರಥ – ಪದಗಳ ಬಳಕೆ
(೨) ಯುದ್ಧದ ಭೀಕರತೆ – ರಕ್ತದಕಡಲೊಳೀಸಾಡಿದವು ತೇಜಿಯ ಕಡಿಕು

ನಿಮ್ಮ ಟಿಪ್ಪಣಿ ಬರೆಯಿರಿ