ಪದ್ಯ ೬೭: ಕರ್ಣಾದಿಗಳು ಏನೆಂದು ಗರ್ಜಿಸಿದರು?

ಸಾಕು ನೀ ಚಿಂತಿಸಲು ಬೇಡ ಪಿ
ನಾಕಧರನಡಹಾಯ್ದಡೆಯು ನಾ
ವಾಕೆವಾಳರು ರಣಕೆ ಕೃಷ್ಣಾರ್ಜುನರ ಪಾಡೇನು
ನೂಕಿ ನೋಡಾ ಸೈಂಧವನನೇ
ಕೈಕವೀರರು ಕಾವೆವೆಂದು
ದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು ತಮತಮಗೆ (ದ್ರೋಣ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಆಗ ಕರ್ಣಾದಿಗಳು ಜೋರಾಗಿ ಗರ್ಜಿಸುತ್ತಾ, ಸಾಕು, ನೀನು ಚಿಂತೆ ಮಾಡಬೇಡ, ಶಿವನೇ ಎದುರಾಗಿ ಬಂದರೂ ಯುದ್ಧಮಾಡಬಲ್ಲ ವೀರರು ನಾವಿದ್ದೇವೆ, ಇನ್ನು ಕೃಷ್ಣಾರ್ಜುನರ ಪಾಡೆನು, ಅವರು ನಮಗೆ ಲೆಕ್ಕವೇ? ಸೈಂಧವನನ್ನು ನಾವು ಕಾಪಾಡುತ್ತೇವೆ, ಅವನನ್ನು ರಣರಂಗಕ್ಕೆ ನೂಕಿಇರಿ, ನಾವು ರಕ್ಷಿಸುತ್ತೇವೆ, ಜಗತ್ತಿನಲ್ಲಿ ನಾವು ಏಕೈಕ ವೀರರು ಎಂದು ಕೂಗಿದರು.

ಅರ್ಥ:
ಸಾಕು: ನಿಲ್ಲಿಸು; ಚಿಂತಿಸು: ಯೋಚಿಸು; ಬೇಡ: ತಡೆ; ಪಿನಾಕ: ತ್ರಿಶೂಲ; ಪಿನಾಕಧರ: ಶಿವ; ಅಡಹಾಯ್ದು: ಅಡ್ಡಬಾ, ಇದಿರಾಗು; ಆಕೆವಾಳ: ವೀರ, ಪರಾಕ್ರಮಿ; ರಣ: ಯುದ್ಧ; ಪಾಡು: ಸ್ಥಿತಿ; ನೂಕು: ತಳ್ಳು; ಏಕೈಕ: ಒಬ್ಬನೇ; ವೀರ: ಪರಾಕ್ರಮಿ; ಕಾವು: ರಕ್ಷಿಸು; ಉದ್ರೇಕ: ಉದ್ವೇಗ, ಆವೇಗ; ಮಿಗೆ: ಹೆಚ್ಚು; ಗರ್ಜಿಸು: ಆರ್ಭಟಿಸು; ಆದಿ: ಮುಂತಾದ;

ಪದವಿಂಗಡಣೆ:
ಸಾಕು +ನೀ +ಚಿಂತಿಸಲು +ಬೇಡ +ಪಿ
ನಾಕಧರನ್+ಅಡಹಾಯ್ದಡೆಯು +ನಾವ್
ಆಕೆವಾಳರು +ರಣಕೆ +ಕೃಷ್ಣಾರ್ಜುನರ +ಪಾಡೇನು
ನೂಕಿ +ನೋಡಾ +ಸೈಂಧವನನ್
ಏಕೈಕವೀರರು +ಕಾವೆವೆಂದ್
ಉದ್ರೇಕ +ಮಿಗೆ +ಗರ್ಜಿಸಿತು +ಕರ್ಣಾದಿಗಳು +ತಮತಮಗೆ

ಅಚ್ಚರಿ:
(೧) ಕರ್ಣಾದಿಗಳು ತಮ್ಮ ಪರಾಕ್ರಮವನ್ನು ಹೊಗಳಿದ ಪರಿ – ಪಿನಾಕಧರನಡಹಾಯ್ದಡೆಯು ನಾವಾಕೆವಾಳರು; ಏಕೈಕವೀರರು ಕಾವೆವೆಂದುದ್ರೇಕ ಮಿಗೆ ಗರ್ಜಿಸಿತು ಕರ್ಣಾದಿಗಳು

ನಿಮ್ಮ ಟಿಪ್ಪಣಿ ಬರೆಯಿರಿ