ಪದ್ಯ ೧೪: ಅರ್ಜುನನ ಕೋಪವು ಹೇಗೆ ಕಂಡಿತು?

ಧರಣಿಪನ ನಿರಿಗೆಯಲಿ ಕಂದನ
ಮರಣವನು ನಿಶ್ಚಯಿಸಿ ಪ್ರಳಯದ
ಹರನ ಕೋಪವ ಕೇಣಿಗೊಂಡನು ತನ್ನ ಚಿತ್ತದಲಿ
ಸುರಿವ ನಯನಾಂಬುಗಳ ಜಲನಿಧಿ
ಗುರವಣಿಸಿದನೊ ವಡಬನೆನೆ ಮುರ
ಹರನ ಮೈದುನನೊಯ್ಯನೈದಿದನವನಿಪಾಲಕನ (ದ್ರೋಣ ಪರ್ವ, ೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧರ್ಮಜನಿರುವ ರೀತಿಯನ್ನು ನೋಡಿ, ಅಭಿಮನ್ಯುವು ಮರಣ ಹೊಂದಿರುವುದನ್ನು ನಿರ್ಧರಿಸಿ, ಪ್ರಳಯಕಾಲದ ಶಿವನಂತೆ ಕೋಪಗೊಂಡನು. ಕಣ್ಣೀರಿನ ಸಮುದ್ರಕ್ಕೆ ವಡಬಾಗ್ನಿಯು ಹೋಗುತ್ತಿದೆಯೆಂಬಂತೆ, ದೊರೆಯ ಹತ್ತಿರಕ್ಕೆ ಹೋದನು.

ಅರ್ಥ:
ಧರಣಿಪ: ರಾಜ; ನಿರಿಗೆ: ಸೀರೆ, ಧೋತ್ರ; ಕಂದ: ಮಗ; ಮರಣ: ಸಾವು; ನಿಶ್ಚಯಿಸು: ನಿರ್ಧರಿಸು; ಪ್ರಳಯ: ಅಂತ್ಯ; ಹರ: ಈಶ್ವರ; ಕೋಪ: ಸಿಟ್ಟು; ಕೇಣಿ: ಗುತ್ತಿಗೆ, ಗೇಣಿ; ಚಿತ್ತ: ಮನಸ್ಸು; ಸುರಿ: ವರ್ಷಿಸು; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಜಲನಿಧಿ: ಸಾಗರ; ಉರವಣಿಸು: ಆತುರಿಸು; ವಡಬ: ಸಮುದ್ರದೊಳಗಿನ ಬೆಂಕಿ; ಮುರಹರ: ಕೃಷ್ಣ; ಮೈದುನ: ತಂಗಿಯ ಗಂಡ; ಒಯ್ಯು: ತೆರಳು; ಐದು: ಬಂದು ಸೇರು; ಅವನಿಪಾಲಕ: ರಾಜ;

ಪದವಿಂಗಡಣೆ:
ಧರಣಿಪನ +ನಿರಿಗೆಯಲಿ +ಕಂದನ
ಮರಣವನು +ನಿಶ್ಚಯಿಸಿ +ಪ್ರಳಯದ
ಹರನ +ಕೋಪವ +ಕೇಣಿಗೊಂಡನು +ತನ್ನ +ಚಿತ್ತದಲಿ
ಸುರಿವ +ನಯನಾಂಬುಗಳ+ ಜಲನಿಧಿ
ಗುರವಣಿಸಿದನೊ +ವಡಬನೆನೆ +ಮುರ
ಹರನ +ಮೈದುನನ್+ಒಯ್ಯನ್+ಐದಿದನ್+ಅವನಿಪಾಲಕನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸುರಿವ ನಯನಾಂಬುಗಳ ಜಲನಿಧಿಗುರವಣಿಸಿದನೊ ವಡಬನೆನೆ
(೨) ಧರಣಿಪ, ಅವನಿಪಾಲಕ – ಸಮಾನಾರ್ಥಕ ಪದಗಳು – ಪದ್ಯದ ಮೊದಲ ಮತ್ತು ಕೊನೆಯ ಪದ

ನಿಮ್ಮ ಟಿಪ್ಪಣಿ ಬರೆಯಿರಿ