ಪದ್ಯ ೩೧: ಭೀಮನು ಹೇಗೆ ಗಾಯಗೊಂಡನು?

ಸುಳಿದು ಹರಿ ಮೇಖಲೆಯ ಮೋಹರ
ದೊಳಗೆ ಮುಗ್ಗಿದಿರೈ ಮಹಾ ಮಂ
ಡಳಿಕರಿರ ಫಡ ಹೋಗಿರೈ ನೀವೆನುತ ಖಾತಿಯಲಿ
ಬಿಲುದುಡುಕಿ ಪವಮಾನ ನಂದನ
ನಳವಿಗೊಟ್ಟನು ಹೂಣೆ ಹೊಕ್ಕರಿ
ಬಲವನಿರಿದನು ಘಾಯವಡೆದನು ಘೋರ ಸಮರದಲಿ (ದ್ರೋಣ ಪರ್ವ, ೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಎಲೈ ಮಾಂಡಲಿಕರೇ, ಇಂದ್ರಜಾಲದ ಈ ಸೈನ್ಯದಲ್ಲಿ ಸೊತು ಹಿಂದಿರುಗಿದಿರಲ್ಲವೇ? ನೀವು ಹೋಗಿರಿ ಎಂದು ಮೂದಲಿಸಿ ಭೀಮನು ಬಿಲ್ಲು ಹಿಡಿದು ಶತ್ರುಸೈನ್ಯದಲ್ಲಿ ನುಗ್ಗಿ ಹೊಡೆದು ಘೋರವಾದ ಯುದ್ಧದಲ್ಲಿ ಗಾಯಗೊಂಡನು.

ಅರ್ಥ:
ಸುಳಿ: ಕಾಣಿಸಿಕೊಳ್ಳು; ಹರಿ: ಕುದುರೆ ; ಮೇಖಲೆ: ಒಡ್ಯಾಣ; ಮೋಹರ: ಯುದ್ಧ; ಮುಗ್ಗು: ಬಾಗು, ಮಣಿ; ಮಂಡಳಿಕ: ಸಾಮಂತರಾಜ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಖಾತಿ: ಕೋಪ; ಬಿಲು: ಬಿಲ್ಲು; ತುಡುಕು: ಹೋರಾಡು, ಸೆಣಸು; ಪವಮಾನ: ವಾಯು; ನಂದನ: ಮಗ; ಅಳವು: ಶಕ್ತಿ, ಸಾಮರ್ಥ್ಯ; ಹೂಣೆ: ಸ್ಪರ್ಧೆ, ಪ್ರತಿಜ್ಞೆ; ಹೊಕ್ಕು: ಸೇರು; ಅರಿ: ವೈರಿ; ಬಲ: ಸೈನ್ಯ; ಇರಿ: ಚುಚ್ಚು; ಘಾಯ: ಪೆಟ್ಟು; ಘೋರ: ಉಗ್ರವಾದ; ಸಮರ: ಯುದ್ಧ;

ಪದವಿಂಗಡಣೆ:
ಸುಳಿದು +ಹರಿ +ಮೇಖಲೆಯ +ಮೋಹರ
ದೊಳಗೆ+ ಮುಗ್ಗಿದಿರೈ+ ಮಹಾ +ಮಂ
ಡಳಿಕರಿರ+ ಫಡ+ ಹೋಗಿರೈ +ನೀವೆನುತ +ಖಾತಿಯಲಿ
ಬಿಲು+ತುಡುಕಿ+ ಪವಮಾನ+ ನಂದನನ್
ಅಳವಿ+ಕೊಟ್ಟನು +ಹೂಣೆ +ಹೊಕ್ಕ್+ಅರಿ
ಬಲವನ್+ಇರಿದನು+ ಘಾಯವಡೆದನು +ಘೋರ +ಸಮರದಲಿ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮೇಖಲೆಯ ಮೋಹರದೊಳಗೆ ಮುಗ್ಗಿದಿರೈ ಮಹಾ ಮಂಡಳಿಕರಿರ

ನಿಮ್ಮ ಟಿಪ್ಪಣಿ ಬರೆಯಿರಿ