ಪದ್ಯ ೩೨: ಸೈನಿಕರು ಏನೆಂದು ಕೂಗಿದರು?

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು (ದ್ರೋಣ ಪರ್ವ, ೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ದ್ರೋಣನ ಮಹಾರಭಸವನ್ನು ಕಂಡ ಮಂತ್ರಿಗಳು, ವೀರರನ್ನು ಕಳಿಸಿ ದ್ರೋಣನ ರಭಸವನ್ನು ತಗ್ಗಿಸಿರಿ, ಯಮನದಾಳಿಗೆ ಎದುರಾಗಿ ಪರಾಕ್ರಮ ಏನು ಮಾಡೀತು? ನಮ್ಮ ಭರವಸೆಗಳು ಕುಸಿಯುತ್ತಿವೆ, ದ್ರೋಣನನ್ನು ನಿಲ್ಲಿಸಿ ಯುದ್ಧಮಾಡದಿದ್ದರೆ ರಾಜನು ಸೆರೆಸಿಕ್ಕುವ ಭಯ ತಪ್ಪುವುದಿಲ್ಲ ಎಂದು ಕೂಗಿದರು.

ಅರ್ಥ:
ಆಳು: ಸೇವಕ, ಸೈನಿಕ; ಹೊಗಿಸು: ಹೊಗುವಂತೆ ಮಾಡು; ರಥ: ಬಂಡಿ; ದುವ್ವಾಳಿ: ವೇಗ; ಬರುತದೆ: ಆಗಮಿಸು; ಕೃತಾಂತ: ಯಮ; ದಾಳಿ: ಆಕ್ರಮಣ; ವೀರ: ಶೂರ; ನೆಗ್ಗು: ತಗ್ಗು, ಕುಸಿ; ನೆನಹು: ಜ್ಞಾಪಕ, ನೆನಪು; ಕಾಳು: ಕೆಟ್ಟದ್ದು, ಕಪ್ಪು; ಕೆಡು: ಹಾಳು; ಕೂಡೆ: ಜೊತೆ; ತಪ್ಪ: ಸುಳ್ಳಾಗು; ನೃಪಾಲ: ರಾಜ; ಒದರು: ಕೂಗು; ಮಂತ್ರಿ: ಸಚಿವ;

ಪದವಿಂಗಡಣೆ:
ಆಳ +ಹೊಗಿಸೋ +ದ್ರೋಣ +ರಥ +ದು
ವ್ವಾಳಿಯಲಿ +ಬರುತದೆ+ ಕೃತಾಂತನ
ದಾಳಿಗ್+ಎತ್ತಣ +ವೀರವೋ +ನೆಗ್ಗಿದವು +ನೆನಹುಗಳು
ಕಾಳುಗೆಡದಿರಿ+ ಕೂಡೆ+ ಕೈಕೊಳ
ಹೇಳಿ +ಕೈ ತಪ್ಪಾಗದಿರದು+ ನೃ
ಪಾಲಕಂಗ್+ಎಂದ್+ಒದರಿದರು +ಧರ್ಮಜನ +ಮಂತ್ರಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಕೃತಾಂತನ ದಾಳಿಗೆತ್ತಣ ವೀರವೋ
(೨) ಕ ಕಾರದ ತ್ರಿವಳಿ ಪದ – ಕಾಳುಗೆಡದಿರಿ ಕೂಡೆ ಕೈಕೊಳ ಹೇಳಿ ಕೈತಪ್ಪಾಗದಿರದು

ನಿಮ್ಮ ಟಿಪ್ಪಣಿ ಬರೆಯಿರಿ