ಪದ್ಯ ೨೫: ಯಾವ ರೀತಿಯ ಯುದ್ಧವು ನಡೆಯಿತು?

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ (ದ್ರೋಣ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರವು ಸಮುದ್ರವನ್ನು ಒದೆಯಿತೋ ಎಂಬಂತೆ ಚತುರಂಗ ಸೈನ್ಯವು ತಲೆಗೆ ತಲೆಯೊತ್ತಿ ಖಾಡಾಖಾಡಿಯಿಂದ ಯುದ್ಧಾರಂಭಮಾಡಿತು. ಶತ್ರುಸೈನ್ಯಗಳು ಚದುರಿ ಚಲ್ಲಾಪಿಲ್ಲಿಯಾಗಿ ಮತ್ತೆ ಜೊತೆಗೂಡಿ ಹಾಣಾಹಾಣಿಯಿಂದ ಕಾದಿದವು.

ಅರ್ಥ:
ಒದೆ: ತುಳಿ, ಮೆಟ್ಟು, ನೂಕು; ಅಬುಧಿ: ಸಾಗರ; ಹೊಕ್ಕು: ಸೇರು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಹೊಯ್ದು: ಹೋರಾಡು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ; ಖಾಡಾಖಾಡಿ: ದ್ವಂದ್ವಯುದ್ಧ, ಮಲ್ಲಯುದ್ಧ; ಭಟ: ಸೈನಿಕ; ಕೆದರು: ಹರಡು; ಅರಿಬಲ: ವೈರಿಸೈನ್ಯ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ವಿಘಾತ: ನಾಶ, ಧ್ವಂಸ; ಅಳಿ: ನಾಶ; ಹುರಿ: ಕಾಯಿಸು; ಒದಗು: ಲಭ್ಯ, ದೊರೆತುದು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಹೊಯ್ದಾಡು: ಹೋರಾಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಒದೆದುದ್+ಅಬುಧಿಯನ್+ಅಬುಧಿ+ಎನೆ +ಹೊ
ಕ್ಕುದು +ಚತುರ್ಬಲ +ಹೊಯ್ದು +ತಲೆ+
ಒತ್ತಿದುದು +ಕೇಶಾಕೇಶಿ +ಖಾಡಾಖಾಡಿಯಲಿ +ಭಟರು
ಕೆದರಿತ್+ಅರಿಬಲ+ ಮತ್ತೆ +ಹೊದರ್
ಎದ್ದುದು +ವಿಘಾತಿಯಲ್+ಅಳಿದು +ಹುರಿಗೊಂಡ್
ಒದಗಿ +ಹಾಣಾಹಾಣಿಯಲಿ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒದೆದುದಬುಧಿಯನಬುಧಿಯೆನೆ
(೨) ಯುದ್ಧದ ಪರಿ – ಕೇಶಾಕೇಶಿ – ಕೂದಲು ಹಿಡಿದೆಳೆದು ಮಾಡುವ ಕದನ; ಖಾಡಾಕಾಡಿ – ಖಡ್ಗಕ್ಕೆ ಖಡ್ಗವನ್ನೋಡ್ಡಿ ಮಾಡುವ ಕದನ, ಹಾಣಾಹಾಣಿ – ಹಣೆಗೆ ಹಣೆಯನ್ನು ಕೊಟ್ಟು ಮಾಡುವ ಯುದ್ಧ;

ನಿಮ್ಮ ಟಿಪ್ಪಣಿ ಬರೆಯಿರಿ