ಪದ್ಯ ೨೧: ಭೀಷ್ಮರು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದರು.

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ (ಭೀಷ್ಮ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನು ಧರ್ಮಜನನ್ನು ಸಮಾಧಾನಪಡಿಸಿ, ಮಗನೇ, ಏಕೆ ದುಃಖಿಸುವೆ? ನಿನ್ನಂತಹ ಸುಚರಿತ್ರರು, ಸನ್ಮಾರ್ಗದಲ್ಲಿ ನಡೆಯುವವರು ಯಾರಿದ್ದಾರೆ? ಆ ಮಾತು ಸಾಕು, ಕ್ಷತ್ರಿಯ ಧರ್ಮವನ್ನು ಆಚರಿಸಬೇಕಾದುದೇ ಕರ್ತವ್ಯ. ನಿನಗೆ ಅಪವಾದ ಹೊರವು ಪಾಪ ಬರುವುದಿಲ್ಲ. ನಿನ್ನ ಪುಣ್ಯ ಪಾಪಗಳ ಹೊಣೆಯು ದಯಾನಿಧಿಯಾದ ಶ್ರೀಕೃಷ್ಣನ ಮೇಲಿದೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖೇದ: ದುಃಖ; ಮಗ: ಸುತ; ಉಪಾಧಿ: ಧರ್ಮದ ವಿಷಯವಾಗಿ ಮಾಡುವ ಚಿಂತನೆ; ಸುಚರಿತ್ರ: ಒಳ್ಳೆಯ ನಡತೆಯುಳ್ಳವ; ಮೇದಿನಿ: ಭೂಮಿ; ಸಾಕು: ನಿಲ್ಲಿಸು; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಆದರಿಸು: ಗೌರವಿಸು; ಅಪವಾದ: ನಿಂದನೆ; ಪಾತಕ: ಪಾಪ; ಸುಕೃತ: ಒಳ್ಳೆಯ ನಡತೆ; ದಯಾಂಬುಧಿ: ಕರುಣಾಸಾಗರ; ಹೊಣೆ: ಜವಾಬ್ದಾರಿ; ಅಂಜು: ಹೆದರು;

ಪದವಿಂಗಡಣೆ:
ಖೇದವ್+ಏಕೆಲೆ +ಮಗನೆ +ನಿನ್ನ
ಉಪಾದಿಯಲಿ +ಸುಚರಿತ್ರನ್+ಆವನು
ಮೇದಿನಿಯೊಳ್+ಆ+ ಮಾತು +ಸಾಕೈ+ ಕ್ಷತ್ರ+ಧರ್ಮವನು
ಆದರಿಸುವುದೆ +ಧರ್ಮ +ನಿನಗ್+ಅಪ
ವಾದ +ಪಾತಕವಿಲ್ಲ+ ಸುಕೃತಕ್+
ಈ+ ದಯಾಂಬುಧಿ +ಕೃಷ್ಣ +ಹೊಣೆ +ನಿನಗ್+ಅಂಜಲೇಕೆಂದ

ಅಚ್ಚರಿ:
(೧) ಧರ್ಮಜನಿಗೆ ಯಾವುದು ಧರ್ಮ? – ಕ್ಷತ್ರಧರ್ಮವನು ಆದರಿಸುವುದೆ ಧರ್ಮ
(೨) ಧರ್ಮಜನಿಗೆ ಅಭಯವನ್ನು ಹೇಳುವ ಪರಿ – ನಿನಗಪವಾದ ಪಾತಕವಿಲ್ಲ

ನಿಮ್ಮ ಟಿಪ್ಪಣಿ ಬರೆಯಿರಿ