ಪದ್ಯ ೨೪: ಭೀಷ್ಮರು ಏತಕ್ಕಾಗಿ ಬಳಲಿದರು?

ಒಡಲ ಜಡಿದವು ರೋಮ ರೋಮದೊ
ಳಡಸಿದಂಬುಗಳಂಗ ವೇದನೆ
ತೊಡಕಿತುಬ್ಬರಿಸಿದುದು ಢಗೆ ಗೋನಾಳಿ ನೀರ್ದೆಗೆಯೆ
ನುಡಿಯಲಾರೆನು ಮಕ್ಕಳಿರನೀ
ರಡಸಿದೆನು ಹಿರಿದಾಗಿಯೆನೆ ನಡ
ನಡುಗಿ ದುರ್ಯೋಧನನು ದೂತರ ಕರೆದು ನೇಮಿಸಿದ (ಭೀಷ್ಮ ಪರ್ವ, ೧೦ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಷ್ಮರು ಬಾಣದ ಹಾಸಿಗೆಯ ಮೇಲೆ ಮಲಗಿರಲು ಅವರ ದೇಹ ಬಹಳ ನೋವನ್ನನುಭವಿಸಿತು. ಮಕ್ಕಳೇ ರೋಮರೋಮಗಳಲ್ಲಿ ನೆಟ್ಟ ಬಾಣಗಳು ದೇಹವನ್ನು ಘಾಸಿಗೊಳಿಸುತ್ತಿವೆ. ನೋವು ಹೆಚ್ಚಾಗಿ ಅಂಗಳು ಒಣಗಿ ಹೋಗಿ ನಾನು ಮಾತನಾಡಲಾರೆ, ಬಹಳ ಬಾಯಾರಿಸಿದೆ ಎಂದು ಹೇಳಲು, ದುರ್ಯೋಧನನು ನಡನಡುಗಿ ಧೂತರನ್ನು ಅಟ್ಟಿ ನೀರನ್ನು ತರಲು ಹೇಳಿದನು.

ಅರ್ಥ:
ಒಡಲು: ದೇಹ; ಜಡಿ: ಭಾರದಿಂದ ಕೆಳಕ್ಕೆ ಜೋಲು; ರೋಮ: ಕೂದಲು; ಅಡಸು: ಬಿಗಿಯಾಗಿ ಒತ್ತು, ತುರುಕು; ಅಂಬು: ಬಾಣ; ಅಂಗ: ದೇಹದ ಭಾಗ; ವೇದನೆ: ನೋವು; ತೊಡಕು: ಸಿಕ್ಕು, ಗೋಜು; ಉಬ್ಬರ: ಅತಿಶಯ, ಹೆಚ್ಚಳ; ಢಗೆ: ಕಾವು, ದಗೆ; ಗೋನಾಳಿ: ಕುತ್ತಿಗೆಯ ನಾಳ; ನೀರ್ದೆಗೆ: ಬಾಯಾರಿಕೆ; ನುಡಿ: ಮಾತಾಡು; ಮಕ್ಕಳು: ಸುತರು, ಕುಮಾರ; ನೀರು: ಜಲ; ನೀರಡಸಿ: ನೀರೊದಗಿಸು; ಹಿರಿ: ದೊಡ್ಡವ; ನಡುಗು: ಹೆದರು, ಅಲುಗಾಡು; ದೂತ: ಸೇವಕ; ಕರೆ: ಬರೆಮಾಡು; ನೇಮಿಸು: ಆಜ್ಞಾಪಿಸು;

ಪದವಿಂಗಡಣೆ:
ಒಡಲ +ಜಡಿದವು +ರೋಮ +ರೋಮದೊಳ್
ಅಡಸಿದ್+ಅಂಬುಗಳ್+ಅಂಗ+ ವೇದನೆ
ತೊಡಕಿತ್+ಉಬ್ಬರಿಸಿದುದು +ಢಗೆ+ ಗೋನಾಳಿ +ನೀರ್ದೆಗೆಯೆ
ನುಡಿಯಲಾರೆನು+ ಮಕ್ಕಳಿರ+ನೀ
ರಡಸಿದೆನು+ ಹಿರಿದಾಗಿ+ಎನೆ+ ನಡ
ನಡುಗಿ +ದುರ್ಯೋಧನನು +ದೂತರ +ಕರೆದು +ನೇಮಿಸಿದ

ಅಚ್ಚರಿ:
(೧) ಭೀಷ್ಮರ ಸ್ಥಿತಿ – ನುಡಿಯಲಾರೆನು ಮಕ್ಕಳಿರನೀರಡಸಿದೆನು ಹಿರಿದಾಗಿ

ಪದ್ಯ ೨೩: ಭೀಷ್ಮರು ಹೇಗೆ ಬಾಣದ ಹಾಸಿಗೆಯ ಮೇಲೆ ಮಲಗಿದರು?

ಹೊಳೆವ ಕಣೆಗಳ ಮಂಚ ತಲೆಗಿಂ
ಬಳವಡಿಕೆಯಲಿ ಭೀಷ್ಮ ಸುಖದಲಿ
ಮಲಗಿದನು ಬಹಿರಂಗಭುವನವ್ಯಾಪ್ತಿಗಳ ಮರೆದು
ನಳಿನನಾಭನ ದಿವ್ಯ ರೂಪನು
ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ (ಭೀಷ್ಮ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾದ ಬಾಣಗಳ ಮಂಚ, ತಲೆದಿಂಬುಗಳ ಮೇಲೆ ಭೀಷ್ಮನು ಬಾಹ್ಯ ಪ್ರಪಂಚದ ವ್ಯಾಪ್ತಿಯನ್ನು ಮರೆತು, ಶ್ರೀಕೃಷ್ಣನ ದಿವ್ಯ ರೂಪವನ್ನು ಮನಸ್ಸಿನಲ್ಲಿ ಧರಿಸಿ, ನೋವಿಗೆ ಧೈರ್ಯಗೆಡದೆ ಬಾಣದ ಹಾಸಿಗೆಯ ಮೇಲೆ ಶಾಂತಚಿತ್ತರಾಗಿ ನಿದ್ರಿಸಿದರು.

ಅರ್ಥ:
ಹೊಳೆ: ಪ್ರಕಾಶ; ಕಣೆ: ಬಾಣ; ಮಂಚ: ಪಲ್ಲಂಗ; ತಲೆ: ಶಿರ; ಇಂಬು: ಆಶ್ರಯ; ಅಳವಡಿಕೆ: ಜೋಡಿಸು; ಸುಖ: ನೆಮ್ಮದಿ; ಮಲಗು: ನಿದ್ರಿಸು; ಬಹಿರಂಗ: ಹೊರಗಡೆ; ಭುವನ: ಭೂಮಿ; ವ್ಯಾಪ್ತಿ: ಹರಡು, ವಿಸ್ತಾರ; ಮರೆ: ನೆನಪಿನಿಂದ ದೂರಮಾಡು; ನಳಿನನಾಭ: ಕಮಲವನ್ನು ನಾಭಿಯಲ್ಲಿ ಹೊಂದಿರುವ (ವಿಷ್ಣು); ದಿವ್ಯ: ಶ್ರೇಷ್ಠ; ರೂಪ: ಆಕಾರ; ಬಲಿ: ಗಟ್ಟಿಯಾಗು; ಮನ: ಮನಸ್ಸು; ಹಿಡಿ: ಗ್ರಹಿಸು; ನೋವು: ಪೆಟ್ಟು; ಕಳಕಳ: ಗೊಂದಲ; ಧೃತಿ: ಧೈರ್ಯ, ಧೀರತನ; ಮೆರೆ: ಹೊಳೆ; ಬಾಣ: ಸರಳು; ಶಯನ: ನಿದ್ರೆ;

ಪದವಿಂಗಡಣೆ:
ಹೊಳೆವ +ಕಣೆಗಳ+ ಮಂಚ +ತಲೆಗ್+
ಇಂಬ್+ಅಳವಡಿಕೆಯಲಿ +ಭೀಷ್ಮ +ಸುಖದಲಿ
ಮಲಗಿದನು +ಬಹಿರಂಗ+ಭುವನ+ವ್ಯಾಪ್ತಿಗಳ +ಮರೆದು
ನಳಿನನಾಭನ+ ದಿವ್ಯ +ರೂಪನು
ಬಲಿದು +ಮನದಲಿ +ಹಿಡಿದು +ನೋವಿನ
ಕಳಕಳಕೆ +ಧೃತಿಗೆಡದೆ +ಮೆರೆದನು+ ಬಾಣ+ಶಯನದಲಿ

ಅಚ್ಚರಿ:
(೧) ಭೀಷ್ಮರ ಸ್ಥಿತಪ್ರಜ್ಞೆ – ನಳಿನನಾಭನ ದಿವ್ಯ ರೂಪನು ಬಲಿದು ಮನದಲಿ ಹಿಡಿದು ನೋವಿನ
ಕಳಕಳಕೆ ಧೃತಿಗೆಡದೆ ಮೆರೆದನು ಬಾಣಶಯನದಲಿ

ಪದ್ಯ ೨೨: ಭೀಷ್ಮನಿಗೆ ತಲೆದಿಂಬನ್ನು ಅರ್ಜುನನು ಹೇಗೆ ಸಿದ್ಧಪಡಿಸಿದನು?

ಮಗನೆ ಕೇಳೈ ಪಾರ್ಥ ಕೂರಂ
ಬುಗಳ ಹಾಸಿಕೆ ಚೆಂದವಾಯಿತು
ಹೊಗರಲಗ ತಲೆಗಿಂಬ ರಚಿಸೆನೆ ಪಾರ್ಥ ಕೈಕೊಂಡು
ಬಿಗಿದ ಬಿಲುಗೊಂಡೆದ್ದು ಮಂಡಿಸಿ
ಹೊಗರ ಕವಲಂಬೈದನೆಚ್ಚನು
ನೆಗಹಿದನು ಮಸ್ತಕವನಾ ಗಂಗಾಕುಮಾರಕನ (ಭೀಷ್ಮ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮಗು ಅರ್ಜುನ, ಬಾಣಗಳ ಹಾಸಿಗೆ ಚೆಂದವಾಗಿದೆ, ಆದರೆ ಬಾಣಗಳ ತಲೆದಿಂಬನ್ನು ಏರ್ಪಡಿಸು ಎಂದು ಭೀಷ್ಮನು ಹೇಳಲು, ಅರ್ಜುನನು ಎದ್ದು ಐದು ಬಾಣಗಳನ್ನು ನೆಲಕ್ಕೆ ನೆಟ್ಟು, ಭೀಷ್ಮನಿಗೆ ತಲೆದಿಂಬನ್ನು ಏರ್ಪಡಿಸಿದನು.

ಅರ್ಥ:
ಮಗ: ಸುತ; ಕೇಳು: ಆಲಿಸು; ಕೂರಂಬು: ಹರಿತವಾದ ಬಾಣ; ಹಾಸಿಕೆ: ಮಂಚ; ಚೆಂದ: ಸೊಗಸು; ಹೊಗರು: ಕಾಂತಿ; ಅಲಗು: ಆಯುಧಗಳ ಹರಿತವಾದ ಅಂಚು, ಖಡ್ಗ; ತಲೆ: ಶಿರ; ಇಂಬು: ಆಶ್ರಯ; ರಚಿಸು: ನಿರ್ಮಿಸು; ಕೈಕೊಂಡು: ಧರಿಸು; ಬಿಗಿ: ಒತ್ತು, ಅಮುಕು, ಗಟ್ಟಿ; ಮಂಡಿಸು: ಕೂಡು, ಬಾಗಿಸು; ಹೊಗರು: ಕಾಂತಿ, ಪ್ರಕಾಶ; ಕವಲು: ಟಿಸಿಲು, ಕವಲೊಡೆದ ಕೊಂಬೆ; ಎಚ್ಚು: ಬಾಣಪ್ರಯೋಗ ಮಾದು; ನೆಗಹು: ಮೇಲೆತ್ತು; ಮಸ್ತಕ: ತಲೆ; ಕುಮಾರ: ಮಗ; ಬಿಲು: ಬಿಲ್ಲು, ಚಾಪ;

ಪದವಿಂಗಡಣೆ:
ಮಗನೆ +ಕೇಳೈ +ಪಾರ್ಥ +ಕೂರಂ
ಬುಗಳ+ ಹಾಸಿಕೆ+ ಚೆಂದವಾಯಿತು
ಹೊಗರ್ +ಅಲಗ +ತಲೆಗ್+ಇಂಬ+ ರಚಿಸ್+ಎನೆ +ಪಾರ್ಥ +ಕೈಕೊಂಡು
ಬಿಗಿದ +ಬಿಲುಗೊಂಡ್+ಎದ್ದು +ಮಂಡಿಸಿ
ಹೊಗರ+ ಕವಲ್+ಅಂಬ್+ಐದನ್+ಎಚ್ಚನು
ನೆಗಹಿದನು +ಮಸ್ತಕವನ್+ಆ+ ಗಂಗಾ+ಕುಮಾರಕನ

ಅಚ್ಚರಿ:
(೧) ಬಾಣದ ಹಾಸಿಗೆಯನ್ನು ವರ್ಣಿಸುವ ಪರಿ – ಕೂರಂಬುಗಳ ಹಾಸಿಕೆ ಚೆಂದವಾಯಿತು

ಪದ್ಯ ೨೧: ಭೀಷ್ಮರು ಧರ್ಮಜನನ್ನು ಹೇಗೆ ಸಮಾಧಾನ ಪಡಿಸಿದರು.

ಖೇದವೇಕೆಲೆ ಮಗನೆ ನಿನ್ನೋ
ಪಾದಿಯಲಿ ಸುಚರಿತ್ರನಾವನು
ಮೇದಿನಿಯೊಳಾ ಮಾತು ಸಾಕೈ ಕ್ಷತ್ರಧರ್ಮವನು
ಆದರಿಸುವುದೆ ಧರ್ಮ ನಿನಗಪ
ವಾದ ಪಾತಕವಿಲ್ಲ ಸುಕೃತ
ಕ್ಕೀ ದಯಾಂಬುಧಿ ಕೃಷ್ಣ ಹೊಣೆ ನಿನಗಂಜಲೇಕೆಂದ (ಭೀಷ್ಮ ಪರ್ವ, ೧೦ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೀಷ್ಮನು ಧರ್ಮಜನನ್ನು ಸಮಾಧಾನಪಡಿಸಿ, ಮಗನೇ, ಏಕೆ ದುಃಖಿಸುವೆ? ನಿನ್ನಂತಹ ಸುಚರಿತ್ರರು, ಸನ್ಮಾರ್ಗದಲ್ಲಿ ನಡೆಯುವವರು ಯಾರಿದ್ದಾರೆ? ಆ ಮಾತು ಸಾಕು, ಕ್ಷತ್ರಿಯ ಧರ್ಮವನ್ನು ಆಚರಿಸಬೇಕಾದುದೇ ಕರ್ತವ್ಯ. ನಿನಗೆ ಅಪವಾದ ಹೊರವು ಪಾಪ ಬರುವುದಿಲ್ಲ. ನಿನ್ನ ಪುಣ್ಯ ಪಾಪಗಳ ಹೊಣೆಯು ದಯಾನಿಧಿಯಾದ ಶ್ರೀಕೃಷ್ಣನ ಮೇಲಿದೆ ಎಂದು ಭೀಷ್ಮರು ಹೇಳಿದರು.

ಅರ್ಥ:
ಖೇದ: ದುಃಖ; ಮಗ: ಸುತ; ಉಪಾಧಿ: ಧರ್ಮದ ವಿಷಯವಾಗಿ ಮಾಡುವ ಚಿಂತನೆ; ಸುಚರಿತ್ರ: ಒಳ್ಳೆಯ ನಡತೆಯುಳ್ಳವ; ಮೇದಿನಿ: ಭೂಮಿ; ಸಾಕು: ನಿಲ್ಲಿಸು; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಆದರಿಸು: ಗೌರವಿಸು; ಅಪವಾದ: ನಿಂದನೆ; ಪಾತಕ: ಪಾಪ; ಸುಕೃತ: ಒಳ್ಳೆಯ ನಡತೆ; ದಯಾಂಬುಧಿ: ಕರುಣಾಸಾಗರ; ಹೊಣೆ: ಜವಾಬ್ದಾರಿ; ಅಂಜು: ಹೆದರು;

ಪದವಿಂಗಡಣೆ:
ಖೇದವ್+ಏಕೆಲೆ +ಮಗನೆ +ನಿನ್ನ
ಉಪಾದಿಯಲಿ +ಸುಚರಿತ್ರನ್+ಆವನು
ಮೇದಿನಿಯೊಳ್+ಆ+ ಮಾತು +ಸಾಕೈ+ ಕ್ಷತ್ರ+ಧರ್ಮವನು
ಆದರಿಸುವುದೆ +ಧರ್ಮ +ನಿನಗ್+ಅಪ
ವಾದ +ಪಾತಕವಿಲ್ಲ+ ಸುಕೃತಕ್+
ಈ+ ದಯಾಂಬುಧಿ +ಕೃಷ್ಣ +ಹೊಣೆ +ನಿನಗ್+ಅಂಜಲೇಕೆಂದ

ಅಚ್ಚರಿ:
(೧) ಧರ್ಮಜನಿಗೆ ಯಾವುದು ಧರ್ಮ? – ಕ್ಷತ್ರಧರ್ಮವನು ಆದರಿಸುವುದೆ ಧರ್ಮ
(೨) ಧರ್ಮಜನಿಗೆ ಅಭಯವನ್ನು ಹೇಳುವ ಪರಿ – ನಿನಗಪವಾದ ಪಾತಕವಿಲ್ಲ

ಪದ್ಯ ೨೦: ಧರ್ಮಜನು ಹೇಗೆ ದುಃಖಿಸಿದನು?

ಏನ ನೆನೆದಾವುದನೊಡರಿದೆ
ನೇನ ಹೇಳುವೆನೆನ್ನ ಪುಣ್ಯದ
ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ
ನಾನದಾವುದು ಧರ್ಮತತ್ವ ನಿ
ಧಾನವೆಂದರಿಯದೆ ಕೃತಾಂತಂ
ಗಾನು ಹಂಗಿಗನಾದೆನೆಂದೊರಲಿದನು ಯಮಸೂನು (ಭೀಷ್ಮ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಏನನ್ನು ಆಲೋಚಿಸಿ, ಏನನ್ನು ಮಾಡಿದೆ, ನನ್ನ ಪುಣ್ಯದ ಹಾನಿಯನ್ನು ಏನೆಂದು ಹೇಳಲಿ, ನಿಮ್ಮ ಶ್ರೀಪಾದಗಳಿಗೆ ನಾನು ತಪ್ಪನ್ನು ಬಗೆದೆ, ಧರ್ಮ ತತ್ತ್ವದ ಮಾರ್ಗವಾವುದೆಂದು ತಿಳಿಯದೆ ನಾನು ಯಮಧರ್ಮನ ಹಂಗಿಗೊಳಗಾದೆ ಎಂದು ಧರ್ಮಜನು ದುಃಖಿಸಿದನು.

ಅರ್ಥ:
ನೆನೆ: ಜ್ಞಾಪಿಸು; ಒಡರ್ಚು: ಉಂಟು ಮಾಡು; ಹೇಳು: ತಿಳಿಸು; ಪುಣ್ಯ: ಸದಾಚಾರ; ಹಾನಿ: ನಾಶ; ತಪ್ಪು: ಸೈರಿಯಲ್ಲದ; ಸಿರಿಪದ: ಶ್ರೇಷ್ಠವಾದ ಪಾದ; ಧರ್ಮ: ಧಾರಣೆ ಮಾಡಿದುದು, ನಿಯಮ; ನಿಧಾನ: ಸಾವಕಾಶ; ತತ್ವ: ಸಿದ್ಧಾಂತ, ನಿಯಮ; ಅರಿ: ತಿಳಿ; ಕೃತಾಂತ: ಯಮ; ಹಂಗು: ದಾಕ್ಷಿಣ್ಯ, ಆಭಾರ; ಒರಲು: ಅರಚು;
ಸೂನು: ಮಗ;

ಪದವಿಂಗಡಣೆ:
ಏನ +ನೆನೆದ್+ಆವುದನ್+ಒಡರಿದೆನ್
ಏನ+ ಹೇಳುವೆನ್+ಎನ್ನ+ ಪುಣ್ಯದ
ಹಾನಿಯನು +ಕೈತಪ್ಪ +ನೆನೆದೆನು +ನಿಮ್ಮ +ಸಿರಿಪದಕೆ
ನಾನ್+ಅದಾವುದು+ ಧರ್ಮತತ್ವ +ನಿ
ಧಾನವೆಂದ್+ಅರಿಯದೆ +ಕೃತಾಂತಂಗ್
ಆನು +ಹಂಗಿಗನ್+ಆದೆನ್+ಎಂದ್+ಒರಲಿದನು +ಯಮಸೂನು

ಅಚ್ಚರಿ:
(೧) ಧರ್ಮಜನು ದುಃಖಿಸುವ ಪರಿ – ಪುಣ್ಯದ ಹಾನಿಯನು ಕೈತಪ್ಪ ನೆನೆದೆನು ನಿಮ್ಮ ಸಿರಿಪದಕೆ

ಪದ್ಯ ೧೯: ಭೀಷ್ಮನ ಪಕ್ಕದಲ್ಲಿ ಯಾರು ನಿಂತರು?

ಕವಿದ ಮುಸುಕಿನ ಕಂದಿದಾನನ
ದವನಿಪತಿ ಯಮಸೂನು ಗಂಗಾ
ಭವನ ಮಗ್ಗುಲ ಸಾರಿದನು ಕೈಚಾಚಿ ಕದಪಿನಲಿ
ಪವನಸುತ ಸಹದೇವ ಸಾತ್ಯಕಿ
ದಿವಿಜಪತಿಸುತರಾದಿ ಯಾದವ
ರವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು (ಭೀಷ್ಮ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಾಸಿದ ಮುಖಕ್ಕೆ ಮುಸುಕಿಟ್ಟು ಧರ್ಮಜನು ಭೀಷ್ಮನ ಒಂದು ಪಕ್ಕಕ್ಕೆ ಹೋಗಿ ಕೈಯನ್ನು ಕೆನ್ನೆಗೆ ತಂದು ನಿಂತುಕೊಂಡನು. ಭೀಮ, ಅರ್ಜುನ, ಸಹದೇವ, ಸಾತ್ಯಕಿ ಮೊದಲಾದವರು ಶೋಕಾಗ್ನಿಯಿಂದ ಬೆಂದು ಪಕ್ಕದಲ್ಲಿ ಸಾಲಾಗಿ ನಿಂತರು.

ಅರ್ಥ:
ಕವಿ: ಆವರಿಸು; ಮುಸುಕು: ಹೊದಿಕೆ; ಕಂದು: ಮಸಕಾಗು; ಆನನ: ಮುಖ; ಅವನಿಪತಿ: ರಾಜ; ಯಮ: ಜವರಾಯ; ಸೂನು: ಮಗ; ಭವ: ಹುಟ್ಟು; ಮಗ್ಗುಲ: ಪಕ್ಕ; ಸರು: ಹರಡು; ಕೈ: ಹಸ್ತ; ಚಾಚು: ಹರಡು; ಕದಪು: ಕೆನ್ನೆ; ಪವನಸುತ: ವಾಯುಪುತ್ರ (ಭೀಮ); ದಿವಿಜ: ದೇವತೆ; ದಿವಿಜಪತಿ: ಇಂದ್ರ; ಸುತ: ಮಗ; ಆದಿ: ಮೊದಲಾದ; ಅವಿರಳ: ಬಿಡುವಿಲ್ಲದೆ; ಶೋಕ: ದುಃಖ; ಅಗ್ನಿ: ಬೆಂಕಿ; ತಪ್ತ: ನೊಂದ, ಸಂಕಟ; ಪಂತಿ: ಸಾಲು; ಕಟ್ಟು: ರಚಿಸು;

ಪದವಿಂಗಡಣೆ:
ಕವಿದ +ಮುಸುಕಿನ +ಕಂದಿದ್+ಆನನದ್
ಅವನಿಪತಿ +ಯಮಸೂನು +ಗಂಗಾ
ಭವನ+ ಮಗ್ಗುಲ+ ಸಾರಿದನು+ ಕೈಚಾಚಿ +ಕದಪಿನಲಿ
ಪವನಸುತ +ಸಹದೇವ +ಸಾತ್ಯಕಿ
ದಿವಿಜಪತಿಸುತರ್+ಆದಿ+ ಯಾದವರ್
ಅವಿರಳದ +ಶೊಕಾಗ್ನಿ +ತಪ್ತರು +ಪಂತಿ+ಕಟ್ಟಿದರು

ಅಚ್ಚರಿ:
(೧) ಧರ್ಮಜನ ಸ್ಥಿತಿ – ಕವಿದ ಮುಸುಕಿನ ಕಂದಿದಾನನದವನಿಪತಿ ಯಮಸೂನು
(೨) ಧರ್ಮಜ, ಅರ್ಜುನ, ಭೀಮನನ್ನು ಕರೆದ ಪರಿ – ದಿವಿಜಪತಿಸುತ, ಪವನಸುತ, ಯಮಸೂನು;
(೩) ದುಃಖಿತರಾದರು ಎಂದು ಹೇಳುವ ಪರಿ – ಅವಿರಳದ ಶೊಕಾಗ್ನಿ ತಪ್ತರು ಪಂತಿಗಟ್ಟಿದರು