ಪದ್ಯ ೫೫: ಅಶ್ವತ್ಥಾಮನು ಅರ್ಜುನನನ್ನು ಹೇಗೆ ಯುದ್ಧಕ್ಕೆ ಕರೆದನು?

ಬಳಿಯಲೊಡಗವಿಯಿತ್ತು ಚಾತು
ರ್ಬಲ ಸಹಿತ ದ್ರೋಣಾದಿಗಳು ತೋ
ರಳವ ಹಿಡಿ ಹಿಡಿ ಧನುವ ಸುರಿ ಸುರಿ ಸರಳ ಸರಿವಳೆಯ
ಗಳಹದಿರು ಮೈದೋರು ದಾನವ
ಕುಲದಿಶಾಪಟ ಸಹಿತ ನೀನೆಸು
ಕಳೆಯದಿರು ಕಾಲವನೆನುತ ಕವಿದೆಚ್ಚರತಿರಥರು (ಭೀಷ್ಮ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನೊಡನೆ ಚತುರಂಗ ಸೈನ್ಯವೂ ದ್ರೋಣಾದಿ ನಾಯಕರೂ ಅರ್ಜುನನನ್ನು ಮುತ್ತಿದರು. ನಿನ್ನ ಶೌರ್ಯವನ್ನು ತೋರಿಸು, ಬಿಲ್ಲನ್ನು ಹಿಡಿ, ಹಿಡಿ, ಬಾಣದ ಮಳೆಯನ್ನು ಸುರಿ, ಸುರಿ, ಬಾಯಿಗೆ ಬಂದಮ್ತೆ ಮಾತಾಡಬೇಡ. ನೀನು ಮೂಂದೆ ಬಾ, ನೀನೂ ಕೃಷ್ಣನೂ ಇಬ್ಬರೂ ಬಾಣ ಪ್ರಯೋಗ ಮಾಡಿರಿ, ಸುಮ್ಮನೆ ಕಾಲಹರಣ ಮಾಡಬೇಡ ಎಂದು ಬಾಣಗಳನ್ನು ಬಿಟ್ಟರು.

ಅರ್ಥ:
ಬಳಿ: ಹತ್ತಿರ; ಒಡಗವಿ: ತಕ್ಷಣವೇ ಮುತ್ತಿಗೆ ಹಾಕು; ಚಾತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸಹಿತ: ಜೊತೆ; ಆದಿ: ಮುಂತಾದ; ತೋರು: ಗೋಚರಿಸು; ಹಿಡಿ: ಗ್ರಹಿಸು; ಧನು: ಬಿಲ್ಲು; ಸುರಿ: ವರ್ಷಿಸು; ಸರಳ: ಬಾಣ; ಸರಿವಳೆ: ಮಳೆಯನ್ನು ಸುರಿಸು; ಗಳಹ: ಅತಿಯಾಗಿ ಹರಟುವವ; ಮೈದೋರು: ಮುಂದೆ ಬಾ; ದಾನವ: ರಾಕ್ಷಸ; ಕುಲ: ವಂಶ; ದಿಶಾಪಟ: ದಿಕ್ಕುಪಾಲು; ಸಹಿತ: ಜೊತೆ; ದಾನವಕುಲದಿಶಾಪಟ: ಕೃಷ್ಣ; ಎಸು: ಬಾಣ ಪ್ರಯೋಗ ಮಾಡು; ಕಳೆ: ಬೀಡು, ತೊರೆ; ಕಾಲ: ಸಮಯ; ಕವಿ: ಆವರಿಸು; ಎಚ್ಚು: ಬಾಣ ಬಿಡು; ಅತಿರಥ: ಪರಾಕ್ರಮಿ, ಶೂರ; ಅಳವಿ: ಶಕ್ತಿ;

ಪದವಿಂಗಡಣೆ:
ಬಳಿಯಲ್+ಒಡಗವಿಯಿತ್ತು +ಚಾತು
ರ್ಬಲ +ಸಹಿತ +ದ್ರೋಣಾದಿಗಳು +ತೋರ್
ಅಳವ+ ಹಿಡಿ +ಹಿಡಿ ಧನುವ +ಸುರಿ +ಸುರಿ +ಸರಳ +ಸರಿವಳೆಯ
ಗಳಹದಿರು +ಮೈದೋರು +ದಾನವ
ಕುಲದಿಶಾಪಟ +ಸಹಿತ +ನೀನ್+ಎಸು
ಕಳೆಯದಿರು +ಕಾಲವನೆನುತ +ಕವಿದೆಚ್ಚರ್+ಅತಿರಥರು

ಅಚ್ಚರಿ:
(೧) ಕೃಷ್ಣನನ್ನು ದಾನವಕುಲದಿಶಾಪಟ ಎಂದು ಕರೆದಿರುವುದು
(೨) ಸ ಕಾರದ ಸಾಲು ಪದ – ಸುರಿ ಸುರಿ ಸರಳ ಸರಿವಳೆಯ