ಪದ್ಯ ೩೩: ಯುದ್ಧಮಾಡುವವರು ಹೇಗೆ ಕಾಣಿಸಿದರು?

ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳನಿಡುವ ಸಡಿಲದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು (ಭೀಷ್ಮ ಪರ್ವ, ೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ತಲೆ ಉರುಳಿ ಬೀಳುತ್ತಿರುವಾಗ ಅದನ್ನೇ ಹಿಡಿದು ಶತ್ರುಗಳತ್ತ ಎಸೆಯುವ, ರುಂಡ ಕತ್ತರಿಸಿ ಹೋದುದನ್ನು ತಿಳಿಯದೆ, ಮುಂಡದಿಂದಲೇ ಮುನ್ನುಗ್ಗುವ, ಗುರಾಣಿಗಳು ಕತ್ತಿಗಳು ಮುರಿದು ತಲೆ ಕತ್ತರಿಸಿ ಬೀಳುವ ಸೈನಿಕರು, ಕಬಂಧದಿಂದಲೇ ಯುದ್ಧಮಾಡುವವರು ಕಾಣಿಸಿದರು.

ಅರ್ಥ:
ಉರುಳು: ಹೊರಳಾಡು; ಬೀಳು: ಕುಸಿ; ತಲೆ: ಶಿರ; ತಿರುಹು: ತಿರುಗಿಸು; ರಿಪು: ವೈರಿ; ಸಡಿಲ:ಬಿಗಿಯಿಲ್ಲದಿರುವುದು; ಶಿರ: ತಲೆ; ಅರಿ: ತಿಳಿ; ಮುಂಡ: ತಲೆಯಿಲ್ಲದ ದೇಹ; ಇದಿರು: ಎದುರು; ಬೀದಿ: ರಸೆ; ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಹೊಳ್ಳಿಸು: ಟೊಳ್ಳು ಮಾಡು; ಖಡುಗ: ಕತ್ತಿ; ಖಂಡಿಸು: ಕಡಿ, ಕತ್ತರಿಸು; ಕೊರಳು: ಗಂಟಲು; ದೆಸೆ: ದಿಕ್ಕು; ಸೇನೆ: ಸೈನ್ಯ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ತಿವಿ: ಚುಚ್ಚು; ಕಬಂಧ: ತಲೆಯಿಲ್ಲದ ದೇಹ, ಮುಂಡ; ಅತುಳ: ಬಹಳ; ಭುಜಬಲ: ಪರಾಕ್ರಮಿ;

ಪದವಿಂಗಡಣೆ:
ಉರುಳಿ +ಬೀಳುವ +ತಮ್ಮ +ತಲೆಗಳ
ತಿರುಹಿ +ರಿಪುಗಳನ್+ಇಡುವ +ಸಡಿಲದ
ಶಿರವನ್+ಅರಿಯದೆ +ಮುಂಡದ್+ಇದಿರಲಿ+ ಬೀದಿವ್+ಅರಿವರಿವ
ಹರಿಗೆ +ಹೊಳ್ಳಿಸೆ +ಖಡುಗ+ ಖಂಡಿಸೆ
ಕೊರಳರಿಯೆ +ದೆಸೆದೆಸೆಯ +ಸೇನೆಯೊಳ್
ಉರವಣಿಸಿ +ತಿವಿದರು +ಕಬಂಧದೊಳ್+ಅತುಳಭುಜಬಲರು

ಅಚ್ಚರಿ:
(೧) ಚೆಂಡಿನಂತೆ ಶಿರವನ್ನು ಆಡುವ ದೃಶ್ಯ – ಉರುಳಿ ಬೀಳುವ ತಮ್ಮ ತಲೆಗಳ ತಿರುಹಿ ರಿಪುಗಳನಿಡುವ

ನಿಮ್ಮ ಟಿಪ್ಪಣಿ ಬರೆಯಿರಿ