ಪದ್ಯ ೧೭: ಧರ್ಮಜನು ಹೇಗೆ ಕಂಡನು?

ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮಕುಟದ
ಲಲಿತರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು (ಭೀಷ್ಮ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಲ್ಲಿಯೇ ಪಕ್ಕದಲ್ಲಿ ಚತುರಂಗ ಸೈನ್ಯದ ನಡುವೆ, ಆಪ್ತರ ಸಮೂಹದಲ್ಲಿ ಕಿರೀಟ ರತ್ನಗಳ ಕಾಂತಿ ಝಗಝಗಿಸುತ್ತಿರಲು, ಆನೆ ಕುದುರೆ, ರಥ, ಕಾಲಾಳು ಸೈನಿಕರ ನಡುವಿನಲ್ಲಿ ನಿಂತಿರುವವನು ಧರ್ಮಜನು.

ಅರ್ಥ:
ಕೆಲ: ಪಕ್ಕ, ಮಗ್ಗುಲು; ತರುವಾಯ: ರೀತಿ, ಕ್ರಮ; ಆಹವ: ಯುದ್ಧ; ದಳ: ಗುಂಪು; ಮೇಳ: ಗುಂಪು; ಮಕುಟ: ಕಿರೀಟ; ಲಲಿತ: ಚೆಲುವು; ರತ್ನ: ಬೆಲೆಬಾಳುವ ಮಣಿ; ಪ್ರಭೆ: ಕಾಂತಿ; ಲಹರಿ: ಅಲೆ, ಕಾಂತಿ, ಪ್ರಭೆ; ಲಾವಣಿಗೆ: ಗುಂಪು, ಸಮೂಹ; ಮಿಗಲು: ಹೆಚ್ಚು; ಚಲ: ಚಲಿಸುವ; ತುರಂಗ: ಕುದುರೆ; ಭಾರಿ: ದೊಡ್ಡ; ಆನೆ: ಗಜ; ದಳ: ಗುಂಪು; ರಥ: ಬಂಡಿ; ಪದಾತಿ: ಕಾಲಾಳು, ಸೈನಿಕ; ಮಧ್ಯ: ನಡುವೆ; ಹೊಳಹು: ಪ್ರಕಾಶ; ಮಹೀಶ: ರಾಜ;

ಪದವಿಂಗಡಣೆ:
ಕೆಲದಲಾ +ತರುವಾಯಲ್+ಆಹವ
ದಳಲಿಗರ+ ಮೇಳದಲಿ +ಮಕುಟದ
ಲಲಿತ+ರತ್ನ+ಪ್ರಭೆಯ +ಲಹರಿಯ +ಲಾವಣಿಗೆ +ಮಿಗಲು
ಚಲ+ತುರಂಗದ +ಭಾರಿ+ಆನೆಯ
ದಳದ +ರಥದ +ಪದಾತಿ+ಮಧ್ಯದ
ಹೊಳಹಿನಲಿ +ನಿಂದಾತನ್+ಆತ +ಮಹೀಶ +ಧರ್ಮಜನು

ಅಚ್ಚರಿ:
(೧) ಧರ್ಮಜನ ಕಿರೀಟದ ವರ್ಣನೆ – ಮಕುಟದ ಲಲಿತರತ್ನಪ್ರಭೆಯ ಲಹರಿಯ ಲಾವಣಿಗೆ ಮಿಗಲು

ನಿಮ್ಮ ಟಿಪ್ಪಣಿ ಬರೆಯಿರಿ