ಪದ್ಯ ೪೯: ಹೊಸ ಜಗತ್ತು ಏಕೆ ಹುಟ್ಟಿತೆಂದೆನಿಸಿತು?

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದುವು ದಂತಿಯಲಿ ಪಡಿ
ಧರಣಿಯಾದವು ಛತ್ರಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ (ಭೀಷ್ಮ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ಸೈನ್ಯದ ಆನೆಗಳ ಮದಧಾರೆಯಿಂದ ಹೊಸ ಸಮುದ್ರಗಳಾದವು. ರಾಜರ ಕಿರೀಟಗಳ ಕಾಂತಿಯಿಂದ ಸೂರ್ಯ ಚಂದ್ರರು ಸಂಭವಿಸಿದರು. ಆನೆಗಳಿಂದ ಪರ್ವತ ಶ್ರೇಣಿಗಳಾದವು. ಛತ್ರ ಚಾಮರಗಳಿಂದ ಭೂಮಿಗೆ ಪ್ರತಿಯಾದ ಇನ್ನೊಂದು ಭೂಮಿಯೇ ನಿರ್ಮಾಣವಾಯಿತು, ಬ್ರಹ್ಮನ ಸೃಷ್ಟಿಯಲ್ಲಿ ಸೈನ್ಯದಿಂದ ಹೊಸ ಸೃಷ್ಟಿಯೊಂದ ಉಂಟಾಯಿತು.

ಅರ್ಥ:
ಸುರಿ: ಹರಿ; ಗಜ: ಆನೆ; ಮದ: ಮತ್ತು, ಅಮಲು; ಧಾರೆ: ವರ್ಷ; ಹೊಸ: ನವ; ಶರಧಿ: ಸಾಗರ; ಸಂಭವಿಸು: ಹುಟ್ಟು; ನೃಪ: ರಾಜ; ವರ: ಶ್ರೇಷ್ಠ; ಮಕುಟ: ಕಿರೀಟ; ಮಣಿ: ಬೆಲೆಬಾಳುವ ಮಣಿ; ಸೂರಿಯ: ಸೂರ್ಯ; ಗಿರಿ: ಬೆಟ್ಟ; ದಂತಿ: ಹಲ್ಲು; ಪಡಿ: ಪ್ರತಿಯಾದುದು; ಧರಣಿ: ಭೂಮಿ; ಛತ್ರ: ಕೊಡೆ; ಚಮರ: ಚಾಮರ; ಅರರೆ: ಆಶ್ಚರ್ಯದ ಸಂಕೇತ; ನೂತನ: ಹೊಸ; ಸೃಷ್ಟಿ: ಹುಟ್ಟು; ವಿರಿಂಚ: ಬ್ರಹ್ಮ; ಸೃಷ್ಟಿ: ಉತ್ಪತ್ತಿ, ಹುಟ್ಟು;

ಪದವಿಂಗಡಣೆ:
ಸುರಿವ +ಗಜ+ಮದಧಾರೆಯಲಿ +ಹೊಸ
ಶರಧಿಗಳು+ ಸಂಭವಿಸಿದವು+ ನೃಪ
ವರರ +ಮಕುಟದ +ಮಣಿಯೊಳ್+ಆದರು +ಚಂದ್ರ+ಸೂರಿಯರು
ಗಿರಿಗಳ್+ಆದುವು +ದಂತಿಯಲಿ +ಪಡಿ
ಧರಣಿಯಾದವು +ಛತ್ರ+ಚಮರದಲ್
ಅರರೆ +ನೂತನ +ಸೃಷ್ಟಿಯಾಯ್ತು +ವಿರಿಂಚ+ಸೃಷ್ಟಿಯಲಿ

ಅಚ್ಚರಿ:
(೧) ಹೊಸ, ನೂತನ – ಸಮನಾರ್ಥಕ ಪದ
(೨) ಉಪಮಾನಗಳ ಬಳಕೆ – ಸುರಿವ ಗಜಮದಧಾರೆಯಲಿ ಹೊಸಶರಧಿಗಳು ಸಂಭವಿಸಿದವು; ನೃಪ ವರರ ಮಕುಟದ ಮಣಿಯೊಳಾದರು ಚಂದ್ರಸೂರಿಯರು; ಗಿರಿಗಳಾದುವು ದಂತಿಯಲಿ;

ನಿಮ್ಮ ಟಿಪ್ಪಣಿ ಬರೆಯಿರಿ