ಪದ್ಯ ೭೦: ಶ್ರೀಕೃಷ್ಣನಿಗೆ ಯಾರು ದೃಷ್ಟಿ ತೆಗೆದರು?

ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ (ವಿರಾಟ ಪರ್ವ, ೧೧ ಸಂಧಿ, ೭೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ದರ್ಶನಾಕಾಂಕ್ಷಿಗಳಾಗಿ ಮೇಲೆ ನುಗ್ಗಿ ಬಂದ ಜನರನ್ನು ಕೈಯಲ್ಲಿ ಕೋಲನ್ನು ಹಿಡಿದ ಕಾವಲುಗಾರರು ಹೊಡೆಯಲು, ಶ್ರೀಕೃಷ್ಣನು ಅವರನ್ನು ಬಯ್ದು ಸರ್ವರಿಗೂ ದರ್ಶನವನ್ನಿತ್ತನು. ಉಪ್ಪರಿಗೆಯ ಮೇಲೆ ನಿಂತ ತರುಣಿಯರು ತಮ್ಮ ಓರೆನೋಟಗಳಿಂದ ಅವನಿಗೆ ದೃಷ್ಟಿಯನ್ನು ತೆಗೆದರು. ಶ್ರೀಕೃಷ್ಣನು ಅರಮನೆಗೆ ಆಗಮಿಸಿದನು.

ಅರ್ಥ:
ಬೀಳು: ಎರಗು; ಮಂದಿ: ಜನ; ಕೈಗೋಲಿ: ಕಾವಲುಗಾರ; ಅಪ್ಪಳಿಸು: ಹೊಡೆ; ಲಕ್ಷ್ಮೀಲೋಲ: ಲಕ್ಷ್ಮಿಯ ಪ್ರಿಯಕರ; ಜರೆ: ಬಯ್ಯು; ಕಾಣಿಸು: ತೋರು; ಪುರಜನ: ನಗರದ ಜನ; ಮೇಲುನೆಲೆ: ಮಹಡಿ; ಉಪ್ಪರಿಗೆ: ಮಹಡಿ, ಸೌಧ; ವರ: ಶ್ರೇಷ್ಠ; ಬಾಲೆ: ಯುವಕಿ; ಕಡೆ: ತುದಿ; ಕಂಗಳು: ಕಣ್ಣು; ಎಸೆ: ತೋರು; ನಿವಾಳಿ: ದುಷ್ಟದೃಷ್ಟಿ ನಿವಾರಿಸುವುದು; ಕೈಕೊಳು: ನೆರವೇರಿಸು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಮೇಲೆ +ಬೀಳುವ +ಮಂದಿಯನು +ಕೈ
ಗೋಲಿನವರ್+ಅಪ್ಪಳಿಸೆ +ಲಕ್ಷ್ಮೀ
ಲೋಲನ್+ಅವದಿರ +ಜರೆದು +ಕಾಣಿಸಿಕೊಳುತ +ಪುರಜನವ
ಮೇಲು +ನೆಲೆ+ಉಪ್ಪರಿಗೆಗಳ+ವರ
ಬಾಲೆಯರ +ಕಡೆಗಂಗಳ್+ಎಸೆವ +ನಿ
ವಾಳಿಗಳ+ ಕೈಕೊಳುತ +ಹೊಕ್ಕನು +ರಾಜಮಂದಿರವ

ಅಚ್ಚರಿ:
(೧) ಕೃಷ್ಣನು ಭಕ್ತವತ್ಸಲ ಎಂದು ತೋರುವ ಪರಿ – ಲಕ್ಷ್ಮೀಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ; ಬಾಲೆಯರ ಕಡೆಗಂಗಳೆಸೆವ ನಿವಾಳಿಗಳ ಕೈಕೊಳುತ

ನಿಮ್ಮ ಟಿಪ್ಪಣಿ ಬರೆಯಿರಿ