ಪದ್ಯ ೩: ಸೂರ್ಯೋದಯವು ಹೇಗೆ ಕಂಡಿತು?

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲೆ ಸಿರಿಯ ಸೂರೆಯ
ತರಿಸಿದನು ರಿಪುರಾಯರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ (ವಿರಾಟ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕಮಲದ ಪರಿಮಳಕ್ಕೆ ಉಡುಗೊರೆಯಾಗಿ ದುಂಬಿಯನ್ನು ಕಳಿಸಿದನು, ಶತ್ರು ಪಕ್ಷಕ್ಕೆ ಸೇರಿದ ಚಂದ್ರಕಾಂತ ಶಿಲೆಗೆ ಆಶ್ಚರ್ಯಕರವಾದ ಪರಾಭವವನ್ನು ಕೊಟ್ಟನು, ಚಕ್ರವಾಕ ಪಕ್ಷಿಗಳ ಬಂಧನವನ್ನು ಕೊನೆಗೊಳಿಸಿದನು, ಕೋಪದಿಂದ ಶತ್ರುರಾಜನ ಗೆಳತಿಯಾದ ಕನ್ನೈದಿಲೆಯ ಹರ್ಷವನ್ನು ಸೂರೆಗೊಂಡನು, ರಾತ್ರಿಯ ರಾಜ್ಯವನ್ನು ಕೊನೆಗೊಳಿಸಿ ಪೂರ್ವಪರ್ವತದ ಶಿಖರದ ಮೇಲೆ ಕುಳಿತು ಸೂರ್ಯನು ಓಲಗವನ್ನಿತ್ತನು.

ಅರ್ಥ:
ಸರಸಿಜ: ಕಮಲ; ಪರಿಮಳ: ಸುಗಂಧ; ತುಂಬಿ: ದುಂಬಿ; ಬರವ: ಆಗಮನ; ಕೊಡು: ನೀಡು; ಚಂದ್ರಕಾಂತ: ಶಶಿಕಾಂತ ಶಿಲೆ; ಬೆರಗು: ವಿಸ್ಮಯ, ಸೋಜಿಗ; ಜಕ್ಕವಕ್ಕಿ: ಎಣೆವಕ್ಕಿ, ಚಕ್ರವಾಕ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು, ನಿವಾರಿಸು; ಕೆರಳು: ಕೋಪಗೊಳ್ಳು; ಸಿರಿ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ತರಿಸು: ಬರೆಮಾಡು; ರಿಪು: ವೈರಿ; ರಾಯ: ರಾಜ; ಒರಸು: ನಾಶಮಾಡು; ರವಿ: ಭಾನು; ಮೂಡಣ: ಪೂರ್ವ; ಅದ್ರಿ: ಬೆಟ್ಟ; ಓಲಗ: ಸೇವೆ, ದರ್ಬಾರು;

ಪದವಿಂಗಡಣೆ:
ಸರಸಿಜದ+ ಪರಿಮಳಕೆ +ತುಂಬಿಯ
ಬರವ +ಕೊಟ್ಟನು +ಚಂದ್ರಕಾಂತಕೆ
ಬೆರಗನಿತ್ತನು+ ಜಕ್ಕವಕ್ಕಿಯ +ಸೆರೆಯ +ಬಿಡಿಸಿದನು
ಕೆರಳಿ+ ನೈದಿಲೆ+ ಸಿರಿಯ +ಸೂರೆಯ
ತರಿಸಿದನು +ರಿಪುರಾಯ+ರಾಜ್ಯವನ್
ಒರಸಿದನು +ರವಿ+ ಮೂಡಣ+ಅದ್ರಿಯೊಳ್+ ಇತ್ತನ್+ಓಲಗವ

ಅಚ್ಚರಿ:
(೧) ಸೂರ್ಯೋದಯದ ಬಹು ಸೊಗಸಾದ ವರ್ಣನೆ
(೨) ನೈದಿಲೆಯು ಮುದುಡಿತು ಎಂದು ಹೇಳಲು – ಕೆರಳಿ ನೈದಿಲೆ ಸಿರಿಯ ಸೂರೆಯ ತರಿಸಿದನು
(೩) ರಾತ್ರಿಯನ್ನು ಹೋಗಲಾಡಿಸಿದನು ಎಂದು ಹೇಳಲು – ರಿಪುರಾಯರಾಜ್ಯವನೊರಸಿದನು
(೪) ಕಮಲವನ್ನು ಅರಳಿಸಿದನು ಎಂದು ಹೇಳಲು – ಸರಸಿಜದ ಪರಿಮಳಕೆ ತುಂಬಿಯ ಬರವ ಕೊಟ್ಟನು

ನಿಮ್ಮ ಟಿಪ್ಪಣಿ ಬರೆಯಿರಿ