ಪದ್ಯ ೪: ಉತ್ತರನು ದೂತರಿಗೆ ಏನು ಹೇಳಿದನು?

ಎನಲು ನೀನೇ ಬಲ್ಲೆ ಕರಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಮಿಸುತ್ತಿರ್ದನತ್ತಲು
ಜನಪ ಕುಂತೀಸುತನ ಸಹಿತೈತಂದನರಮನೆಗೆ (ವಿರಾಟ ಪರ್ವ, ೧೦ ಸಂಧಿ, ೪ ಪದ್ಯ)

ತಾತ್ಪರ್ಯ:
ಅರ್ಜುನನು ಅಪ್ಪಣೆ ನೀಡಲು, ಉತ್ತರನು ನೀನೇ ಬಲ್ಲೆ ಒಳ್ಳೆಯದು ಹಾಗೇ ಮಾಡುತ್ತೇನೆಂದು ಹೇಳಿ ದೂತರನ್ನು ಕರೆದು, ನಮ್ಮ ತಂದೆಯ ಬಳಿಗೆ ಹೋಗಿ ನಿಮ್ಮ ಮಗನು ಕೌರವ ಸೈನ್ಯವನ್ನು ಜಯಿಸಿದೆನೆಂದು ಹೇಳಿರಿ ಎಂದು ಅಪ್ಪಣೆ ಕೊಟ್ಟನು, ಇತ್ತ ವಿರಾಟನು ಕಂಕನೊಡನೆ ಅರಮನೆಗೆ ಬಂದನು.

ಅರ್ಥ:
ಬಲ್ಲೆ: ತಿಳಿದಿರುವೆ; ದೂತ: ಸೇವಕ; ಕರೆ: ಬರೆಮಾಡು; ತನಯ: ಕುಮಾರ, ಪುತ್ರ; ಪೇಳು: ಹೇಳು; ಜನಕ: ತಂದೆ; ಪೋಗಿ: ಹೋಗಿ; ನಿಯಮ: ಕಟ್ಟುಪಾಡು; ಜನಪ: ರಾಜ; ಸುತ: ಮಗ; ಐತಂದು: ಬಂದು ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಎನಲು+ ನೀನೇ +ಬಲ್ಲೆ +ಕರ+ಲೇ
ಸೆನುತ +ದೂತರ +ಕರೆದು +ಮತ್ಸ್ಯನ
ತನಯ +ಕೌರವ +ಬಲವ +ಜಯಿಸಿದನೆಂದು +ಪೇಳುವುದು
ಜನಕನಲ್ಲಿಗೆ +ಪೋಗಿ+ಎಂದ್
ಆತನು +ನಿಯಮಿಸುತ್ತಿರ್ದನ್+ಅತ್ತಲು
ಜನಪ +ಕುಂತೀಸುತನ +ಸಹಿತ್+ಐತಂದನ್+ಅರಮನೆಗೆ

ಅಚ್ಚರಿ:
(೧) ತನಯ, ಸುತ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ