ಪದ್ಯ ೪೧: ಅಶ್ವತ್ಥಾಮನು ಅರ್ಜುನನಿಗೆ ಹೇಗೆ ಉತ್ತರಿಸಿದ?

ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದೊಳು
ಗರ್ಜಿಸಿದೊಡೇನಹುದೆನುತೆ ಗುರುಸೂನು ಹರುಷದೊಳು
ನಿರ್ಜರರು ಮಝ ಪೂತುರೆನಲಾ
ವರ್ಜಿಸಿದ ತಿರುವಿನೊಳು ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ (ವಿರಾಟ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಉತ್ತರಿಸುತ್ತಾ, ಅರ್ಜುನನ ಧನುರ್ವಿದ್ಯೆಯನ್ನು ಅರಿಯಲು ಸಾಧ್ಯವೇ? ಸ್ವಾಭಿಮಾನದಿಂದ ಗರ್ಜಿಸಿದರೆ ಏನು ಪ್ರಯೋಜನ? ಎಂದು ಹೇಳಿ ಸಂತೋಷದಿಂದ ದೇವತೆಗಳೂ, ಹೊಗಳುವಂತೆ, ಬಿಲ್ಲಿನ ಹೆದೆಯನ್ನು ಹದಮಾಡಿ, ಶತ್ರುಗಳನ್ನು ಜಯಿಸಿದನಾದ ಅರ್ಜನನನ್ನು ಬಾಣಗ್ಲೀಮ್ದ ಹೊಡೆಯಲು, ಆಕಾಶವೆಲ್ಲಾ ಬಾಣಮಯವಾಯಿತು.

ಅರ್ಥ:
ಶರ: ಬಾಣ; ವಿವರ: ಹರಡು, ವಿಸ್ತಾರ; ದುರ್ಜಯ: ಜಯಿಸಲಶಕ್ಯನಾದವ; ಗರುವ: ಶ್ರೇಷ್ಠ; ಗರ್ಜಿಸು: ಕೂಗು, ಆರ್ಭಟಿಸು; ಗುರು: ಆಚಾರ್ಯ; ಸೂನು: ಮಗ; ಹರುಷ: ಸಂತೋಷ; ನಿರ್ಜರ: ದೇವತೆ; ಮಝ: ಭಲೇ; ಪೂತು: ಕೊಂಡಾಟದ ಮಾತು; ವರ್ಜಿಸು: ಬಿಡು, ತ್ಯಜಿಸು; ತಿರುವು: ಬಿಲ್ಲಿನ ಹಗ್ಗ, ಹೆದೆ; ಸಂಗರ: ಯುದ್ಧ; ನಿರ್ಜಿತ: ಸೋಲಿಲ್ಲದವನು; ಅರಿ: ವೈರಿ; ಕಣೆ: ಬಾಣ; ಕವಿ: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಅರ್ಜುನನ+ ಶರವಿದ್ಯೆ +ವಿವರಿಸೆ
ದುರ್ಜಯವಲಾ +ಗರುವತನದೊಳು
ಗರ್ಜಿಸಿದೊಡ್+ಏನಹುದೆನುತೆ +ಗುರುಸೂನು +ಹರುಷದೊಳು
ನಿರ್ಜರರು +ಮಝ +ಪೂತುರೆನಲಾ
ವರ್ಜಿಸಿದ +ತಿರುವಿನೊಳು +ಸಂಗರ
ನಿರ್ಜಿತಾರಿಯನ್+ಎಸಲು +ಕಣೆಗಳು+ ಕವಿದವ್+ಅಂಬರಕೆ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗರುವತನದೊಳು ಗರ್ಜಿಸಿದೊಡೇನಹುದೆನುತೆ ಗುರುಸೂನು
(೨) ಅರ್ಜುನನನ್ನು ಹೊಗಳುವ ಪರಿ – ಸಂಗರನಿರ್ಜಿತಾರಿ

ನಿಮ್ಮ ಟಿಪ್ಪಣಿ ಬರೆಯಿರಿ