ಪದ್ಯ ೨೫: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದ?

ಕಂಡುದಳವಿ ವಿರೋಧಿಗೆಮಗೆಯು
ಕೊಂಡುದೇ ಬಲುಗೈದು ಮನಮುಂ
ಕೊಂಡು ಹೊಕ್ಕುದು ಕಳನದಲ್ಲದೆ ಪಾಂಡುಸುತರೊಡನೆ
ಉಂಡು ಮೇಣುಟ್ಟೊಲಿದು ಬದುಕುವ
ಭಂಡತನವೆಮಗುಂಟೆ ವೈರವ
ಕೊಂಡೆಸಗಬೇಕೆಂದು ನುಡಿದನು ಕೌರವರಾಯ (ವಿರಾಟ ಪರ್ವ, ೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶತ್ರುವಿಗೂ ನಮಗೂ ರಣರಂಗದಲ್ಲಿ ಮುಖಾಮುಖಿಯಾಗಿದೆ. ನಾವು ಮಹಾಸ್ತ್ರಗಳನ್ನೇ ಹಿಡಿದಿದ್ದೇವೆ. ಮನಸ್ಸು ಯುದ್ಧಾತುರದಿಂದ ರಣರಂಗದಲ್ಲಿದೆ. ಪಾಂಡವರೊಡನೆ ಒಂದಾಗಿ ಉಂಡು ಉಟ್ಟು ಬದುಕುವ ಭಂಡತನ ನಮಗಿಲ್ಲ. ಅವರ ಮೇಲೆ ವೈರವನ್ನೇ ತಳೆದು ಯುದ್ಧಮಾಡಬೇಕು, ಎಂದು ಕೌರವನು ಭೀಷ್ಮನಿಗೆ ಹೇಳಿದನು.

ಅರ್ಥ:
ಅಳವಿ: ಶಕ್ತಿ; ಕಂಡು: ನೋಡು; ವಿರೋಧಿ: ಶತ್ರು, ವೈರಿ; ಬಲುಗೈ: ಪರಾಕ್ರಮ; ಮನ: ಮನಸ್ಸು; ಹೊಕ್ಕು: ಓತ, ಸೇರು; ಕಳ: ರಣರಂಗ; ಸುತ: ಮಕ್ಕಳು; ಉಂಡು: ತಿನ್ನು; ಮೇಣು: ಮತ್ತು, ಅಥವಾ; ಬದುಕು: ಜೀವಿಸು; ಭಂಡತನ: ನಾಚಿಕೆಯಿಲ್ಲದಿರುವಿಕೆ; ಒಲಿ: ಸಮ್ಮತಿಸು; ಬದುಕು: ಜೀವಿಸು; ಭಂಡತನ: ನಾಚಿಕೆಯಿಲ್ಲದಿರುವಿಕೆ, ನಿರ್ಲಜ್ಜೆ; ವೈರ: ಶತ್ರು; ನುಡಿ: ಮಾತು; ರಾಯ: ರಾಜ;

ಪದವಿಂಗಡಣೆ:
ಕಂಡುದ್+ಅಳವಿ +ವಿರೋಧಿಗ್+ಎಮಗೆಯು
ಕೊಂಡುದೇ+ ಬಲುಗೈದು+ ಮನಮುಂ
ಕೊಂಡು +ಹೊಕ್ಕುದು +ಕಳನದಲ್ಲದೆ +ಪಾಂಡುಸುತರೊಡನೆ
ಉಂಡು +ಮೇಣ್+ಉಟ್ಟೊಲಿದು +ಬದುಕುವ
ಭಂಡತನವ್+ಎಮಗುಂಟೆ +ವೈರವ
ಕೊಂಡೆಸಗ+ಬೇಕೆಂದು +ನುಡಿದನು +ಕೌರವರಾಯ

ಅಚ್ಚರಿ:
(೧) ಕಂಡು, ಉಂಡು, ಕೊಂಡು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ