ಪದ್ಯ ೩೪: ಅರ್ಜುನನು ಉತ್ತರನಿಗೆ ಯಾವ ಕೆಲಸವನ್ನು ಹೇಳಿದನು?

ಮರನನೇರಿದರೊಳಗೆ ಪಾಂಡವ
ರಿರಿಸಿಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಿನ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ (ವಿರಾಟ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಶಮೀ ವೃಕ್ಷದ ಬಳಿ ಬಂದು, ಈ ಮರವನ್ನು ಹತ್ತು, ಪಾಂಡವರು ಈ ಮರದಲ್ಲಿ ತಮ್ಮ ಆಯುಧಗಳನ್ನಿಟ್ಟು ಹೋಗಿದ್ದಾರೆ, ನೀನು ಜೀವವನ್ನು ಗಟ್ಟಿ ಮಾಡಿಕೊಂಡು ಅವನ್ನು ನನಗೆ ಕೊಡು ಎಂದು ಹೆಳಲು, ಉತ್ತರನು ಮರದ ಮೇಲಿದ್ದುದನ್ನು ನೋಡಿ, ಇದೇನು ಹೆಣವು ನೇತಾಡುವ ಹಾಗಿದೆ, ರಾಜಕುಮಾರರು ಇದನ್ನು ಮುಟ್ಟುವುದು ಉಚಿತವಲ್ಲ ಬೇರೇನಾದರು ಕೆಲಸವನ್ನು ಹೇಳು ಎಂದು ನುಡಿದನು.

ಅರ್ಥ:
ಮರ: ತರು; ಏರು: ಮೇಲೆ ಹೋಗು; ಇರಿಸು: ಇಡು; ಕೈದು: ಆಯುಧ; ಮಿಗೆ: ಮತ್ತು, ಅಧಿಕವಾಗಿ; ಹರಣ: ಜೀವ, ಪ್ರಾಣ; ಭರಣ: ಕಾಪಾಡುವುದು, ರಕ್ಷಣೆ; ಕ್ಷಮೆ: ಸೈರಣೆ, ತಾಳ್ಮೆ; ನೀಡು: ಕೊಡು; ಅರಸು: ರಾಜ; ಮಕ್ಕಳು: ಕುಮಾರರು; ಮುಟ್ಟು: ತಾಗು; ಅನುಚಿತ: ಸರಿಯಲ್ಲದ; ಹೆಣ: ಜೀವವಿಲ್ಲದ ದೇಹ; ವರ: ಶ್ರೇಷ್ಠ; ಕೆಲಸ: ಕಾರ್ಯ; ಹೇಳು: ತಿಳಿಸು;

ಪದವಿಂಗಡಣೆ:
ಮರನನೇರ್+ಇದರೊಳಗೆ +ಪಾಂಡವರ್
ಇರಿಸಿಹೋದರು +ಕೈದುಗಳ+ ಮಿಗೆ
ಹರಣ +ಭರಣ +ಕ್ಷಮೆಗಳಲಿ +ನೀನೆನಗೆ+ ನೀಡೆನಲು
ಅರಸು +ಮಕ್ಕಳು +ಮುಟ್ಟಲ್+ಅನುಚಿತ
ಮರದ +ಮೇಲಿನ +ಹೆಣನ್+ಇದೇನೈ
ವರ+ ಬೃಹನ್ನಳೆ +ಮತ್ತೆ +ಕೆಲಸವ+ ಹೇಳು +ತನಗೆಂದ

ಅಚ್ಚರಿ:
(೧) ಹರಣ, ಭರಣ – ಪ್ರಾಸ ಪದ
(೨) ಉತ್ತರನ ಹಿಂಜರಿಕೆ – ಅರಸು ಮಕ್ಕಳು ಮುಟ್ಟಲನುಚಿತ ಮರದ ಮೇಲಿನ ಹೆಣನಿದೇನೈ

ನಿಮ್ಮ ಟಿಪ್ಪಣಿ ಬರೆಯಿರಿ