ಪದ್ಯ ೯: ಉತ್ತರನು ಹೇಗೆ ಭಯಭೀತನಾದನು?

ಸಾರಿ ಬರಬರಲವನ ತನುಮಿಗೆ
ಭಾರಿಸಿತು ಮೈಮುರಿದು ರೋಮನ್ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ (ವಿರಾಟ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ರಥವು ಮುಂದಕ್ಕೆ ಹೋಗುತ್ತಲೇ ಇತ್ತು, ಉತ್ತರನ ಮೈ ಜಡವಾಯಿತು, ಮೈ ಕುಗ್ಗಿತು, ಭಯದಿಂದ ಕೂದಲು ನೆಟ್ಟಗಾದವು, ಮೈ ಬಿಸಿಯಾಯಿತು, ಅವಯವಗಳು ನಡುಗಿದವು. ಭಯದ ಹೆಚ್ಚಳದಿಂದ ಅಂಗುಳು, ತುಟಿ ಒಣಗಿದವು. ಕಣ್ಣಿನ ರೆಪ್ಪೆ ಸೀದು ಹೋಯಿತು ಸುಕುಮಾರ ಉತ್ತರನು ಕೈಗಳಿಂದ ಮುಖವನ್ನು ಮುಚ್ಚಿಕೊಂಡನು.

ಅರ್ಥ:
ಸಾರಿ: ಬಾರಿ, ಸರತಿ; ಬರಲು: ಆಗಮಿಸಲು; ತನು: ದೇಹ; ಭಾರಿಸು: ಅಪ್ಪಳಿಸು; ಮೈ: ತನು, ದೇಹ; ರೋಮ: ಕೂದಲು; ವಿಕಾರ: ಬದಲಾವಣೆ; ಘನ: ಗಟ್ಟಿ, ಭಾರ; ಕಾಹೇರು: ಉದ್ವೇಗಗೊಳ್ಳು; ಅವಯವ: ದೇಹದ ಅಂಗ; ನಡುಗು: ಕಂಪಿಸು; ಡೆಂಡಣಿಸು: ಕಂಪಿಸು, ಕೊರಗು; ಭೂರಿ:ಹೆಚ್ಚು, ಅಧಿಕ; ಭಯ: ಹೆದರಿಕೆ; ತಾಪ: ಕಾವು; ತಾಳಿಗೆ: ಗಂಟಲು; ನೀರು: ಜಲ; ತುಟಿ: ಅಧರ; ಸುಕುಮಾರ: ಪುತ್ರ; ಎವೆ: ಕಣ್ಣಿನ ರೆಪ್ಪೆ; ಸೀಯು: ಕರಕಲಾಗು; ಕರ: ಹಸ್ತ; ಮುಚ್ಚು: ಮರೆಮಾಡು; ಮುಖ: ಆನನ;

ಪದವಿಂಗಡಣೆ:
ಸಾರಿ +ಬರಬರಲ್+ಅವನ +ತನುಮಿಗೆ
ಭಾರಿಸಿತು+ ಮೈಮುರಿದು+ ರೋಮ+ವಿ
ಕಾರ +ಘನ +ಕಾಹೇರಿತ್+ಅವಯವ +ನಡುಗಿ +ಡೆಂಡಣಿಸಿ
ಭೂರಿಭಯ +ತಾಪದಲಿ +ತಾಳಿಗೆ
ನೀರುದೆಗೆದುದು +ತುಟಿ+ಒಣಗಿ+ ಸುಕು
ಮಾರ +ಕಣ್ಣೆವೆ +ಸೀಯೆ +ಕರದಲಿ+ ಮುಚ್ಚಿದನು +ಮುಖವ

ಅಚ್ಚರಿ:
(೧) ಉತ್ತರನ ಭೀತಿಯನ್ನು ವರ್ಣಿಸುವ ಪರಿ – ಭೂರಿಭಯ ತಾಪದಲಿ ತಾಳಿಗೆನೀರುದೆಗೆದುದು ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ

ನಿಮ್ಮ ಟಿಪ್ಪಣಿ ಬರೆಯಿರಿ