ಪದ್ಯ ೫೨: ಧರ್ಮರಾಯನೇಕೆ ಬೆದರಿದನು?

ತೋಳುಗಳ ಹಿಡಿದೆಳೆಯೆ ಭೀಮನು
ಕಾಲುಕಾಲುಗಳಿಂದ ಘಟ್ಟಿಸೆ
ಬೀಳುತೇಳುತ ಹೋರುತಿದ್ದರು ಅಸಮ ಪಟುಭಟರು
ಕೇಳುತಾರ್ಭಟ ಮಲ್ಲರಿಬ್ಬರ
ಏಳಿಗೆಯ ಕದನವನು ಕಾಣುತ
ಕಾಲನಂದನನಾಗ ಬೆದರಿದನಧಿಕ ಚಿಂತೆಯಲಿ (ವಿರಾಟ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಜೀಮೂತನು ತೋಳುಗಳನ್ನು ಹಿಡಿದು ಎಳೆಯಲು, ಭೀಮನು ಕಾಲುಗಳಿಂದ ಹೊಡೆದನು. ಬೀಳುತ್ತಾ, ಏಳುತ್ತಾ ಇಬ್ಬರೂ ಜೋರಾಗಿ ಹೋರಾಡುತ್ತಿದ್ದರು. ಅವರ ಆರ್ಭಟವನ್ನು ಕೇಳುತ್ತಾ ಮಲ್ಲಯುದ್ಧವನ್ನು ನೋಡುತ್ತಾ ಧರ್ಮರಾಯನು ಚಿಂತಿಸಿ ಬೆದರಿದನು.

ಅರ್ಥ:
ತೋಳು: ಬಾಹು; ಹಿಡಿ: ಬಂಧಿಸು; ಎಳೆ: ತನ್ನ ಕಡೆಗೆ ಸೆಳೆದುಕೊ; ಕಾಲು: ಪಾದ; ಘಟ್ಟಿಸು: ಹೊಡೆ; ಬೀಳು: ಜಾರು; ಏಳು: ಮೇಲೇಳು; ಹೋರು: ಜಗಳ, ಕಲಹ; ಅಸಮ: ಸಮವಲ್ಲದ; ಪಟುಭಟ: ಪರಾಕ್ರಮಿ; ಕೇಳು: ಆಲಿಸು; ಆರ್ಭಟ: ಗರ್ಜನೆ; ಮಲ್ಲ: ಜಟ್ಟಿ; ಏಳಿಗೆ: ಬೆಳವಣಿಗೆ; ಕದನ: ಯುದ್ಧ; ಕಾಣು: ವೀಕ್ಷಿಸು; ಕಾಲ: ಯಮ; ನಂದನ: ಮಗ; ಬೆದರು: ಹೆದರು; ಅಧಿಕ: ಹೆಚ್ಚು; ಚಿಂತೆ: ಯೋಚನೆ;

ಪದವಿಂಗಡಣೆ:
ತೋಳುಗಳ+ ಹಿಡಿದೆಳೆಯೆ +ಭೀಮನು
ಕಾಲುಕಾಲುಗಳಿಂದ +ಘಟ್ಟಿಸೆ
ಬೀಳುತ್+ಏಳುತ +ಹೋರುತಿದ್ದರು +ಅಸಮ +ಪಟುಭಟರು
ಕೇಳುತ್+ಆರ್ಭಟ +ಮಲ್ಲರಿಬ್ಬರ
ಏಳಿಗೆಯ +ಕದನವನು +ಕಾಣುತ
ಕಾಲನಂದನನ್+ಆಗ +ಬೆದರಿದನ್+ಅಧಿಕ+ ಚಿಂತೆಯಲಿ

ಅಚ್ಚರಿ:
(೧) ಬೀಳುತೇಳುತ, ಕಾಲುಕಾಲು, ಪಟುಭಟ – ಪದಗಳ ಬಳಕೆ
(೨) ಕ ಕಾರದ ತ್ರಿವಳಿ ಪದ – ಕದನವನು ಕಾಣುತ ಕಾಲನಂದನನಾಗ

ನಿಮ್ಮ ಟಿಪ್ಪಣಿ ಬರೆಯಿರಿ