ಪದ್ಯ ೮: ಜೀಮೂತನು ದುರ್ಯೋಧನನಿಗೆ ಏನು ಹೇಳಿದನು?

ಹೊಡೆದು ಭುಜವನು ಹುಂಕರಿಸಿ ಕಿಡಿ
ಯಿಡುವ ಮೀಸೆಯ ತಿದ್ದುತೊಲವಿನ
ಲಡಿಗಡಿಗೆಯಾರ್ಭಟಿಸಿ ನಿಂದನು ಮಲ್ಲ ಜೀಮೂತ
ನುಡಿ ನೃಪತಿ ಹದನೇನು ರಿಪುಗಳ
ಮಡುಹಿ ಬರಲೋ ಮೇಣು ಕೈಸೆರೆ
ವಿಡಿದು ತರ್ಲೋ ಏನು ಹದನೆಲೆ ನೃಪತಿ ಹೇಳೆಂದ (ವಿರಾಟ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಮಲ್ಲರ ಮುಖಂಡನಾದ ಜೀಮೂತನು ತನ್ನ ತೋಳನ್ನು ತಟ್ಟಿ, ಹೂಂಕರಿಸಿ ಕಿಡಿಯಿಡುವ ಮೀಸೆಗಳನ್ನು ತಿದ್ದಿ, ಹೆಜ್ಜೆ ಹೆಜ್ಜೆಗೂ ಆರ್ಭಟಿಸಿ ಕೌರವನಿಗೆ ವಂದಿಸಿ ಪ್ರಭು ಏನಪ್ಪಣೆ, ಶತ್ರುಗಳನ್ನು ಸಂಹರಿಸಿ ಬರಲೋ ಅಥವ ಬಂಧಿಸಿ ತರಲೋ ಏನಪ್ಪಣೆ ಎಂದು ಕೇಳಿದನು.

ಅರ್ಥ:
ಹೊಡೆ: ಏಟು, ಹೊಡೆತ; ಭುಜ: ಬಾಹು; ಹೂಕರಿಸು: ಹೂಂಕಾರ; ಕಿಡಿ: ಬೆಂಕಿ; ತಿದ್ದು: ಸರಿಮಾಡು; ಒಲವು: ಪ್ರೀತಿ; ಅಡಿಗಡಿಗೆ: ಮತ್ತೆ ಮತ್ತೆ; ಆರ್ಭಟಿಸು: ಗರ್ಜಿಸು; ನಿಂದನು: ನಿಲ್ಲು; ಮಲ್ಲ: ಜಟ್ಟಿ; ನುಡಿ: ಮಾತು; ನೃಪತಿ: ರಾಜ; ಹದ: ಸ್ಥಿತಿ; ರಿಪು: ವೈರಿ; ಮಡುಹು: ಕೊಲ್ಲು, ಸಾಯಿಸು; ಮೇಣು: ಅಥವ; ಕೈಸೆರೆ: ಬಂಧಿಸು; ತರು: ಬರೆಮಾಡು;

ಪದವಿಂಗಡಣೆ:
ಹೊಡೆದು +ಭುಜವನು +ಹುಂಕರಿಸಿ+ ಕಿಡಿ
ಯಿಡುವ +ಮೀಸೆಯ +ತಿದ್ದುತ್+ಒಲವಿನಲ್
ಅಡಿಗಡಿಗೆ+ಆರ್ಭಟಿಸಿ+ ನಿಂದನು +ಮಲ್ಲ +ಜೀಮೂತ
ನುಡಿ +ನೃಪತಿ +ಹದನೇನು+ ರಿಪುಗಳ
ಮಡುಹಿ+ ಬರಲೋ+ ಮೇಣು+ ಕೈಸೆರೆ
ವಿಡಿದು +ತರಲೋ+ ಏನು+ ಹದನೆಲೆ+ ನೃಪತಿ+ ಹೇಳೆಂದ

ಅಚ್ಚರಿ:
(೧) ಬರಲೋ, ತರಲೋ – ಪ್ರಾಸ ಪದ

ಪದ್ಯ ೭: ಮಲ್ಲರ ಪರಾಕ್ರಮಗಳೇನು?

ಉಡಿದನೊಬ್ಬನು ಗಜದ ದಾಡೆಯ
ಮಡಿಯಲನುಗೈಸಿದನು ಕರಿಯನು
ಹಿಡಿದವನು ತಾನಿವನಘಾಟದ ಸಿಡಿಲನಡಹಾಯ್ದು
ಒಡನೆ ಬೊಬ್ಬಿಡುವನು ಮಹಾಹವ
ತೊಡರಿಚುವರಿಲ್ಲಾಯೆನುತ ನೆರೆ
ಮಿಡುಕುವನು ತಾನೀತನೆಂಬನು ಭೂಪ ಕೇಳೆಂದ (ವಿರಾಟ ಪರ್ವ, ೪ ಸಂಧಿ, ೭ ಪದ್ಯ)

ತಾತ್ಪರ್ಯ:
ಈ ಮಹಾ ಪರಾಕ್ರಮಶಾಲಿಗಳಲ್ಲಿ ಒಬ್ಬನು ತನ್ನ ಕೈಗಳಿಂದ ಕಾಡಾನೆಯ ದಂತವನ್ನು ಕಿತ್ತವನು, ಒಬ್ಬನು ಕೈಯಿಂದ ಆನೆಯನ್ನು ಕೊಂದವನು, ಇನ್ನೊಬ್ಬನು ಸಿಡಿಲನ್ನು ಹಿಡಿದು ಗರ್ಜಿಸುವವನು, ತಮ್ಮೊಡನೆ ಯುದ್ಧಕ್ಕೆ ಬರುವವರೇ ಇಲ್ಲವಲ್ಲ ಎಂದೊಬ್ಬನು ದುಃಖಿಸುವವನು ಎಂದು ದೂತರು ಹೇಳಿದರು.

ಅರ್ಥ:
ಉಡಿ: ಮುರಿ; ಗಜ: ಆನೆ; ದಾಡೆ: ಹಲ್ಲು, ದಂತ; ಮಡಿ: ಸಾವು; ಕರಿ: ಆನೆ; ಹಿಡಿ: ಬಂಧಿಸು; ಸಿಡಿಲು: ಎರಡು ಮೋಡಗಳ ಗುಂಪಿನ ನಡುವಿನ ಘರ್ಷಣೆಯ ಫಲವಾಗಿ ಜೋರಾದ ಶಬ್ದದೊಂದಿಗೆ ಗೋಚರಿಸುವ ವಿದ್ಯುತ್ಪ್ರವಾಹ; ಅಶನಿ; ಘಾಟ: ಸೇರಿಕೆ; ಅಘಾಟ: ಅದ್ಭುತ, ಅತಿಶಯ; ಹಾಯ್ದು: ಹೊಡೆ; ಒಡನೆ: ಕೂಡಲೆ; ಬೊಬ್ಬಿಡು: ಗರ್ಜಿಸು; ಆಹವ: ಯುದ್ಧ; ತೊಡರು: ಸಂಬಂಧ; ನೆರೆ: ಬುಮ್ಫು; ಮಿಡುಕು: ಅಲುಗಾಟ, ಚಲನೆ; ಭೂಪ: ರಾಜ;

ಪದವಿಂಗಡಣೆ:
ಉಡಿದನ್+ಒಬ್ಬನು +ಗಜದ +ದಾಡೆಯ
ಮಡಿಯಲ್+ಅನುಗೈಸಿದನು +ಕರಿಯನು
ಹಿಡಿದವನು +ತಾನ್+ಇವನ್+ಅಘಾಟದ +ಸಿಡಿಲನ್+ಅಡಹಾಯ್ದು
ಒಡನೆ +ಬೊಬ್ಬಿಡುವನು +ಮಹಾಹವ
ತೊಡರಿಚುವರ್+ಇಲ್ಲಾ+ಎನುತ +ನೆರೆ
ಮಿಡುಕುವನು +ತಾನ್+ಈತನ್+ಎಂಬನು +ಭೂಪ +ಕೇಳೆಂದ

ಅಚ್ಚರಿ:
(೧) ಗಜ, ಕರಿ – ಸಮನಾರ್ಥಕ ಪದ
(೨) ಉಡಿ, ಮಡಿ, ಹಿಡಿ – ಪ್ರಾಸ ಪದಗಳು

ಪದ್ಯ ೬: ಕೌರವನು ಕರೆಸಿದ ಮಲ್ಲರ ಹೆಸರೇನು?

ಕರೆಸಿದನು ಜೀಮೂತ ಮಲ್ಲನ
ಕರೆಸಿದನು ಸಿಂಧೂರ ಮಲ್ಲನ
ಕರೆಸಿದನು ಜಗಜಟ್ಟಿ ಮಲ್ಲನ ವೀರ ದೇವುಲನ
ಕರೆಸಿದನು ಶಾರ್ದೂಲ ಮಲ್ಲನ
ಕರೆಸಿದನು ಗಜವೈರಿ ಮಲ್ಲನ
ಕರೆಸಿದನು ಶಾಕಂಬರೀಕನತುಳ ಭುಜಬಲನ (ವಿರಾಟ ಪರ್ವ, ೪ ಸಂಧಿ, ೬ ಪದ್ಯ)

ತಾತ್ಪರ್ಯ:
ಕೌರವನು ತನ್ನ ಗರಡಿಮನೆಯಿಂದ ಶ್ರೇಷ್ಠರಾದ ಜೀಮೂತ, ಸಿಂಧೂರ, ಜಗಜಟ್ಟಿ, ಶಾರ್ದೂಲ, ಗಜವೈರಿ, ಶಾಕಂಬರೀಕರೆಂಬ ಮಲ್ಲರನ್ನು ಕರೆಸಿದನು.

ಅರ್ಥ:
ಕರೆಸು: ಬರೆಮಾಡು; ಮಲ್ಲ: ಜಟ್ಟಿ; ಅತುಳ: ಶ್ರೇಷ್ಠ; ಭುಜಬಲ: ವೀರ, ಪರಾಕ್ರಮಿ;

ಪದವಿಂಗಡಣೆ:
ಕರೆಸಿದನು+ ಜೀಮೂತ +ಮಲ್ಲನ
ಕರೆಸಿದನು +ಸಿಂಧೂರ +ಮಲ್ಲನ
ಕರೆಸಿದನು +ಜಗಜಟ್ಟಿ +ಮಲ್ಲನ +ವೀರ +ದೇವುಲನ
ಕರೆಸಿದನು +ಶಾರ್ದೂಲ +ಮಲ್ಲನ
ಕರೆಸಿದನು +ಗಜವೈರಿ+ ಮಲ್ಲನ
ಕರೆಸಿದನು +ಶಾಕಂಬರೀಕನ್+ಅತುಳ +ಭುಜಬಲನ

ಅಚ್ಚರಿ:
(೧) ಕರೆಸಿದನು – ೧-೬ ಸಾಲಿನ ಮೊದಲ ಪದ
(೨) ವೀರ, ಅತುಳ ಭುಜಬಲ – ಸಮನಾರ್ಥಕ ಪದಗಳು

ಪದ್ಯ ೫: ದುರ್ಯೋಧನನು ಏನೆಂದು ಯೋಚಿಸಿದನು?

ಕಳುಹೆ ಮಲ್ಲರ ಭೀಮನಿದ್ದರೆ
ಉಳಿಯಲೀಯನು ಮತ್ತೆ ಪಾಂಡವ
ರುಳಿವು ತಿಳಿದರೆ ಜಯಿಸಬಹುದೈಯೆಂದು ಚಿಂತಿಸುತ
ತಿಳುಹಿದನು ಭೀಷ್ಮಂಗೆ ದ್ರೋಣಗೆ
ನಲವು ಮಿಗೆ ಹರುಷದಲಿ ದೂತರ
ಕಳುಹಿ ಕರೆಸಿದ ಮನೆಯ ಮಲ್ಲ ಕೌರವರರಾಯ (ವಿರಾಟ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಮಲ್ಲರನು ವಿರಾಟನಗರಿಗೆ ಕಳಿಸಿದರೆ, ಭೀಮನು ಅವರನ್ನು ಉಳಿಸುವುದಿಲ್ಲ. ಹಾಗಾದರೆ ಪಾಂಡವರು ಅಲ್ಲಿರುವರೆಂಬುದು ಖಚಿತವಾಗಿ ನಾವೇ ಜಯಶಾಲಿಗಳಾಗುತ್ತೇವೆ ಎಂದು ಯೋಚಿಸಿ ಭೀಷ್ಮ, ದ್ರೋಣರಿಗೆ ತಿಳಿಸಿ, ಕೌರವನು ಸಂತೋಷಗೊಂಡು ದೂತರನ್ನು ಕಳಿಸಿ ತನ್ನ ಗರಡಿಮನೆಯ ಮಲ್ಲರನ್ನು ಕರೆಸಿದನು.

ಅರ್ಥ:
ಕಳುಹು: ಕಳಿಸು, ತೆರಳು; ಮಲ್ಲ; ಜಟ್ಟಿ; ಉಳಿ: ಜೀವಿಸು; ಮತ್ತೆ: ಪುನಃ; ತಿಳಿ: ಗೊತ್ತುಪಡಿಸು, ಅರಿ; ಜಯಿಸು: ಗೆಲ್ಲು; ಚಿಂತಿಸು: ಯೋಚಿಸು; ನಲವು: ಸಂತೋಷ; ಮಿಗೆ: ಅಧಿಕ; ಹರುಷ: ಸಂತಸ; ದೂತ: ಚರ, ಸೇವಕ; ಕರೆಸು: ಬರೆಮಾಡು; ಮನೆ: ಆಲಯ; ರಾಯ: ರಾಜ;

ಪದವಿಂಗಡಣೆ:
ಕಳುಹೆ +ಮಲ್ಲರ +ಭೀಮನಿದ್ದರೆ
ಉಳಿಯಲೀಯನು +ಮತ್ತೆ +ಪಾಂಡವರ್
ಉಳಿವು+ ತಿಳಿದರೆ+ ಜಯಿಸಬಹುದೈ+ಎಂದು +ಚಿಂತಿಸುತ
ತಿಳುಹಿದನು+ ಭೀಷ್ಮಂಗೆ +ದ್ರೋಣಗೆ
ನಲವು +ಮಿಗೆ +ಹರುಷದಲಿ +ದೂತರ
ಕಳುಹಿ +ಕರೆಸಿದ +ಮನೆಯ +ಮಲ್ಲ +ಕೌರವರರಾಯ

ಅಚ್ಚರಿ:
(೧)ಗರಡಿಮನೆ ಎಂದು ಹೇಳಲು – ಮನೆಯ ಮಲ್ಲ
(೨) ಕೌರವನ ಯೋಚನೆ – ಭೀಮನಿದ್ದರೆ ಉಳಿಯಲೀಯನು

ಪದ್ಯ ೪: ದುರ್ಯೋಧನನ ಪ್ರಕಾರ ಯಾರು ಕೀಚಕನನ್ನು ಕೊಂದರು?

ದೇವಲೋಕದ ಸತಿಗೆ ಮರ್ತ್ಯರೊ
ಳಾವ ಹೋಲಿಕೆಯುಂಟು ಮಡುಹಲ
ದಾವ ವೀರನೊ ಕಾಣೆ ಕೀಚಕನತುಳ ಭುಜಬಲನು
ಭಾವಿಸಲು ಪಾಂಡವರ ಸತಿಯನು
ಭಾವಜನ ಕೇಳಿಯಲಿ ಬಯಸಲು
ಪಾವಮಾನಿಯೆ ಕೊಂದ ನಿಶ್ಚಯವೆಂದನಾ ಭೂಪ (ವಿರಾಟ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ದೂತನ ಮಾತನ್ನು ಕೇಳಿದ ದುರ್ಯೋಧನನು, ದೇವಲೋಕದ ಗಂಧವರ ಸತಿಗೂ ಮನುಷ್ಯರಿಗೂ ಎಲ್ಲಿಯ ಸಂಬಂಧ, ಕೀಚಕನು ಮಹಾಪರಾಕ್ರಮಶಾಲಿ, ಕೀಚಕನು ಕಾಮ ಪೀಡಿತನಾಗಿ ದ್ರೌಪದಿಯನ್ನು ಬಯಸಲು, ಭೀಮನೇ ಅವನನ್ನು ಕೊಂದಿರಬೇಕು ಇದು ಸತ್ಯ ಎಂದು ದುರ್ಯೋಧನನು ಹೇಳಿದನು.

ಅರ್ಥ:
ದೇವಲೋಕ: ಸ್ವರ್ಗ; ಸತಿ: ಹೆಂಡತಿ; ಮರ್ತ್ಯ: ಮನುಷ್ಯ; ಹೋಲಿಕೆ: ಸಾದೃಶ್ಯ; ಮಡುಹು: ಕೊಲ್ಲು, ಸಾಯಿಸು; ವೀರ: ಪರಾಕ್ರಮಿ; ಅತುಳ: ಬಹಳ; ಭುಜಬಲ: ಪರಾಕ್ರಮಿ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಸತಿ: ಹೆಂಡತಿ; ಭಾವಜ: ಮನ್ಮಥ, ಕಾಮ, ಮದನ; ಕೇಳಿ: ಕ್ರೀಡೆ, ವಿನೋದ; ಬಯಸು: ಇಚ್ಛಿಸು; ಪಾವಮಾನಿ: ಭೀಮ; ಕೊಂದು: ಸಾಯಿಸು; ನಿಶ್ಚಯ: ನಿರ್ಧಾರ, ನಿಜ, ದೃಢ; ಭೂಪ: ರಾಜ;

ಪದವಿಂಗಡಣೆ:
ದೇವಲೋಕದ +ಸತಿಗೆ +ಮರ್ತ್ಯರೊಳ್
ಆವ +ಹೋಲಿಕೆಯುಂಟು +ಮಡುಹಲ್
ಅದಾವ +ವೀರನೊ +ಕಾಣೆ +ಕೀಚಕನ್+ಅತುಳ +ಭುಜಬಲನು
ಭಾವಿಸಲು +ಪಾಂಡವರ+ ಸತಿಯನು
ಭಾವಜನ +ಕೇಳಿಯಲಿ +ಬಯಸಲು
ಪಾವಮಾನಿಯೆ +ಕೊಂದ +ನಿಶ್ಚಯವೆಂದನಾ +ಭೂಪ

ಅಚ್ಚರಿ:
(೧) ಮನ್ಮಥನನ್ನು ಭಾವಜ, ಭೀಮನನ್ನು ಪಾವಮಾನಿ ಎಂದು ಕರೆದಿರುವುದು